ಶೌಚಾಲಯದ ಕಣ್ಣುಕುಕ್ಕುವ ಆದಾಯ!

Update: 2017-12-25 18:38 GMT

ಮರಾಠಿ ಸಿನೆಮಾಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ! 

ಮರಾಠಿ ಸಿನೆಮಾ ‘ದೇವಾ’ ಮತ್ತು ಗಚ್ಚೀ ಇವುಗಳಿಗೆ ಸಿನೆಮಾ ಥಿಯೇಟರ್‌ಗಳಲ್ಲಿ ಜಾಗ ಸಿಗದಿರುವ ಕಾರಣ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಬಿಸಿ ಕಾಣಿಸಿದೆ. ಈ ವಿಷಯವನ್ನು ಮುಂದಿಟ್ಟು ಮಹಾರಾಷ್ಟ್ರ ನವನಿರ್ಮಾಣ ಸೇನೆ, ಕಾಂಗ್ರೆಸ್ ಮತ್ತು ಬಾಲಿವುಡ್ ಜಗತ್ತಿನ ಖ್ಯಾತ ಕಲಾವಿದರು ಚರ್ಚೆಗೆ ಇಳಿದಿದ್ದಾರೆ. ಡಿಸೆಂಬರ್ 22 ರಂದು ‘ದೇವಾ’ ಮತ್ತು ‘ಗಚ್ಚೀ’ ಮರಾಠಿ ಸಿನೆಮಾ ಬಿಡುಗಡೆ ಆಗಿದೆ. ಇದರ ಜೊತೆ ಸಲ್ಮಾನ್ ಖಾನ್‌ರ ಹಿಂದಿ ಸಿನೆಮಾ ‘ಟೈಗರ್ ಜಿಂದಾ ಹೈ’ ಕೂಡಾ ರಿಲೀಸ್ ಆಗಿದೆ. ಸಲ್ಮಾನ್‌ರ ಸಿನೆಮಾದ ಕಾರಣದಿಂದಾಗಿ ಮರಾಠಿ ಸಿನೆಮಾಗಳಿಗೆ ಅನೇಕ ಥಿಯೇಟರ್ ಮಾಲಕರು ಥಿಯೇಟರ್ ನೀಡಲು ಒಪ್ಪಲಿಲ್ಲ. ‘ದೇವಾ’ ಸಿನೆಮಾ ನಿರ್ಮಾಪಕರು ಈ ವಿಷಯದ ಕುರಿತು ‘ಮನಸೇ’ ಅಧ್ಯಕ್ಷ ರಾಜ್ ಠಾಕ್ರೆಯವರಲ್ಲಿ ದೂರು ನೀಡಿದ್ದರು.

‘ಮಹಾರಾಷ್ಟ್ರ ನವನಿರ್ಮಾಣ್ ಚಿತ್ರಪಟ್ ಸೇನಾ’ (‘ಮನಸೇ’ಯ ಫಿಲ್ಮ್‌ವಿಂಗ್) ಅಧ್ಯಕ್ಷ ಅಮೇಯ್ ಖೋಪ್ಕರ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ‘ಮನಸೇ’ ಶೈಲಿಯಲ್ಲಿ ಆಂದೋಲನ ಮಾಡುವ ಬೆದರಿಕೆ ಹಾಕಿ ಸಿನೆಮಾ ಥಿಯೇಟರ್ ಮಾಲಕರನ್ನು ಎಚ್ಚರಿಸಿದರು. ಆನಂತರ ಈ ವಿಷಯದ ಬಗ್ಗೆ ಚರ್ಚೆ ಜೋರಾಯಿತು. ‘ಮನಸೇ’ ಅಧ್ಯಕ್ಷ ರಾಜ್‌ಠಾಕ್ರೆ ಅವರು ಮುಂಬೈಯ ಸಿನೆಮಾ ಹಾಲ್ ಮಾಲಕರಿಗೆ ಒಂದು ಪತ್ರ ಬರೆದು ಒಂದು ವೇಳೆ ಮರಾಠಿ ಫಿಲ್ಮ್ ದೇವಾಕ್ಕೆ ಪ್ರೈಮ್‌ಟೈಮ್‌ನಲ್ಲಿ ಥಿಯೇಟರ್ ನೀಡದಿದ್ದರೆ ಟೈಗರ್ ಜಿಂದಾ ಹೈ ಯಾವುದೇ ಸ್ಕ್ರೀನ್‌ನಲ್ಲಿ ತೋರಿಸಲು ಬಿಡಲಾರೆವು ಎಂದು ಎಚ್ಚರಿಕೆ ಇತ್ತರು. ‘‘ಮಹಾರಾಷ್ಟ್ರ ಸರಕಾರವು ಮರಾಠಿ ಸಿನೆಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಯಾವುದೇ ಹಿಂದಿ ಸಿನೆಮಾ ತೋರಿಸಲು ಬಿಡಲಾರೆವು.’’ ಎಂದಿದ್ದಾರೆ.

