ಚಂದನವನ 2017

Update: 2017-12-31 05:28 GMT

ಬಂಗಾರದ ‘ಮೊಟ್ಟೆ’ಯಿಟ್ಟ ರಾಜ್ ಶೆಟ್ಟಿ

2017ರಲ್ಲಿ ಗಾಂಧಿನಗರದಲ್ಲಿ ಸುದ್ದಿಯಾದ ಮೂರು ಚಿತ್ರಗಳನ್ನು ನಾವು ನೆನಪಿಸಿಕೊಳ್ಳಲೇ ಬೇಕು. ಪುನೀತ್ ರಾಜ್ ಅವರ ‘ರಾಜಕುಮಾರ’, ರಕ್ಷಿತ್ ಶೆಟ್ಟಿ ಅವರ ‘ಕಿರಿಕ್ ಪಾರ್ಟಿ’ ಮತ್ತು ರಾಜ್ ಶೆಟ್ಟಿಯವರ ‘ಒಂದು ಮೊಟ್ಟೆಯ ಕತೆ’. ಹೀರೋ ಕೇಂದ್ರಿತ ಕತೆಗಳಿಗೆ ಸವಾಲು ಹಾಕುವಂತೆ ಪ್ರಾದೇಶಿಕ ಸೊಗಡನ್ನೇ ಸ್ವಂತಿಕೆಯಾಗಿಟ್ಟುಕೊಂಡು ಥಿಯೇಟರ್‌ನಲ್ಲಿ ಒಡೆದು ಹೋಗದೆ ಗಟ್ಟಿಯಾಗಿ ನಿಂತ ಮೊಟ್ಟೆ, ಕನ್ನಡ ಚಿತ್ರೋದ್ಯಮಕ್ಕೆ ಅಪಾರ ಭರವಸೆಯನ್ನು ತುಂಬಿತು. ರಮೇಶ್ ಅವರ ಪುಷ್ಪಕ ವಿಮಾನದಲ್ಲಿ ಏರಿ ಬಂದ 2017ರ ಕನ್ನಡ ಚಿತ್ರೋದ್ಯಮ, ಮುಗಿದದ್ದು ಪುನೀತ್ ರಾಜ್ ಕುಮಾರ್ ಅವರ ಅಂಜನಿಪುತ್ರದ ಸಣ್ಣ ಸುಂಟರಗಾಳಿಯ ಜೊತೆಗೆ. ವರ್ಷದ ನಟನಾಗಿ ಪುನೀತ್ ರಾಜ್‌ಕುಮಾರ್‌ನನ್ನು ಗುರುತಿಸಬಹುದಾದರೆ, ನಿರ್ದೇಶಕನಾಗಿ ತನ್ನ ಚೊಚ್ಚಲ ಪ್ರಯತ್ನದಲ್ಲಿ ಬಂಗಾರದ ‘ಮೊಟ್ಟೆ’ಯಿಟ್ಟ ರಾಜ್‌ಶೆಟ್ಟಿಯನ್ನೇ ಗುರುತಿಸಬೇಕಾದ ಅನಿವಾರ್ಯತೆಯಿದೆ. ಆಪರೇಷನ್ ಅಲಮೇಲಮ್ಮ ಗುರುತಿಸಬಹುದಾದ ಇನ್ನೊಂದು ಸದಭಿರುಚಿಯ ಥ್ರಿಲ್ಲರ್ ಸಿನೆಮಾ. ಉಳಿದಂತೆ ವಿಕ್ಷಿಪ್ತ ನಟ, ನಿರ್ದೇಶಕ ಉಪೇಂದ್ರ ಈ ಬಾರಿ ಬೆಳ್ಳಿ ತೆರೆಯಲ್ಲಿ ಸುದ್ದಿ ಮಾಡದೇ, ಚಿತ್ರೋದ್ಯಮದ ಹೊರಗಿನ ರಾಜಕೀಯದಲ್ಲಿ ಸಕ್ರಿಯರಾಗಿದ್ದುದು ಕನ್ನಡ ಚಿತ್ರೋದ್ಯಮದ ಭಾಗ್ಯ. ಡಬ್ಬಿಂಗ್ ಗುಮ್ಮ ಕನ್ನಡ ಚಿತ್ರೋದ್ಯಮವನ್ನು ಕೆಲ ಕಾಲ ಕಾಡಿತ್ತಾದರೂ, ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ವರ್ಷಾಂತ್ಯದ ಹೊತ್ತಿನಲ್ಲಿ ಬಂದ ಶಿವರಾಜ್ ಕುಮಾರ್ ಅವರ ‘ಮಫ್ತಿ’ ವಿಭಿನ್ನ ಕಮರ್ಶಿಯಲ್ ಚಿತ್ರವಾಗಿ ಪ್ರೇಕ್ಷಕರನ್ನು ಸೆಳೆದಿತ್ತು.

