ಐಷಾರಾಮಿ ಕಾರುಗಳ ಮೇಲಿನ ಜಿಎಸ್‌ಟಿ ಸೆಸ್ ಶೇ.25ಕ್ಕೇರಿಕೆ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
ಹೊಸದಿಲ್ಲಿ,ಡಿ.27: ಜಿಎಸ್‌ಟಿ ಜಾರಿಯ ಬಳಿಕ ಆದಾಯ ನಷ್ಟಕ್ಕಾಗಿ ರಾಜ್ಯಗಳಿಗೆ ಪರಿಹಾರ ನೀಡಲು ನಿಧಿಯನ್ನು ವರ್ಧಿಸುವ ಉದ್ದೇಶದಿಂದ ಐಷಾರಾಮಿ ಕಾರುಗಳ ಮೇಲಿನ ಜಿಎಸ್‌ಟಿ ಸೆಸ್ ಅನ್ನು ಶೇ.15ರಿಂದ ಶೇ.25ಕ್ಕೆ ಹೆಚ್ಚಿಸಲು ಮಸೂದೆಯೊಂದನ್ನು ಲೋಕಸಭೆಯು ಬುಧವಾರ ಅಂಗೀಕರಿಸಿತು.
ಜಾತ್ಯತೀತತೆ ಮತ್ತು ಸಂವಿಧಾನ ಕುರಿತು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಯ ಕುರಿತು ಪ್ರತಿಪಕ್ಷದ ಕೋಲಾಹಲದ ನಡುವೆಯೇ ಸದನವು ಜಿಎಸ್‌ಟಿ(ರಾಜ್ಯಗಳಿಗೆ ಪರಿಹಾರ) ತಿದ್ದುಪಡಿ ಮಸೂದೆ,2017ನ್ನು ಅಂಗೀಕರಿ ಸಿತು.
ಜಿಎಸ್‌ಟಿ ಮಂಡಳಿಯ ನಿರ್ಧಾರವನ್ನು ಜಾರಿಗೆ ತರಲು ಕಳೆದ ಸೆಪ್ಟೆಂಬರ್‌ನಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯ ಬದಲಾಗಿ ಈ ಮಸೂದೆಯನ್ನು ತರಲಾಗಿದೆ.
ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಸದಸ್ಯರು ಸ್ಯಾನಿಟರಿ ನ್ಯಾಪ್ಕಿನ್, ಕೃಷಿ ಉಪಕರಣಗಳು, ಕರಕುಶಲ ವಸ್ತುಗಳು, ಕೈಮಗ್ಗದ ಸರಕುಗಳು ಮತ್ತು ಕ್ರೀಡಾ ಸಾಮಗ್ರಿಗಳು ಸೇರಿದಂತೆ ವಿವಿಧ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಇಳಿಸುವಂತೆ ಆಗ್ರಹಿಸಿದರು.