ಇತ್ತ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಅವರು ‘‘ಮರಾಠಿ ಫಿಲ್ಮ್‌ಗಳಿಗೆ ಬೆಂಬಲ ಸಿಗಬೇಕಿದೆ. ಆದರೆ ಸಿನೆಮಾ ಹಾಲ್ ಮಾಲಕರಿಗೆ ಬೆದರಿಕೆ ಹಾಕುವುದು ನಮಗೆ ಸ್ವೀಕಾರಾರ್ಹವಲ್ಲ. ಹೀಗಾಗಿ ಪೊಲೀಸರು ಥಿಯೇಟರ್‌ಗಳಿಗೆ ಸುರಕ್ಷೆ ನೀಡಬೇಕಾಗಿದೆ’’ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ ‘‘ಮರಾಠಿ ಸಿನೆಮಾ ನಿರ್ಮಾಪಕರದ್ದು ಬೀದಿವ್ಯಾಪಾರಿ - ಹಾಕರ್‌ಗಳ ಸ್ಥಿತಿ ಆಗಿದೆ’’ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ. ಈ ನಡುವೆ ನಟ ಅಕ್ಷಯ್ ಕುಮಾರ್ ಮರಾಠಿ ಫಿಲ್ಮ್‌ಗಳನ್ನು ನೋಡುವಂತೆ ಜನರನ್ನು ವಿನಂತಿಸಿದ್ದಾರೆ. ‘‘ಮಲ್ಟಿಪ್ಲೆಕ್ಸ್‌ಗಳಲ್ಲಿ ಮರಾಠಿ ಫಿಲ್ಮ್‌ಗಳನ್ನು ತೋರಿಸುವಂತೆ ಸರಕಾರ ಆದೇಶ ಹೊರಡಿಸಬೇಕು’’ ಎಂದು ನಾನಾ ಪಾಟೇಕರ್ ಪ್ರತಿಕ್ರಿಯಿಸಿದ್ದಾರೆ.

