×
Ad

ಕಾನೂನಿನ ಅನನುಸರಣೆ ತುಂಬಾ ದುಬಾರಿಯಾಗಲಿದೆ: ಕಾರ್ಪೋರೇಟ್ ಸಂಸ್ಥೆಗಳಿಗೆ ಸರಕಾರದ ಎಚ್ಚರಿಕೆ

Update: 2017-12-26 21:44 IST

ಹೊಸದಿಲ್ಲಿ,ಡಿ.26: ಕಾನೂನಿನ ಅನನುಸರಣೆಯು ತುಂಬಾ ದುಬಾರಿಯಾಗಲಿದೆ ಮತ್ತು ತಪ್ಪು ಉದ್ದೇಶಗಳಿಗಾಗಿ ಕಂಪನಿಗಳನ್ನು ಬಳಸಿಕೊಳ್ಳುವ ದುಸ್ಸಾಹಸವನ್ನು ಹತ್ತಿಕ್ಕಲು ಕಠಿಣ ಪ್ರತಿಬಂಧಗಳು ಇರಲಿವೆ ಎಂದು ಹೇಳುವ ಮೂಲಕ ಸರಕಾರವು ಕಾರ್ಪೊರೇಟ್ ಸಂಸ್ಥೆಗಳಿಗೆ ಕಠಿಣ ಸಂದೇಶವೊಂದನ್ನು ರವಾನಿಸಿದೆ.

ಅಕ್ರಮ ಹಣ ಹರಿವಿನ ವಿರುದ್ಧ ದಾಳಿಯನ್ನು ಮುಂದುವರಿಸಿರುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈಗಾಗಲೇ ಸುದೀರ್ಘ ಕಾಲದಿಂದ ನಿಷ್ಕ್ರಿಯವಾಗಿದ್ದ 2.24 ಲಕ್ಷಕ್ಕೂ ಅಧಿಕ ಕಂಪನಿಗಳನ್ನು ರದ್ದುಗೊಳಿಸಿದೆ ಮತ್ತು ಈ ಕಂಪನಿಗಳ ಮೂರು ಲಕ್ಷಕ್ಕೂ ಅಧಿಕ ನಿರ್ದೇಶಕರನ್ನು ಅನರ್ಹಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಇಂಜೇತಿ ಶ್ರೀನಿವಾಸ್ ಅವರು, ಶಾಸನಬದ್ಧ ವ್ಯವಹಾರಗಳಿಗಾಗಿ ನಿಯಮಗಳನ್ನು ಸರಳಗೊಳಿಸ ಲಾಗುತ್ತಿದೆ ಮತ್ತು ಅಕ್ರಮ ವ್ಯವಹಾರ ಚಟುವಟಿಕೆಗಳ ವಿರುದ್ಧ ಪ್ರತಿಬಂಧಗಳನ್ನು ಬಲಗೊಳಿಸಲಾಗುತ್ತಿದೆ ಎಂದರು.

ಕಾನೂನಿಗೆ ವಿಧೇಯವಾಗಿರುವುದು ತುಂಬ ಸುಲಭ ಮತ್ತು ಅವಿಧೇಯವಾಗಿರುವುದು ತುಂಬ ದುಬಾರಿಯಾಗಬೇಕು. ಅಕ್ರಮ ವ್ಯವಹಾರಗಳ ವಿರುದ್ಧ ಕಠಿಣ ಪ್ರತಿಬಂಧ ಗಳಿರಬೇಕು. ತಪ್ಪು ಉದ್ದೇಶಗಳಿಗಾಗಿ ಕಂಪೆನಿಗಳನ್ನು ಬಳಸುವ ಜನರಿಗೆ ಅದೊಂದು ದುಸ್ಸಾಹಸವಾಗಬೇಕು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಇಂಜೇತಿ ಹೇಳಿದರು.

 ಅಮಾನತುಗೊಂಡಿರುವ ಶೆಲ್ ಕಂಪನಿಗಳಿಗೆ ಸಂಬಂಧಿಸಿದಂತೆ ಪ್ರಗತಿಯಲ್ಲಿರುವ ಕ್ರಮಗಳ ಕುರಿತು ಅವರು, ಈ ಬಗ್ಗೆ ತ್ವರಿತ ತನಿಖೆಗಳು ನಡೆಯುತ್ತಿವೆ ಎಂದರು.

 ಸರಕಾರದ ಕಾರ್ಯಾಚರಣೆಯ ಬಿಸಿಯನ್ನು ಕೆಲವು ಪ್ರಾಮಾಣಿಕ ಕಂಪೆನಿಗಳೂ ಅನುಭವಿಸುತ್ತಿರುವುದನ್ನು ಗಮನಕ್ಕೆ ತಂದಾಗ ಇಂಜೇತಿ, ಅಮಾಯಕ ಕಂಪೆನಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತದೆ. ಆದರೆ ಇಂತಹ ಯಾವುದೇ ಬೃಹತ್ ಕಾರ್ಯಾಚರಣೆಯಲ್ಲಿ ಅದರೊಂದಿಗೆ ಗುರುತಿಸಿಕೊಂಡಿ ರುವ ಕೆಲವು ಹಾನಿಗಳಿರುವುದು ಸಹಜವಾಗಿದೆ ಎಂದು ಸಮಜಾಯಿಷಿ ನೀಡಿದರು.

ತಪ್ಪಿತಸ್ಥ ಕಂಪನಿಗಳು ತಮ್ಮ ವಿವರಗಳನ್ನು ಸಲ್ಲಿಸಲು ಮೂರು ತಿಂಗಳ ಅವಧಿಯ ಗವಾಕ್ಷಿಯೊಂದನ್ನು ಒದಗಿಸಲಾಗುವುದು, ಇದಕ್ಕಾಗಿ ಸಚಿವಾಲಯವು ವಿಳಂಬ ಕ್ಷಮಾದಾನ ಯೋಜನೆಗೆ ಚಾಲನೆ ನೀಡಲಿದ್ದು, ಇದು 2018,ಜ.1ರಿಂದ 2018,ಮಾ.31 ರವರೆಗೆ ಚಾಲ್ತಿಯಲ್ಲಿರಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News