ಸ್ವಯಂಘೋಷಿತ ದೇವಮಾನವನಿಗೆ ಥಳಿಸಿ ಪೋಲಿಸರಿಗೊಪ್ಪಿಸಿದ ಸ್ಥಳೀಯರು
ಮಥುರಾ(ಉ.ಪ್ರ),ಡಿ.27: ಮಹಾರಾಷ್ಟ್ರಕ್ಕೆ ಸೇರಿದ ತನ್ನಿಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರವೆಸಗಿದ್ದ ಆರೋಪದಲ್ಲಿ ಮಥುರಾ ಜಿಲ್ಲೆಯ ವೃಂದಾವನದಲ್ಲಿ ಸ್ವಘೋಷಿತ ದೇವಮಾನವನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಭಾಗವತ್ ಆಚಾರ್ಯ ವಾಸುದೇವ ಶಾಸ್ತ್ರಿ(32) ಬಂಧಿತ ಆರೋಪಿಯಾಗಿದ್ದು, ಸಂತ್ರಸ್ತ ಯುವತಿಯರನ್ನು ವೈದ್ಯಕೀಯ ತಪಾಸಣೆಗೆ ರವಾನಿಸಲಾಗಿದೆ ಎಂದು ಎಸ್‌ಪಿ ಶ್ರವಣ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಶಾಸ್ತ್ರಿ 19ರ ಹರೆಯದ ಈ ಇಬ್ಬರು ಯುವತಿಯರನ್ನು ಮೂರು ತಿಂಗಳ ಹಿಂದೆ ‘ಭಾಗವತ’ವನ್ನು ಕಲಿಸುವ ನೆಪದಲ್ಲಿ ಪುಣೆಯ ಅವರ ಸ್ವಗ್ರಾಮದಿಂದ ವೃಂದಾವನಕ್ಕೆ ಕರೆತಂದಿದ್ದ. ಅವರ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊ ತೆಗೆದಿದ್ದ ಆತ ಅವರನ್ನು ಬ್ಲಾಕ್‌ಮೇಲ್ ಮಾಡತೊಡಗಿದ್ದ, ಅವರ ಮೇಲೆ ಅತ್ಯಾಚಾರವೆಸಗುತ್ತಿದ್ದ. ಈ ದೌರ್ಜನ್ಯವನ್ನು ಮಹಿಳೆಯರು ಮೌನವಾಗಿ ಸಹಿಸಿಕೊಂಡಿದ್ದರು. ಅವರ ಪೈಕಿ ಓರ್ವಳು ತನ್ನ ಗ್ರಾಮಕ್ಕೆ ಮರಳಲು ಯತ್ನಿಸಿದ್ದಳಾದರೂ ಶಾಸ್ತ್ರಿಯ ಕೈಗೆ ಸಿಕ್ಕಿಬಿದ್ದಿದ್ದಳು ಮತ್ತು ಆತ ಇಬ್ಬರಿಗೂ ಬೆದರಿಕೆಯೊಡ್ಡಿದ್ದ ಎಂದು ಮಥುರಾದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ ಪ್ರತಿಭಾ ಶರ್ಮಾ ತಿಳಿಸಿದರು.
ಶಾಸ್ತ್ರಿ ಯುವತಿಯರನ್ನು ಮೋತಿಝೀಲ್ ಪ್ರದೇಶದ ಮನೆಯೊಂದರಲ್ಲಿ ಇರಿಸಿದ್ದು, ಮನೆಯ ಮಾಲಕಿ ದೃಷ್ಟಿಮಾಂದ್ಯತೆ ಹೊಂದಿದ್ದಾಳೆ. ಇದರ ದುರುಪಯೋಗ ಪಡೆದುಕೊಂಡಿದ್ದ ಆತ ರಾತ್ರಿ ವೇಳೆ ಅಲ್ಲಿಗೆ ಬಂದು ಹೋಗುತ್ತಿದ್ದ. ಶಾಸ್ತ್ರಿಯ ಚಟುವಟಿಕೆಗಳು ಸ್ಥಳೀಯರ ಗಮನಕ್ಕೆ ಬಂದಾಗ ಅವರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ ಎಂದರು.