* * *

ಪಾಕಿಸ್ತಾನದ ಸಕ್ಕರೆಯಿಂದ ಮಹಾರಾಷ್ಟ್ರಕ್ಕೆ ಚಿಂತೆ
ಪಾಕಿಸ್ತಾನದಲ್ಲಿ ಸಕ್ಕರೆಯ ದಾಖಲೆ ಉತ್ಪಾದನೆಯಿಂದ ಮಹಾರಾಷ್ಟ್ರ ಕಿರಿಕಿರಿಗೊಂಡಿದೆ. ಯಾವುದೇ ಸ್ಥಿತಿಯಲ್ಲೂ ಪಾಕಿಸ್ತಾನದಿಂದ ಸಕ್ಕರೆ ಭಾರತಕ್ಕೆ ಬರಬಾರದು. ಬಂದರೆ ಇಲ್ಲಿನ ಸಕ್ಕರೆ ಉತ್ಪಾದಕರು ತೀವ್ರ ಸಂಕಷ್ಟಕ್ಕೀಡಾಗುತ್ತಾರೆ ಹಾಗೂ ಇಲ್ಲಿನ ಕಾರ್ಖಾನೆಗಳು ಬಾಗಿಲು ಹಾಕಬಹುದು ಎಂಬ ಹೇಳಿಕೆಗಳು ಬರುತ್ತಿವೆ. ಹೀಗಾಗಿ ಕೇಂದ್ರ ಸರಕಾರವು ಸಕ್ಕರೆ ಆಮದಿನ ಮೇಲೆ ಶುಲ್ಕ ಹೆಚ್ಚಿಸಬೇಕು ಎಂದು ವಿಧಾನ ಸಭೆಯಲ್ಲಿ ಚರ್ಚೆ ಎದ್ದಿದೆ.

ಎನ್‌ಸಿಪಿ ಶಾಸಕ ಅಜಿತ್ ಪವಾರ್ ಹೇಳುವಂತೆ ಪಾಕಿಸ್ತಾನದಲ್ಲಿ ಈ ವರ್ಷ 15 ಲಕ್ಷ ಟನ್‌ಗೂ ಹೆಚ್ಚಿನ ಸಕ್ಕರೆಯ ಉತ್ಪಾದನೆ ಆಗಿದೆ. ಪಾಕಿಸ್ತಾನ ಈ ಸಕ್ಕರೆಯನ್ನು ರಫ್ತು ಮಾಡಲಿದೆ ಹಾಗೂ ತುಂಬಾ ರಿಯಾಯಿತಿ ದರವನ್ನೂ ನೀಡುತ್ತಿದೆ. ಪಾಕಿಸ್ತಾನದಿಂದ ಸಕ್ಕರೆ ಒಂದು ವೇಳೆ ಭಾರತಕ್ಕೆ ಬಂದರೆ ಇದರಿಂದ ಇಲ್ಲಿನ ಸಕ್ಕರೆ ಉದ್ಯೋಗಕ್ಕೆ ಭಾರೀ ಹೊಡೆತ ಬೀಳಲಿದೆ. ಮೂರು ವರ್ಷದ ನಂತರ ಉತ್ತಮ ಮಳೆ ಬಿದ್ದಿದೆ. ಇದರಿಂದ ಈ ವರ್ಷ ಕಬ್ಬು ಬೆಳೆ ತುಂಬಾ ಚೆನ್ನಾಗಿ ಬೆಳೆದಿದೆ. ಮುಂದಿನ ವರ್ಷ ಇದಕ್ಕಿಂತಲೂ ಚೆನ್ನಾಗಿ ಬೆಳೆ ಬರಲಿದೆ. ಇದೀಗ ಸಕ್ಕರೆ ಬೆಲೆ ಕ್ವಿಂಟಾಲ್‌ಗೆ 3,600ರಿಂದ 3,100 ಕ್ಕೆ ಇಳಿದಿದೆ. ಹೀಗಾಗಿ ಪಾಕಿಸ್ತಾನದಿಂದ ಸಕ್ಕರೆ ಆಮದು ಮಾಡಿದರೆ ಮಹಾರಾಷ್ಟ್ರದ ಜೊತೆ ಭಾರತದ ಅನ್ಯ ರಾಜ್ಯಗಳ ಸಕ್ಕರೆ ಉತ್ಪಾದಕರೂ ಕಷ್ಟಕ್ಕೆ ಸಿಲುಕಲಿದ್ದಾರೆ ಹಾಗೂ ರೈತರು ತೀವ್ರ ಸಂಕಷ್ಟ ಪಡುವರು ಎಂದು ಶಾಸಕರು ಹೇಳುತ್ತಿದ್ದಾರೆ.