ವಿವಾಹ ಮತ್ತು ನಿಶ್ಚಿತಾರ್ಥ

ಬಹುಶಃ ಏಳುಹೆಜ್ಜೆ ಜತೆಗಿಡುವವರಿಗೆ 2017ರಷ್ಟು ಅನುಯೋಗ್ಯವಾದ ವರ್ಷ ಮತ್ತೊಂದು ಬಂದಿಲ್ಲ ಎನ್ನಬಹುದು! ಬಾಲನಟಿಯಾಗಿ ಬಂದು ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡ ಅಮೂಲ್ಯ, ದುನಿಯಾದ ಖಳನಾಯಕನಾಗಿ ಬಂದು ಸ್ಟಾರ್ ನಟನಾದ ಯೋಗಿ ಸೇರಿದಂತೆ ಸಾಕಷ್ಟು ಕಲಾವಿದರ, ತಂತ್ರಜ್ಞರ ವಿವಾಹ ಮತ್ತು ನಿಶ್ಚಿತಾರ್ಥ ಸಮಾರಂಭಗಳು ನಡೆದವು. ‘ಸಿಂಪಲ್ ಆಗಿ ಒಂದು ಲವ್ ಸ್ಟೋರಿ’ ಚಿತ್ರದ ನಿರ್ದೇಶಕ ಸುನಿ ಪ್ರೇಮ ವಿವಾಹವಾದರೆ, ನಾಯಕ ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡರು. ರಕ್ಷಿತ್ ಕೈ ಹಿಡಿಯುವಾಕೆ ಅವರದೇ ‘ಕಿರಿಕ್ ಪಾರ್ಟಿ’ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಎನ್ನುವುದು ಮತ್ತೊಂದು ವಿಶೇಷ. ‘ಕಿರಿಕ್ ಪಾರ್ಟಿ’ ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಕೂಡ ವಿವಾಹಿತರಾಗಿದ್ದಾರೆ.
ಇವರಲ್ಲದೇ ಚೇತನ್ ಚಂದ್ರ, ತನುಷ್, ರಮ್ಯಾ ಬಾರ್ನ, ಸಿಂಧು ಲೋಕನಾಥ್, ದೀಪಿಕಾ ಕಾಮಯ್ಯ, ನಿಧಿ ಸುಬ್ಬಯ್ಯ, ನಿರ್ದೇಶಕ ಪಿ ಸಿ ಶೇಖರ್ ಹಸೆಮಣೆ ಏರಿದರು. ಕನ್ನಡ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಬಹುಭಾಷಾ ನಟಿಯರಾದ ಪ್ರಿಯಾಮಣಿ ಮತ್ತು ಭಾವನಾ ಕೂಡ ದಾಂಪತ್ಯ ಲೋಕಕ್ಕೆ ಕಾಲಿಟ್ಟರು. ರಕ್ಷಿತ್ ರಶ್ಮಿಕಾ ತಾರಾ ಜೋಡಿಯಂತೆ ನಿಶ್ಚಿತಾರ್ಥ ಮಾಡಿಕೊಂಡ ಮತ್ತೊಂದು ತಾರಾಜೋಡಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್. ನಿರ್ದೇಶಕ ಪವನ್ ಒಡೆಯರ್, ಸಂತೋಷ್ ಆನಂದರಾಮ್ ಎಂಬ ಇಬ್ಬರು ಪ್ರತಿಭಾವಂತ ನಿರ್ದೇಶಕರ ನಿಶ್ಚಿತಾರ್ಥಕ್ಕೂ 2017 ಸಾಕ್ಷಿಯಾಯಿತು.

***

ಪ್ರಥಮ ಪ್ರಯೋಗ

ಕನ್ನಡ ಚಿತ್ರರಂಗದಲ್ಲಿ ‘ನಭವಿಷ್ಯತಿ’ ಎಂದುಕೊಂಡಿದ್ದ ಹಲವಾರು ನಡೆದೇ ಹೋಯಿತು. ಅವುಗಳೇನೇನು ಎಂಬುದು ಇಲ್ಲಿವೆ.

ವ್ಯಕ್ತಿ ಸೌಂದರ್ಯವೇ ಬದುಕಿನಲ್ಲಿ ಪ್ರಧಾನವಲ್ಲ ಎನ್ನುವುದನ್ನು ಚಿತ್ರದಲ್ಲಿ ಹೇಳುತ್ತಲೇ, ಕಮರ್ಷಿಯಲ್ ನಾಯಕನಿಗೆ ಬೇಕಾದ ಅಂಗಸೌಷ್ಟವ ಇಲ್ಲದೆಯೂ ಯಶಸ್ವಿ ಚಿತ್ರವನ್ನು ನೀಡಬಹುದು ಎನ್ನುವುದನ್ನು ತೋರಿಸಿಕೊಟ್ಟ ಪ್ರಥಮ ಕನ್ನಡ ತಾರೆಯಾಗಿ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಗುರುತಿಸಿಕೊಂಡರು.

