ಕುಲಭೂಷಣ್ ಜಾದವ್ ಬಗ್ಗೆ ಎಸ್ಪಿ ಶಾಸಕನ ವಿವಾದಾತ್ಮಕ ಹೇಳಿಕೆ

Update: 2017-12-27 17:00 GMT

ಹೊಸದಿಲ್ಲಿ, ಡಿ. 20: ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಕುರಿತು ಸಮಾಜವಾದಿ ಪಕ್ಷದ ಶಾಸಕ ನರೇಶ್ ಅಗರ್‌ವಾಲ್ ಅವರ ಹೇಳಿಕೆ ವಿವಾದದ ಕಿಡಿ ಹಚ್ಚಿದೆ.

“ಒಂದು ವೇಳೆ ಅವರು (ಪಾಕಿಸ್ತಾನ) ಅವರ ದೇಶದಲ್ಲಿ ಕುಲಭೂಷಣ್ ಜಾಧವ್ ರನ್ನು ಭಯೋತ್ಪಾದಕ ಎಂದು ಪರಿಗಣಿಸುವುದಾದರೆ, ಹಾಗೇ ಪರಿಗಣಿಸಲಿ. ನಾವು ಕೂಡ ನಮ್ಮ ದೇಶದಲ್ಲಿ ಇದೇ ರೀತಿ ಭಯೋತ್ಪಾದಕನೆಂದೇ ಪರಿಗಣಿಸುತ್ತೇವೆ” ಎಂದು ಅವರು ಬುಧವಾರ ಬೆಳಗ್ಗೆ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳು ಕುಲಭೂಷಣ್ ಜಾಧವ್ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತವೆ. ಇತರ ಅನೇಕ ಕೈದಿಗಳು ಪಾಕಿಸ್ತಾನದ ಕಾರಾಗೃಹದಲ್ಲಿ ಇದ್ದಾರೆ. ಅವರ ಬಗ್ಗೆ ಮಾಧ್ಯಮಗಳು ಯಾಕೆ ಗಮನ ಹರಿಸುತ್ತಿಲ್ಲ ? ಎಂದು ಅಗರ್‌ವಾಲ್ ಪ್ರಶ್ನಿಸಿದ್ದಾರೆ.

 ಅಗರ್‌ವಾಲ್ ಅವರ ಹೇಳಿಕೆ ವಿವಿಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ‘‘ಇದು ದುರದೃಷ್ಟಕರ ಹೇಳಿಕೆ. ಭಾರತೀಯ ನಾಗರಿಕ ಮಾತನಾಡುವ ರೀತಿಯೇ ಇದು? ವಿರೋಧ ಪಕ್ಷವಾಗಿ ಅವರು ಸರಕಾರದ ವಿರುದ್ಧ ಪ್ರತಿಭಟಿಸಬಹುದು. ಆದರೆ, ಇದು ದೇಶದ ವಿರುದ್ಧ ಪ್ರತಿಭಟನೆ’’ ಎಂದು ಕೇಂದ್ರ ಸಚಿವ ಹನ್ಸ್‌ರಾಜ್ ಅಹಿರ್ ಹೇಳಿದ್ದಾರೆ.

 ಹೇಳಿಕೆ ಕುರಿತು ಅಗರ್‌ವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಆಡಳಿತಾರೂಢ ಬಿಜೆಪಿಯ ಜಿವಿಎಲ್ ನರಸಿಂಹ ರಾವ್, ಅಗರ್‌ವಾಲ್ ರಾಷ್ಟ್ರ ಹಿತಾಸಕ್ತಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News