* * *

ಯೆವೂರ್‌ನಲ್ಲಿ ಹೊಸವರ್ಷದ ಪಾರ್ಟಿಗಳಿಗೆ ನಿಷೇಧ
ಹೊಸವರ್ಷ ಬರುತ್ತಲೇ ಮಹಾನಗರದ ಪರಿಸರಕ್ಕೆ ನೂತನ ಕಳೆ ಬರುತ್ತದೆ. ಥಾಣೆ ನಗರದ ಯೆವೂರ್ ಪರಿಸರ ಪಾರ್ಟಿ ಆಯೋಜಿಸುವುದಕ್ಕೆ ವರ್ಷವಿಡೀ ಸುದ್ದಿ ಮಾಡುತ್ತದೆ. ಇದು ನೇಷನಲ್ ಪಾರ್ಕ್‌ಗೆ ತಾಗಿಕೊಂಡಿದೆ. ಡಿಸೆಂಬರ್ 31ರ ಇಲ್ಲಿಯ ಪಾರ್ಟಿಗಳು ಮುಂಬೈ ನಗರದ ಅಕ್ಕಪಕ್ಕದ ಎಲ್ಲಾ ಶಹರಗಳನ್ನೂ ಮೀರಿಸುತ್ತದೆ. ಅಲ್ಲಿ ಬಂಗ್ಲೆಗಳನ್ನೇ ಪಾರ್ಟಿ ಆಯೋಜಕರು ಬಾಡಿಗೆಗೆ ಪಡೆಯುತ್ತಾರೆ.

ಆದರೆ ಈ ಬಾರಿ ಬಂಗ್ಲೆ ಮಾಲಕರಿಗೆ ವರ್ತಕ್‌ನಗರ ಪೊಲೀಸರು ನೋಟಿಸ್ ನೀಡಿ ಬಂಗ್ಲೆಗಳನ್ನು ಡಿ.31ರ ಪಾರ್ಟಿಗಳಿಗೆ ನೀಡದಂತೆ ಸೂಚಿಸಿದ್ದಾರೆ. ಹೀಗಾಗಿ ಈ ವರ್ಷ ಯೆವೂರ್‌ನಲ್ಲಿ ಪಾರ್ಟಿ ಆಯೋಜಿಸುವವರು ನಿರಾಶೆ ಅನುಭವಿಸಲಿದ್ದಾರೆ. ಯಾರಾದರೂ ಬಂಗ್ಲೆಗಳನ್ನು ಬಾಡಿಗೆಗೆ ನೀಡಿದರೆ ಅಂತಹವರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸಲಾಗುವುದು ಹಾಗೂ ಜೈಲಿಗೂ ಕಳುಹಿಸಲಾಗುವುದು ಎಂದು ಅದರಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಯೆವೂರ್ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ತಾಗಿಕೊಂಡ ಪರಿಸರ ಆಗಿದೆ. ಇದನ್ನು ಇಕೋ ಸೆನ್ಸಿಟಿವ್ ವಲಯವೆಂದು ಘೋಷಿಸಲಾಗಿದೆ. ಈಗಾಗಲೇ ಪೊಲೀಸರ ವತಿಯಿಂದ ಇಲ್ಲಿನ 75 ಹೊಟೇಲುಗಳು ಮತ್ತು ಬಂಗ್ಲೆಗಳಿಗೆ ನೋಟಿಸ್ ನೀಡಲಾಗಿದೆ.

