ಕುಲಭೂಷಣ್ ರಿಗೆ ತಾಯಿ, ಪತ್ನಿಯನ್ನು ವಿಧವೆಯರಂತೆ ತೋರಿಸಿದ ಪಾಕ್

Update: 2017-12-28 09:07 GMT

ಹೊಸದಿಲ್ಲಿ, ಡಿ.28: ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ತೆರಳಿದ್ದ ಅವರ ತಾಯಿ ಮತ್ತು ಪತ್ನಿಯೊಂದಿಗೆ ಪಾಕ್ ಅಮಾನವೀಯವಾಗಿ ವರ್ತಿಸಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ಇಂದು ಹೇಳಿಕೆ ನೀಡಿದ್ದಾರೆ.

ಕುಲಭೂಷಣ್ ಭೇಟಿಯನ್ನು ಪಾಕ್ ಪ್ರಚಾರಕ್ಕೆ ಬಳಸಿತ್ತು. ಭೇಟಿಗೆ ಮೊದಲು ಅವರ ತಾಯಿ ಮತ್ತು ಪತ್ನಿ ಅವರ ಬಟ್ಟೆ ಬದಲಾಯಿಸಲು ಸೂಚಿಸಿತ್ತು. ಮಾಂಗಲ್ಯ, ಬಿಂದಿ ಮತ್ತು ಬಳೆಯನ್ನು ತೆಗೆಸಿ ಇಬ್ಬರು ಮಹಿಳೆಯರನ್ನು ವಿಧವೆಯರಂತೆ ತೋರಿಸಿದೆ ಎಂದು ಸುಷ್ಮಾ ಹೇಳಿದರು.

ತನ್ನ ಸ್ಥಿತಿಯನ್ನು ನೋಡಿದ ಕುಲಭೂಷಣ್ ಗಾಬರಿಗೊಂಡು "ಅಪ್ಪ ಹೇಗಿದ್ದಾರೆಂದು" ಪ್ರಶ್ನಿಸಿರುವುದಾಗಿ ಕುಲಭೂಷಣ್ ತಾಯಿ ಅವಂತಿ ತಿಳಿಸಿರುವುದಾಗಿ ಸಚಿವೆ ಸುಷ್ಮಾ ಸ್ವರಾಜ್  ಮಾಹಿತಿ ನೀಡಿದರು.

ಭೇಟಿಯ ವೇಳೆ ಪಾಕ್ ನ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದರು. ಅವಂತಿ ಅವರ ಅಭಿಪ್ರಾಯ ಪ್ರಕಾರ ಕುಲ್ ಭೂಷಣ್ ಒತ್ತಡಕ್ಕೊಳಗಾಗಿದ್ದಾರೆ. ಅವರನ್ನು ಪಾಕಿಸ್ತಾನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಕುಲಭೂಷಣ್ ವಿಚಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದವರು ಹೇಳಿದರು.

"ಬಾಬಾ (ತಂದೆ) ಹೇಗಿದ್ದಾರೆ ಎಂದು ಕುಲಭೂಷಣ್ ತನ್ನನ್ನು ನೋಡಿದ ಕೂಡಲೇ ಕೇಳಿದ ಮೊದಲ ಪ್ರಶ್ನೆಯಾಗಿತ್ತು ಎಂದು ಹೇಳುವಾಗ ಅವಂತಿ ಜಾಧವ್ ಬಿಕ್ಕಳಿಸಿದ್ದರು. ನನ್ನನ್ನು ಈ ರೀತಿ ನೋಡಿ ಆತ ಏನೋ ಕೆಟ್ಟದ್ದು ನಡೆದಿದೆ ಎಂದುಕೊಂಡಿದ್ದ. ಆದರೆ ಪತ್ನಿ ಕೂಡ ಅದೇ ರೀತಿ ಕಂಡಿದ್ದರಿಂದ ಆತನಿಗೆ ಸಮಾಧಾನವಾಯಿತು ಎಂದು ಅವಂತಿ  ಹೇಳಿದರು'' ಎಂದು ಸುಷ್ಮಾ ಎರಡೂ ಸದನಗಳಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಪ್ಪತ್ತೆರಡು ತಿಂಗಳು ನಂತರ ತಾಯಿ ಮತ್ತು ಮಗನ ಹಾಗೂ ಪತಿ ಮತ್ತು ಪತ್ನಿಯ ನಡುವಿನ ಭಾವಾತ್ಮಕ ಭೇಟಿಯನ್ನು ಪಾಕಿಸ್ತಾನ ಪ್ರಚಾರ ಸಾಧನವನ್ನಾಗಿ ಬಳಸಿತ್ತು. ಮಾನವ ಹಕ್ಕುಗಳನ್ನು ಸತತವಾಗಿ ಉಲಂಘಿಸಲಾಯಿತು. ಅಲ್ಲಿ ಮಾನವೀಯತೆ ಅಥವಾ ಸೌಹಾರ್ದತೆಯಿರಲಿಲ್ಲ. ಈ ಧೋರಣೆಗಾಗಿ ಪಾಕಿಸ್ತಾನವನ್ನು ಬಲವಾಗಿ ಖಂಡಿಸಬೇಕು,'' ಎಂದು ಸುಷ್ಮಾ ಹೇಳಿದರು.

