ಈ ರಾಜ್ಯದಲ್ಲಿ ಕಾರಾಗೃಹದಲ್ಲೇ ಕೈದಿಗಳಿಗೆ ಆಧಾರ್ ನೋಂದಣಿ!
ತಿರುವನಂತಪುರ, ಡಿ. 27: ಕೇರಳದ ಕಾರಾಗೃಹದಲ್ಲಿರುವ ಕೈದಿಗಳಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ಪಡೆಯುವುದು ತುಂಬಾ ಸುಲಭವಾಗಿದೆ. ಕೈದಿಗಳು ಆಧಾರ್ ಕಾರ್ಡ್ ಪಡೆಯಲು ರಾಜ್ಯ ಕಾರಾಗೃಹ ಇಲಾಖೆ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ.
ಪ್ರಾಯ, ಇತರ ಸಾಮಾಜಿಕ ಅಡೆತಡೆ ಮೀರಿ ಎಲ್ಲರೂ ಆಧಾರ್ ಕಾರ್ಡ್ ಪಡೆಯಲು ಕೈದಿಗಳಿಗೂ ಆಧಾರ್ ಕಾರ್ಡ್ ಅನ್ನು ಇಲಾಖೆ ಕಡ್ಡಾಯಗೊಳಿಸಿದೆ. ಅದಕ್ಕಾಗಿ ಕಾರಾಗೃಹದಲ್ಲೇ ಆಧಾರ್ ನೋಂದಣಿ ಯೋಜನೆ ರೂಪಿಸಿದೆ.
ಆಧಾರ್ ಕಾರ್ಡ್ ಅಡಿಯಲ್ಲಿ ಎಲ್ಲ ಕೈದಿಗಳ ನಡುವೆ ಸಂಪರ್ಕ ರೂಪಿಸುವ ಉದ್ದೇಶವನ್ನು ಇದು ಹೊಂದಿದೆ ಎಂದು ಊಹಿಸಲಾಗಿದೆ. ಆರಂಭದಲ್ಲಿ 3,500 ಕೈದಿಗಳನ್ನು ಇದಕ್ಕೆ ಒಳಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಕಾರಾಗೃಹ ಇಲಾಖೆ ತಿಳಿಸಿದೆ.
ಕಾರಾಗೃಹ ಶಿಕ್ಷೆ ಪೂರ್ಣಗೊಳಿಸಿದ ಕೈದಿಗಳ ಮೇಲೆ ನಿಗಾ ಇರಿಸಲು ತಮ್ಮ ಡಾಟಾ ಬ್ಯಾಂಕ್‌ನಲ್ಲಿ ಕೈದಿಗಳ ಆಧಾರ್ ಸಂಖ್ಯೆ ಕಾಪಿಡುವ ಯೋಜನೆಯನ್ನು ಕೂಡ ಕಾರಾಗೃಹ ಅಧಿಕಾರಿಗಳು ಮಾಡುತ್ತಿದ್ದಾರೆ.
ಆಧಾರ್ ನೋಂದಣಿ ಯೋಜನೆಯನ್ನು ವಿವಿಧ ಕಾರಾಗೃಹಗಳಲ್ಲಿ ಈಗಾಗಲೇ ಅಸ್ತಿತ್ವಕ್ಕೆ ತರಲಾಗಿದೆ. ಕಳೆದ ಒಂದು ವಾರದಲ್ಲಿ ಪೂಜಾಪುರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ 27ಕ್ಕೂ ಅಧಿಕ ಕೈದಿಗಳು ಆಧಾರ್ ನೋಂದಣಿ ಮಾಡಿದ್ದಾರೆ.