×
Ad

ಅಮೆರಿಕದ ಮಾದರಿ ಅನುಸರಿಸಲು ಮುಂದಾದ ಗ್ವಾಟೆಮಾಲ: ರಾಯಭಾರ ಕಚೇರಿ ಜೆರುಸಲೇಮ್‌ಗೆ

Update: 2017-12-25 21:39 IST

ಗ್ವಾಟೆಮಾಲ ಸಿಟಿ, ಡಿ. 25: ಅಮೆರಿಕದ ಮಾದರಿಯನ್ನು ಅನುಸರಿಸಿರುವ ಗ್ವಾಟೆಮಾಲ ದೇಶ, ತನ್ನ ಇಸ್ರೇಲ್ ರಾಯಭಾರ ಕಚೇರಿಯನ್ನು ಜೆರುಸಲೇಮ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ.

ಈ ವಿಷಯವನ್ನು ಗ್ವಾಟೆಮಾಲ ಅಧ್ಯಕ್ಷ ಜಿಮ್ಮಿ ಮೊರಾಲ್ಸ್ ರವಿವಾರ ಪ್ರಕಟಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತುಕತೆ ನಡೆಸಿದ ಬಳಿಕ, ಮೊರಾಲ್ಸ್ ತನ್ನ ಫೇಸ್‌ಬುಕ್ ಪುಟದಲ್ಲಿ ಈ ಕುರಿತ ನಿರ್ಧಾರವನ್ನು ಜನತೆಯನ್ನುದ್ದೇಶಿಸಿ ಬರೆದಿದ್ದಾರೆ.

‘‘ಗ್ವಾಟೆಮಾಲ ರಾಯಭಾರ ಕಚೇರಿಯನ್ನು ಈಗ ಇರುವ ಟೆಲ್ ಅವೀವ್‌ನಿಂದ ಜೆರುಸಲೇಮ್‌ಗೆ ಸ್ಥಳಾಂತರಿಸುವುದು ಇಸ್ರೇಲ್ ಪ್ರಧಾನಿ ಜೊತೆ ತಾನು ನಡೆಸಿದ ಮಾತುಕತೆಗಳ ಒಂದು ಪ್ರಮುಖ ವಿಷಯವಾಗಿತ್ತು’’ ಎಂದು ಅವರು ಬರೆದಿದ್ದಾರೆ.

ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರವನ್ನು ವಿಶ್ವಸಂಸ್ಥೆ ಈಗಾಗಲೇ ಮೂರನೆ ಎರಡರಷ್ಟು ಬಹುಮತದಿಂದ ತಿರಸ್ಕರಿಸಿದೆ.

ವಿಶ್ವಸಂಸ್ಥೆಯ 193 ಸದಸ್ಯ ದೇಶಗಳ ಪೈಕಿ 128 ದೇಶಗಳು ಟ್ರಂಪ್ ನಿರ್ಧಾರವನ್ನು ತಿರಸ್ಕರಿಸುವ ನಿರ್ಣಯವನ್ನು ಬೆಂಬಲಿಸಿವೆ. ಫೆಲೆಸ್ತೀನ್ ಮತ್ತು ಇಸ್ರೇಲ್‌ಗಳ ನಡುವಿನ ಶಾಂತಿ ಮಾತುಕತೆಗಳ ಮೂಲಕ ಮಾತ್ರ ಜೆರುಸಲೇಮ್‌ನ ಸ್ಥಾನಮಾನವನ್ನು ನಿರ್ಧರಿಸಬಹುದಾಗಿದೆ ಎಂಬ ಅಂತಾರಾಷ್ಟ್ರೀಯ ಒಮ್ಮತವನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬುದಾಗಿ ವಿಶ್ವಸಂಸ್ಥೆಯ ನಿರ್ಣಯ ಕರೆ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News