ಪ್ರತೀವರ್ಷ ಯುವ ಜನತೆ ರೇವ್ ಪಾರ್ಟಿಗಳಿಗಾಗಿ ಯೆವೂರ್‌ನಲ್ಲಿ ಡಿಸೆಂಬರ್ 31 ರಂದು ಬಂಗ್ಲೆಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಇಲ್ಲಿ ಶರಾಬು ಮತ್ತು ಅಮಲು ಪದಾರ್ಥ ಸೇವನೆ, ಗಟ್ಟಿಯಾದ ಡೀಜೆ ಗೌಜಿ-ಗದ್ದಲಗಳ ಬಗ್ಗೆ ದೂರುಗಳು ಬರುತ್ತಿವೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಈಗಾಗಲೇ ಯೆವೂರ್ ಬೆಟ್ಟಗಳತ್ತ ಹೋಗುವ ವಾಹನಗಳಲ್ಲಿ ಶರಾಬು, ಮಾದಕ ಪದಾರ್ಥಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಯೆವೂರ್‌ನಲ್ಲಿರುವ ಹೊಟೇಲ್, ಬಂಗ್ಲೆ, ರೆಸಾರ್ಟ್‌ಗಳಲ್ಲಿ ಡಿ.31ರ ಡೀಜೆ, ಪಾರ್ಟಿಗಳಿಗೆ ನಿಷೇಧ ಹೇರಿದ್ದಾರೆ.

* * *

ಲೀಸ್‌ನಲ್ಲಿ ಬೆಸ್ಟ್ ಬಸ್‌ಗಳು

ನಿರಂತರ ನಷ್ಟದಲ್ಲಿ ಓಡುತ್ತಿರುವ ಮುಂಬೈ ಮಹಾನಗರ ಪಾಲಿಕೆಯ ಬೆಸ್ಟ್ ಬಸ್ ಆಡಳಿತವು ಈಗ ಲೀಸ್ ಮೇಲೆ ಬಸ್‌ಗಳನ್ನು ಪಡೆದು ಓಡಿಸಲು ಮುಂದಾಗಿದೆ. ಶೀಘ್ರವೇ ಬೆಸ್ಟ್ 225 ಬಸ್‌ಗಳನ್ನು ಲೀಸ್ ಮೇಲೆ ಪಡೆಯಲಿದೆ. ಇವುಗಳಲ್ಲಿ 100 ಮಿನಿ ಬಸ್‌ಗಳು ವಾತಾನುಕೂಲಿತ ವಾಗಿರುತ್ತವೆ. ಈ ಬಸ್ಸುಗಳಿಗಾಗಿ 305.95 ಕೋಟಿ ರೂಪಾಯಿಯ ಒಪ್ಪಂದವನ್ನ್ನು ಏಳು ವರ್ಷಗಳಿಗಾಗಿ ಮಾಡಲಾಗುತ್ತಿದೆ. ಮಿನಿ ಬಸ್‌ಗಳು ಟ್ರಾಫಿಕ್ ಹೆಚ್ಚು ಇರುವ ಸಂದರ್ಭಗಳಲ್ಲೂ ಸುಗಮವಾಗಿ ಓಡಬಲ್ಲುದು ಎಂದು ಬೆಸ್ಟ್‌ನ ತರ್ಕವಾಗಿದೆ. ಇಲ್ಲಿ ಬಸ್‌ಗಳ ಜೊತೆ ಗುತ್ತಿಗೆದಾರರು ಡ್ರೈವರ್‌ನ್ನು ಕೂಡಾ ನೀಡುವರು. ಈ ಬಸ್‌ಗಳ ರಿಪೇರಿ, ಮೇಲ್ವಿಚಾರಣೆ ಎಲ್ಲವೂ ಗುತ್ತಿಗೆದಾರರದ್ದೇ ಆಗಿದೆ.

ಎರಡು ಬಾರಿ ವಿಫಲವಾದ ನಂತರ ಮೂರನೇ ಬಾರಿ ಬೆಸ್ಟ್ ಆಡಳಿತಕ್ಕೆ ಮೂವರು ಗುತ್ತಿಗೆದಾರರ ರೇಟ್ ಸೂಚಿ ಸಿಕ್ಕಿದೆ. ಇದರಲ್ಲಿ ಲಾಭದ ಒಪ್ಪಂದವಿರುವಂತಹದ್ದು ಆಯ್ಕೆಯಾಗಿದೆ. ಇದಕ್ಕೆ ಬೆಸ್ಟ್ ಸಮಿತಿಯ ಮಂಜೂರು ನಿರೀಕ್ಷಿಸಲಾಗಿದೆ. ಬೆಸ್ಟ್ ಆಡಳಿತವು ಈಗ ರೂ. 2,500 ಕೋಟಿ ರೂಪಾಯಿ ನಷ್ಟದಲ್ಲಿ ನಡೆಯುತ್ತಿದೆ.

