ಈ ವರ್ಷ ಭಾರತದಲ್ಲಿ ಜನರು ಅತ್ಯಂತ ಹೆಚ್ಚು ಸವಿದ ಖಾದ್ಯಗಳು ಇವು

Update: 2017-12-24 13:58 GMT

ಹೊಸದಿಲ್ಲಿ, ಡಿ,24: ಈ ವರ್ಷ ಭಾರತೀಯರು ಅತ್ಯಂತ ಹೆಚ್ಚು ಸವಿದ ಖಾದ್ಯಗಳ ಪಟ್ಟಿಯನ್ನು ಫುಡ್ ಡೆಲಿವರಿ ಸರ್ವಿಸ್ ‘ಸ್ವಿಗ್ಗಿ’ ಬಿಡುಗಡೆ ಮಾಡಿದೆ. ಭಾರತೀಯರು ಖಾದ್ಯ ಪ್ರಿಯರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ವಿವಿಧ ಧರ್ಮ. ಸಂಸ್ಕೃತಿ,ಆಚಾರ-ವಿಚಾರಗಳೊಂದಿಗೆ ದೇಶದ ವಿವಿಧೆಡೆ ವೈವಿಧ್ಯಮಯ, ವಿಶಿಷ್ಟ ಆಹಾರಗಳು, ತಿಂಡಿ ತಿನಿಸುಗಳಿವೆ.

2017ರಲ್ಲಿ ಭಾರತೀಯರ ಮೆಚ್ಚಿನ ಆಹಾರವಾಗಿ ಚಿಕನ್ ಬಿರಿಯಾನಿ ‘ಸ್ವಿಗ್ಗಿ’ಯ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ. ಈ ವರ್ಷ ಅತೀ ಹೆಚ್ಚು ಆರ್ಡರ್ ಮಾಡಲ್ಪಟ್ಟ ಆಹಾರದಲ್ಲೂ ಚಿಕನ್ ಬಿರಿಯಾನಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಭಾರತದ ಆಹಾರ ಮಸಾಲ ದೋಸೆ, ತಂದೂರಿ ರೋಟಿ ಹಾಗು ಪನೀರ್ ಬಟರ್ ಮಸಾಲಾ ಇದೆ.

ತಡ ರಾತ್ರಿಯ ಆರ್ಡರ್, ಕುರುಕಲು ತಿಂಡಿಗಳು, ಆರೋಗ್ಯಕರ ಹಾಗು ಅಂತಾರಾಷ್ಟ್ರೀಯ ತಿನಿಸು ಹೀಗೆ ವಿವಿಧ ವಿಭಾಗಗಳಲ್ಲಿ ಬೆಂಗಳೂರು, ಮುಂಬೈ, ದಿಲ್ಲಿ, ಹೈದರಾಬಾದ್, ಕೊಲ್ಕತ್ತಾ, ಚೆನ್ನೈ ಹಾಗು ಪುಣೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.

ಬ್ರೇಕ್ ಫಾಸ್ಟ್ ಆಹಾರಗಳಲ್ಲಿ ಮಸಾಲ ದೋಸೆ, ಇಡ್ಲಿ ಹಾಗು ವಡೆ ಮೊದಲ ಪ್ರಾಶಸ್ತ್ಯ ಗಳಿಸಿದೆ. ಮಧ್ಯಾಹ್ನದ ಹಾಗು ರಾತ್ರಿಯ ಆಹಾರಗಳಲ್ಲಿ ಬಿರಿಯಾನಿ, ಪನೀರ್ ಬಟರ್ ಮಸಾಲಾ ಹಾಗು ಮಸಾಲ ದೋಸೆ, ದಾಲ್ ಮಖಾನಿ ಹಾಗು ಚಿಕನ್ ಫ್ರೈಡ್ ರೈಸ್ ಜನರು ಮೊದಲ ಆದ್ಯತೆ ನೀಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಸಂಜೆ ಸಮಯದ ಆಹಾರಗಳಲ್ಲಿ ಪಾವ್ ಭಾಜಿ, ಫ್ರೆಂಚ್ ಫ್ರೈಸ್, ಸಮೋಸಾ, ಚಿಕನ್ ರೋಲ್, ಚಿಕನ್ ಬರ್ಗರ್ ಹಾಗು ಭೇಲ್ ಪುರಿ ಜನರ ಮೆಚ್ಚಿನ ಆಹಾರಗಳಾಗಿವೆ. ತಡರಾತ್ರಿಯ ಆರ್ಡರ್ ಗಳಲ್ಲಿ ಚಿಕನ್ ಬಿರಿಯಾನಿ, ಫ್ರೆಂಚ್ ಫ್ರೈಸ್, ಬಟರ್ ಚಿಕನ್ ಜನರ ಮೆಚ್ಚುಗೆ ಗಳಿಸಿದೆ.

ಕುತೂಹಲಕಾರಿ ಅಂಶವೆಂದರೆ ಪಿಝ್ಝಾ ಟಾಪ್ ಫೈವ್ ಪಟ್ಟಿಯಲ್ಲಿ ಯಾವುದೇ ಸ್ಥಾನ ಪಡೆದಿಲ್ಲ. ಆದರೆ ಅತೀ ಹೆಚ್ಚು ಹುಡುಕಲಾದ ತಿನಿಸುಗಳಲ್ಲಿ ಮೊದಲ ಸ್ಥಾನದಲ್ಲಿದೆ.

ಮುಂಬೈಯ ಜನರು ಪಾವ್ ಭಾಜಿಯನ್ನು, ದಿಲ್ಲಿ ನಿವಾಸಿಗಳು ದಾಲ್ ಮಖಾನಿ ಹಾಗು ನಾನ್, ಹೈದರಾಬಾದ್ ನ ಜನರು ಬಿರಿಯಾನಿ ಹಾಗು ಬೆಂಗಳೂರಿಗರು ದಕ್ಷಿಣ ಭಾರತದ ಆಹಾರಗಳನ್ನು ಮೆಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News