ಜೆರುಸಲೇಮ್‌ನಿಂದ ಇಸ್ರೇಲ್ ಪ್ರಧಾನಿಯ ಕ್ರಿಸ್ಮಸ್ ಶುಭಾಶಯ
ಜೆರುಸಲೇಮ್, ಡಿ. 25: ಜೆರುಸಲೇಮ್‌ಗೆ ಯಾತ್ರೆ ಕೈಗೊಳ್ಳುವ ಕ್ರೈಸ್ತರಿಗೆ ತಾನು ಪ್ರವಾಸ ಮಾರ್ಗದರ್ಶಿಯಾಗುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಹೇಳಿದ್ದಾರೆ.
ಜೆರುಸಲೇಮನ್ನು ಇಸ್ರೇಲ್ ರಾಜಧಾನಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾನ್ಯ ಮಾಡಿರುವ ಹಿನ್ನೆಲೆಯಲ್ಲಿ ನೆತನ್ಯಾಹು ಜೆರುಸಲೇಮ್‌ನಿಂದ ಕ್ರೈಸ್ತರಿಗೆ ಈ ಸಂದೇಶ ಹೊರಡಿಸಿದ್ದಾರೆ.
ಆದರೆ, ಜೆರುಸಲೇಂ ಇಸ್ರೇಲ್ ರಾಜಧಾನಿಯಾಗುವ ಬಗ್ಗೆ ಜಾಗತಿಕ ಕ್ರೈಸ್ತ ಸಮುದಾಯ ಭಿನ್ನ ಅಭಿಪ್ರಾಯ ಹೊಂದಿದೆ. ಯಹೂದಿ, ಕ್ರೈಸ್ತ ಮತ್ತು ಮುಸ್ಲಿಮರ ಆರಾಧನಾಲಯಗಳಿಂದ ತುಂಬಿರುವ ಪೂರ್ವ ಜೆರುಸಲೇಮನ್ನು 1967ರ ಯುದ್ಧದಲ್ಲಿ ಇಸ್ರೇಲ್ ವಶಪಡಿಸಿಕೊಂಡಿತ್ತು. ಇದನ್ನು ಫೆಲೆಸ್ತೀನೀಯರು ತಮ್ಮ ಭವಿಷ್ಯದ ರಾಜಧಾನಿಯಾಗಿ ಪರಿಗಣಿಸಿದ್ದರು.
ಪೂರ್ವ ಜೆರುಸಲೇಮ್‌ನ ಹಿನ್ನೆಲೆಯೊಂದಿಗೆ ನೆತನ್ಯಾಹು ಅವರನ್ನು ತೋರಿಸುವ ಕ್ರಿಸ್ಮಸ್ ಮುನ್ನಾ ದಿನದ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಾಕಲಾಗಿದೆ.
‘‘2 ಶೇಕಡ ಇರುವ ಕ್ರೈಸ್ತ ಅಲ್ಪಸಂಖ್ಯಾತರಿಗೆ ಇಸ್ರೇಲ್ ಆಶ್ರಯಧಾಮವಾಗಿದೆ. ನನ್ನ ಹಿಂದೆ ಇರುವ ಪವಿತ್ರ ಸ್ಥಳಗಳಲ್ಲಿ ಪ್ರಾರ್ಥನೆ ನಡೆಸುವ ಪ್ರತಿಯೊಬ್ಬರ ಹಕ್ಕುಗಳನ್ನು ನಾವು ರಕ್ಷಿಸುತ್ತೇವೆ’’ ಎಂದು ‘ಇಸ್ರೇಲ್ ರಾಜಧಾನಿ ಜೆರುಸಲೇಮ್‌ನಿಂದ ಕ್ರಿಸ್ಮಸ್ ಶುಭಾಶಯಗಳು’ ಎಂಬ ಹೆಸರಿನ ಸಂದೇಶ ಹೇಳುತ್ತದೆ.
‘‘ನಿಮ್ಮಲ್ಲಿ ಇಸ್ರೇಲ್‌ಗೆ ಬರುವವರಿಗೆ, ಮಾಹಿತಿ ಭರಿತ ಯಾತ್ರೆಯನ್ನು ನಾನು ಒದಗಿಸುತ್ತೇನೆ. ವಾಸ್ತವವಾಗಿ, ಈ ಮಾಹಿತಿಭರಿತ ಪ್ರವಾಸದಲ್ಲಿ ನಾನೇ ನಿಮ್ಮ ಮಾರ್ಗದರ್ಶಿಯಾಗಿರುತ್ತೇನೆ’’ ಎಂದು ನೆತನ್ಯಾಹು ನುಡಿದರು.
ಈ ವ್ಯವಸ್ಥೆ ಮುಂದಿನ ಕ್ರಿಸ್ಮಸ್‌ನಿಂದ ಜಾರಿಗೆ ಬರುತ್ತದೆ ಎಂದರು.