ಬೆಸ್ಟ್ ಸಮಿತಿಯಲ್ಲಿ ಶಿವಸೇನೆಯ ಆಡಳಿತವಿದೆ. ಬೆಸ್ಟ್‌ನ ಖಾಸಗೀಕರಣ ವಾಗುತ್ತದೆಯೆಂದು ಶಿವಸೇನೆ ಈ ಒಪ್ಪಂದವನ್ನು ವಿರೋಧಿಸಿದೆ. ಹಿಂದೊಮ್ಮೆ ಇದೇ ಕಾರಣದಿಂದಾಗಿ 50 ಮಿನಿ ಬಸ್‌ಗಳನ್ನು ಲೀಸ್‌ಗೆ ಪಡೆಯುವ ಪ್ರಸ್ತಾವ ರದ್ದುಗೊಂಡಿತ್ತು. ಹೀಗಾಗಿ ಹೊಸ ಪ್ರಸ್ತಾವಕ್ಕೆ ಯಾವ ಪ್ರತಿಕ್ರಿಯೆ ಸಿಗುವುದೋ ನೋಡಬೇಕು.

ಇತ್ತೀಚೆಗೆ ಮನಪಾ ಆಯುಕ್ತ ಅಜಯ್ ಮೆಹ್ತಾ ಅವರು ಸ್ಥಾಯಿ ಸಭೆಗೆ ಪತ್ರ ಬರೆದಿದ್ದು ಒಂದು ವೇಳೆ ಮನಪಾ ಆಡಳಿತ ನೀಡಿದ ಸಲಹೆಗಳು, ಶರ್ತಗಳನ್ನು ಒಪ್ಪದಿದ್ದರೆ ಬೆಸ್ಟ್ ಸಮಿತಿಯನ್ನು ವಜಾ ಮಾಡಿ ಆಡಳಿತವೇ ನಿಯುಕ್ತಿ ಮಾಡಲಿದೆ ಹಾಗೂ ಆಡಳಿತವೇ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುವುದು ಎಂದಿದ್ದಾರೆ.

* * *

ಶೌಚಾಲಯದ ಗುತ್ತಿಗೆ 85 ಲಕ್ಷ ರೂಪಾಯಿಗೆ!
‘ಗಂದಾ ಹೈ, ಪರ್ ದಂಧಾ ಹೈ’ ಬಾಲಿವುಡ್ ಫಿಲ್ಮ್‌ನ ಈ ಹಾಡಿನ ಸಾಲು ಮುಂಬೈಯ ರೈಲ್ವೆ ಸ್ಟೇಷನ್‌ನ ಶೌಚಾಲಯ ವ್ಯವಹಾರದಲ್ಲಿ ನಿಜವಾಗಿದೆ ಅನ್ನಬಹುದು. ಈ ದಿನಗಳಲ್ಲಿ ರೈಲ್ವೆ ಸ್ಟೇಷನ್‌ಗಳ ಟಾಯ್ಲೆಟ್ ಉಸ್ತುವಾರಿ ಹೊಸ ಬ್ಯುಸಿನೆಸ್ ಎನ್ನಿಸಿಕೊಳ್ಳುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಪರಿಸರದ ಶೌಚಾಲಯದ ಟೆಂಡರ್ ನೋಡಿದರೆ ಹೌಹಾರಿ ಬೀಳುವಂತಾಗಿದೆ.

