ಅಂಜನಿಪುತ್ರ ಚಿತ್ರಕ್ಕೆ ನೀಡಿದ್ದ ತಡೆಯಾಜ್ಞೆ ತೆರವು

Update: 2017-12-29 13:35 GMT

ಬೆಂಗಳೂರು, ಡಿ.29: ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅಭಿನಯದ ಕನ್ನಡದ ಬಿಗ್ ಬಜೆಟ್ ಸಿನಿಮಾ ಅಂಜನಿಪುತ್ರ ಚಿತ್ರ ಪ್ರದರ್ಶನಕ್ಕೆ ನೀಡಿದ್ದ ಮಧ್ಯಂತರ ತಡೆಯನ್ನು ನಗರದ 34ನೆ ಸಿಟಿ ಸಿವಿಲ್ ಕೋರ್ಟ್ ತೆರವುಗೊಳಿಸಿ ಆದೇಶಿಸಿದೆ.

ವಕೀಲರ ವಿರುದ್ಧ ಅವಹೇಳನಕಾರಿ ಸಂಭಾಷಣೆ ಇರುವುದನ್ನು ಪ್ರಶ್ನಿಸಿ ನಾರಾಯಣಸ್ವಾಮಿ, ವಿಜಯ್ ಕುಮಾರ್ ಸೇರಿ ಐವರು ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಗರದ 34ನೆ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ನಡೆಯಿತು.

ಕೋರ್ಟ್‌ಗೆ ಹಾಜರಾದ ಅಂಜನಿಪುತ್ರ ಚಿತ್ರತಂಡ ನ್ಯಾಯಾಲಯಕ್ಕೆ ಪ್ರಕರಣದ ಮರು ವಿಚಾರಣೆ ಹಾಗೂ ಪ್ರಕರಣ ಸಂಬಂಧ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತು. ನ್ಯಾಯಾಲಯದ ಆದೇಶ ಪಾಲಿಸಿದ್ದೇವೆ, ವಕೀಲರಿಗೆ ಅವಹೇಳನಕಾರಿ ಮಾಡಿದ್ದ ದೃಶ್ಯಕ್ಕೆ ಕತ್ತರಿ ಹಾಕಿದ್ದೇವೆ. ಸೆನ್ಸಾರ್ ಮಂಡಳಿ ವಿವಾದಾತ್ಮಕ ದೃಶ್ಯಕ್ಕೆ ಕತ್ತರಿ ಹಾಕಿ ಸರ್ಟಿಫಿಕೇಟ್ ನೀಡಿದೆ.

ನ್ಯಾಯಾಲಯಕ್ಕೆ ಅಗೌರವ ತೋರುವ ಉದ್ದೇಶ ನಮ್ಮದಾಗಿರಲಿಲ್ಲ. ಅದು ಸಿನಿಮಾಗೆ ಅಗತ್ಯ ಡೈಲಾಗ್ ಆಗಿತ್ತು. ಹೀಗಾಗಿ, ಚಿತ್ರೀಕರಿಸಲಾಗಿತ್ತೇ ಹೊರತು ಯಾವುದೇ ದುರುದ್ದೇಶವಿರಲಿಲ್ಲ. ವಕೀಲರಿಗೆ ಅವಮಾನ ಅಥವಾ ಮನಸ್ಸಿಗೆ ಘಾಸಿಯಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಪ್ರಮಾಣ ಪತ್ರದಲ್ಲಿ ಇಡೀ ವಕೀಲ ಸಮುದಾಯವನ್ನೇ ಚಿತ್ರ ತಂಡ ಕ್ಷಮೆ ಕೋರಿದೆ.

ಇದೇ ವೇಳೆ ಅಂಜನಿಪುತ್ರದ ವಿರುದ್ಧ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ವಕೀಲ ನಾರಾಯಣಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಕನ್ನಡದ ಅಭಿಮಾನಿಗಳು, ಕನ್ನಡ ಚಿತ್ರಗಳನ್ನು ಮೊದಲ ಶೋ ನೋಡಿಕೊಂಡು ಬಂದಿದ್ದೇವೆ. ಆದರೆ, ಈ ಚಿತ್ರದಲ್ಲಿ ವಕೀಲರು ಮತ್ತು ನ್ಯಾಯಾಲಯಕ್ಕೆ ಅಪಮಾನ ಮಾಡಿದ್ದು ಸರಿಯಲ್ಲ. ಉದ್ದೇಶ ಇದ್ದೋ ಇಲ್ಲದೆಯೋ ನಡೆದು ಹೋಗಿದೆ. ಚಿತ್ರತಂಡವೂ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News