"ತಾನು ಯಾವತ್ತೂ ತನ್ನ ಮಂಗಲಸೂತ್ರ ತೆಗೆದಿಲ್ಲ" ಎಂದು ಜಾಧವ್ ತಾಯಿ ಪಾಕಿಸ್ತಾನಿ ಅಧಿಕಾರಿಗಳಿಗೆ ಹೇಳಿದರೂ ಅವರು ಸಾಧ್ಯವಿಲ್ಲ ಎಂದರು. ಇದು ದುರ್ವರ್ತನೆಯ ಅತಿರೇಕ ಎಂದು ಸುಷ್ಮಾ ಹೇಳುತ್ತಿದ್ದಂತೆಯೇ 'ಪಾಕಿಸ್ತಾನ್ ಮುರ್ದಾಬಾದ್' ಎಂಬ ಘೋಷಣೆಗಳು ಸಂಸತ್ತಿನಲ್ಲಿ ಮೊಳಗಿದವು.

ಜಾಧವ್ ಅವರ ಪತ್ನಿಯ ಶೂಗಳಲ್ಲಿ ಲೋಹದ  ವಸ್ತುಗಳಿವೆಯೆಂದು ಆರೋಪಿಸಿ ಅವುಗಳನ್ನು ವಶಪಡಿಸಿ ಹಿಂದಿರುಗಿಸದೇ ಇದ್ದ ಪಾಕಿಸ್ತಾನದ ಕ್ರಮವನ್ನು  'ವಿಚಿತ್ರ' ಎಂದ ಸುಷ್ಮಾ "ಶೂಗಳಲ್ಲಿ ಕ್ಯಾಮರಾ, ಚಿಪ್ ಅಥವಾ ರೆಕಾರ್ಡರ್ ಇರಬಹುದೆಂದು ಅವರು ಹೇಳುತ್ತಿದ್ದರು. ಆದರೆ ಏರ್ ಇಂಡಿಯಾ ಮತ್ತು ಎಮಿರೇಟ್ಸ್ ವಿಮಾನಗಳಲ್ಲಿ ಭದ್ರತಾ ತಪಾಸಣೆ ದಾಟಿಯೇ ಈ ಶೂಗಳು ಬಂದಿವೆ. ಹಾಗಾದರೆ ಪಾಕಿಸ್ತಾನ  ಪ್ರವೇಶಿಸಿದ ನಂತರ ಚಿಪ್ ಇತ್ತೇ?'' ಎಂದು ಸುಷ್ಮಾ ಪ್ರಶ್ನಿಸಿದರು.

"ಭೇಟಿಯ ವೇಳೆ ಜಾಧವ್ ಒತ್ತಡದಲ್ಲಿದ್ದಂತೆ ಕಂಡು ಬಂದಿತ್ತು  ಎಂದು ಅವರ ಕುಟುಂಬ ಹೇಳಿದೆ. ಅವರು ಮಾತನಾಡಿದ ರೀತಿ ಹಾಗೂ ಅವರ ವರ್ತನೆಯಿಂದ ಅವರು ಆರೋಗ್ಯವಾಗಿದ್ದಾರೆಂದು ಅನಿಸುತ್ತಿಲ್ಲ.  ಭೇಟಿಯ ನಂತರ ಅವರು ಹಿಂದಿರುಗಬೇಕಾಗಿದ್ದ ಕಾರಿನ ಆಗಮನವನ್ನು ಉದ್ದೇಶಪೂರ್ವಕವಾಗಿ ವಿಳಂಬಿಸಿ ಅವರು ಪಾಕಿಸ್ತಾನದ ಮಾಧ್ಯಮದ ನಿಂದನೆಗಳನ್ನು ಎದುರಿಸುವಂತೆ ಮಾಡಲಾಯಿತು'' ಎಂದರು.

ಸುಷ್ಮಾ ಹೇಳಿಕೆಯ ನಂತರ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ``ಇದು ಜಾಧವ್ ಕುಟುಂಬಕ್ಕೆ ಮಾತ್ರ ನಡೆದದ್ದಲ್ಲ, ಭಾರತದ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯ ಜತೆ ದುರ್ವರ್ತನೆ ತೋರಿಸಿದಂತಾಗಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News