ಸಾಮಾನ್ಯವಾಗಿ ರೈಲ್ವೆ ಸ್ಟೇಷನ್‌ಗಳ ಶೌಚಾಲಯದ ಸ್ವಚ್ಛತಾ ಕೆಲಸಕ್ಕಾಗಿ ಗುತ್ತಿಗೆದಾರರು 6ರಿಂದ 8ಲಕ್ಷ ರೂ. ಗುತ್ತಿಗೆ ನಿಲ್ಲುತ್ತಾರೆ. ಆದರೆ ಸಿಎಸ್‌ಎಂಟಿ ಇಲ್ಲಿನ ಶೌಚಾಲಯಕ್ಕೆ ಹಲವು ಪಟ್ಟು ಅಧಿಕ ಹಣ ಗುತ್ತಿಗೆಗೆ ನಿಂತಿರುವುದು ಆಶ್ಚರ್ಯ ತಂದಿದೆ. ಅರ್ಥಾತ್ 6 ಲಕ್ಷ ರೂಪಾಯಿಯ ಶೌಚಾಲಯ ಗುತ್ತಿಗೆಗೆ 85 ಲಕ್ಷ ರೂಪಾಯಿಗೆ ಗುತ್ತಿಗೆದಾರರು ನಿಂತಿದ್ದಾರೆ.

ಈ ರೈಲ್ವೆ ಸ್ಟೇಷನ್‌ನಲ್ಲಿ ಪ್ರತೀದಿನ 2.5ಲಕ್ಷ ಪ್ರಯಾಣಿಕರು ಆಗಮಿಸುತ್ತಾರೆ. ಸುಮಾರು 65ರಿಂದ 70 ಸಾವಿರ ಮಂದಿ ಇಲ್ಲಿ ಶೌಚಾಲಯ ಬಳಸುವುದರಿಂದ ಶೌಚಾಲಯ ಗುತ್ತಿಗೆದಾರರು ತಿಂಗಳಿಗೆ 18 ಲಕ್ಷ ರೂ. ತಿಂಗಳಿಗೆ ಸಂಪಾದಿಸಬಹುದಾಗಿದೆಯಂತೆ. ಫೆಬ್ರವರಿ 2018ರಲ್ಲಿ ಹೊಸ ಯೋಜನೆಯ ಅನ್ವಯ 10 ವರ್ಷದ ವರೆಗೆ ಗುತ್ತಿಗೆ ನೀಡಲಾಗುವುದು. ಹೊಸ ಗುತ್ತಿಗೆದಾರರು ಶೌಚಾಲಯದ ನವೀಕರಣದಿಂದ ಹಿಡಿದು ಅದರ ಮೇಲ್ವಿಚಾರಣೆಯವರೆಗೆ ಕೆಲಸವನ್ನು ನೋಡಿಕೊಳ್ಳಬೇಕಾಗಿದೆ.

ಇತ್ತೀಚೆಗೆ ನಡೆದ ಒಂದು ಸರ್ವೇಯ ಅನುಸಾರ ಮುಂಬೈ ರೈಲ್ವೆ ಸ್ಟೇಷನ್‌ಗಳ ಅಧಿಕಾಂಶ ಶೌಚಾಲಯ ಕೊಳಕಾಗಿದ್ದು, ದುರ್ವಾಸನೆ ಬರು ತ್ತಿವೆ. ರೈಲ್ವೆಯು ‘ಪೇ ಆ್ಯಂಡ್ ಯೂಸ್’ ಯೋಜನೆ ಆರಂಭಿಸಿದರೂ ಸ್ಥಿತಿ ಸುಧಾರಣೆ ಆಗಿಲ್ಲ. ಮುಂದಿನ ವರ್ಷ ಹೊಸ ಗುತ್ತಿಗೆದಾರರಿಗೆ ಶೌಚಾಲಯ ಒಪ್ಪಿಸಿ ಪರಿಸ್ಥಿತಿ ಸುಧಾರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News