ತ್ರಿವಳಿ ತಲಾಕ್ ಮಸೂದೆ ಕುರ್‌ಆನ್, ಸಂವಿಧಾನದ ವಿರುದ್ಧವಿದ್ದರೆ ಸ್ವೀಕಾರಾರ್ಹವಲ್ಲ : ಎಐಎಂಡಬ್ಲ್ಯುಪಿಎಲ್‌ಬಿ
ಹೊಸದಿಲ್ಲಿ, ಡಿ. 20: ಸಂಸತ್ತಿನಲ್ಲಿ ಗುರುವಾರ ಮಂಡಿತವಾಗಲಿರುವ ಪ್ರಸ್ತಾಪಿತ ತ್ರಿವಳಿ ತಲಾಕ್ ಮಸೂದೆ ಕುರ್‌ಆನ್ ಅಥವಾ ಸಂವಿಧಾನದೊಂದಿಗೆ ಹೊಂದಾಣಿಗೆ ಆಗದೇ ಇದ್ದಲ್ಲಿ ಸ್ಪೀಕಾರಾರ್ಹವಲ್ಲ ಎಂದು ಕೆಲವು ಮುಸ್ಲಿಂ ಮಹಿಳಾ ಸಂಘಟನೆಗಳು ಬುಧವಾರ ಹೇಳಿವೆ.
ನಿಕಾಹ್ (ವಿವಾಹ) ಒಂದು ಒಪ್ಪಂದ. ಆ ಒಪ್ಪಂದವನ್ನು ಮುರಿದವರಿಗೆ ಶಿಕ್ಷೆ ನೀಡಬೇಕು. ಆದಾಗ್ಯೂ, ಇದು (ಮಸೂದೆ) ಕುರ್‌ಆನ್ ಅಥವಾ ಸಂವಿಧಾನಕ್ಕೆ ಅನುಗುಣವಾಗಿ ಇಲ್ಲದೇ ಇದ್ದರೆ, ಯಾವುದೇ ಮುಸ್ಲಿಂ ಮಹಿಳೆ ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಡಬ್ಲುಪಿಎಲ್‌ಬಿ) ಅಧ್ಯಕ್ಷೆ ಶೈಸ್ಟಾ ಅಂಬರ್ ಹೇಳಿದ್ದಾರೆ.
“ಕರಡು ಮಸೂದೆಯನ್ನು ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ, ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯುಕ್ತಿಕ ಕಾನೂನು ಮಂಡಳಿ, ಜಮಾಅತ್ ಇಸ್ಲಾಮಿ, ಜಮಾಅತ್ ಉಲೇಮಾ-ಎ-ಹಿಂದ್ ಹಾಗೂ ಮಹಿಳೆಯರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳ ಪರಿಶೀಲನೆಗೆ ನೀಡುವಂತೆ ಕೋರಿ ನಾನು ಕಾನೂನು ಆಯೋಗಕ್ಕೆ ಪತ್ರ ರವಾನಿಸಿದ್ದೆ. ಅಗತ್ಯವಿದ್ದರೆ ಚರ್ಚೆ ನಡೆಸಬಹುದು ಎಂದು ಉತ್ತರ ನೀಡಿದ್ದರು. ಆದರೆ, ಅದು ನಡೆಯಲಾರದು” ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ವಿದ್ಯಮಾನಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿ ಕಾನೂನು ಮಂಡಳಿಯನ್ನು ಹೊಣೆಯಾಗಿಸಿದ ಅಂಬರ್, ತ್ರಿವಳಿ ತಲಾಕ್ ಬಗ್ಗೆ ಮಂಡಳಿ ಎಂದಿಗೂ ಗಂಭೀರವಾಗಿ ಚಿಂತಿಸಿಲ್ಲ. ಈಗ ತುಂಬಾ ವಿಳಂಬವಾಗಿದೆ ಎಂದರು.
ಕುಟುಂಬ ನ್ಯಾಯಾಲಯದ ಕಾಯ್ದೆಯಲ್ಲಿ ಕುಟುಂಬವನ್ನು ಸಂರಕ್ಷಿಸಿಕೊಳ್ಳುವ ಅವಕಾಶ ಇದೆ. ಆದರೆ, ಪ್ರಸ್ತಾಪಿತ ಮಸೂದೆ ಇಂತಹ ಅವಕಾಶ ನೀಡುವುದಿಲ್ಲ ಎಂದು ಮುಸ್ಲಿಂ ಮಹಿಳಾ ಲೀಗ್‌ನ ಅಧ್ಯಕ್ಷೆ ನೈಶ್ ಹಸನ್ ಹೇಳಿದ್ದಾರೆ.
ಈ ಮಸೂದೆ ಬಗ್ಗೆ ಆಕ್ಷೇಪಿಸಲು ತೃತೀಯ ಪಾರ್ಟಿಗೂ ಹಕ್ಕು ನೀಡಲಾಗಿದೆ. ಇದು ನ್ಯಾಯೋಚಿತವಲ್ಲ. ಈ ಮಸೂದೆ ಮಂಡನೆ ನಿಲ್ಲಿಸಬೇಕು ಹಾಗೂ ಸಂಕೀರ್ಣ ವಿಷಯಗಳ ಬಗ್ಗೆ ತುರ್ತಾಗಿ ಚರ್ಚೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಯಾವುದೇ ಚರ್ಚೆ ನಡೆಸದೆ ಮಸೂದೆ ಅಂಗೀಕರಿಸುವ ವಿರುದ್ಧ ನಾವು ಪ್ರತಿಭಟನೆ ನಡೆಸಲಿದ್ದೇವೆ ಎಂದು ಹಸನ್ ಹೇಳಿದ್ದಾರೆ.