ಪ್ರಥಮ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ನೂರು ಕೋಟಿಯ ಚಿತ್ರ ನಿರ್ಮಿಸುವುದಾಗಿ ಮುನಿರತ್ನ ’ಕುರುಕ್ಷೇತ್ರ’ದ ತಯಾರಿಗೆ ಮುಂದಾದಾಗ ಅದು ಹಲವು ಪ್ರಥಮಗಳಿಗೆ ಕಾರಣವಾಯಿತು. ಅದರ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪೌರಾಣಿಕ ಪಾತ್ರ ನಿರ್ವಹಿಸಿದ ರವಿಚಂದ್ರನ್, ಮೂರೂವರೆ ದಶಕದ ವೃತ್ತಿ ಬದುಕಿನಲ್ಲಿ ಪ್ರಥಮ ಬಾರಿಗೆ ಪಾತ್ರಕ್ಕಾಗಿ ಮೀಸೆ ಬೋಳಿಸಿದ್ದೂ ಸುದ್ದಿಯಾಯಿತು.

ರಿಮೇಕ್ ಚಿತ್ರದಲ್ಲಿ ನಟಿಸುವುದಿಲ್ಲವೆಂದು ಹದಿನೈದು ವರ್ಷಗಳಿಂದ ಪಟ್ಟು ಹಿಡಿದು ಕುಳಿತಿದ್ದ ನಟ ಶಿವರಾಜ್ ಕುಮಾರ್ ಮಲಯಾಳಂನ ‘ಒಪ್ಪಂ’ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ‘ಸಾಹೇಬ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ‘ಮಾನಸ ಸರೋವರ’ ಎಂಬ ಧಾರಾವಾಹಿ ನಿರ್ಮಾಣದ ಮೂಲಕ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ನಿರ್ಮಾಪಕಿಯಾಗಿದ್ದಾರೆ.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸಿ ರಾಜಕೀಯವನ್ನು ಪ್ರವೇಶಿಸುತ್ತಿರುವ ಪ್ರಥಮ ಚಿತ್ರನಟನಾಗಿ ಕೆಪಿಜೆಪಿಯ ಮೂಲಕ ಉಪೇಂದ್ರ ಗುರುತಿಸಲ್ಪಟ್ಟರು.

ಈ ವರ್ಷ ರಿಮೇಕ್ ಚಿತ್ರಗಳ ಸಂಖ್ಯೆ ಕಡಿಮೆಯಾದರೂ ಕೂಡ ಬಿಡುಗಡೆಯಾದ ಯಾವ ರಿಮೇಕ್ ಚಿತ್ರಗಳನ್ನ್ನೂ ಪ್ರೇಕ್ಷಕರು ಕೈ ಹಿಡಿಯಲಿಲ್ಲ ಎನ್ನುವುದು ಸತ್ಯ. ಡಬ್ಬಿಂಗ್‌ಗೆ ನ್ಯಾಯಾಲಯದ ಮನ್ನಣೆ ಇರುವುದರಿಂದ ತಮಿಳಿನ ಒಂದೆರಡು ಡಬ್ ಚಿತ್ರಗಳು ಕನ್ನಡಕ್ಕೆ ಬಂದವು. ಆದರೆ ಅವುಗಳು ಬಂದು ಹೋಗಿದ್ದೇ ತಿಳಿಯಲಿಲ್ಲ.

***

ವಿವಾದ-ವಿನೋದ

2017ರಲ್ಲಿ ಹಲವಾರು ಗಂಭೀರ, ಉಪಯೋಗ ಶೂನ್ಯ ಮತ್ತು ಸ್ವಾರಸ್ಯಕರ ವಿವಾದಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಯಿತು. ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡಿದ್ದೇವೆ.

ಸ್ವತಃ ಹುಚ್ಚನೆಂದು ಹೇಳಿಕೊಳ್ಳುವ ಹುಚ್ಚವೆಂಕಟ್ ಈ ವರ್ಷವೂ ಒಂದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡರು. ಅವುಗಳಿಗೆ ಟಿ.ವಿ ವಾಹಿನಿಗಳ ಕೃಪಾಪೋಷಣೆಯೂ ದೊರೆಯಿತು. ಆದರೆ ಅವರನ್ನು ಮೀರಿಸುವ ಪ್ರಯತ್ನದಲ್ಲಿ ‘ಬಿಗ್‌ಬಾಸ್’ ಖ್ಯಾತಿಯ ಪ್ರಥಮ್ ಗೆದ್ದಿದ್ದಾಗಿ ಹೇಳಬಹುದು. ಫೇಸ್‌ಬುಕ್ ನಲ್ಲಿ ಆತ್ಮಹತ್ಯೆಯ ನಾಟಕವಾಡಿದ್ದು, ಧಾರಾವಾಹಿ ಚಿತ್ರೀಕರಣದ ವೇಳೆ ಸಹ ಕಲಾವಿದ ಭುವನ್ ಅವರ ಕಾಲು ಕಚ್ಚಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು ಮೊದಲಾದವು ಅದಕ್ಕೆ ಉದಾಹರಣೆ.

ಹೊರಗಡೆ ವಿವಾದ ಮಾಡಿಕೊಂಡವರೇ ‘ಬಿಗ್‌ಬಾಸ್’ ರಿಯಾಲಿಟಿ ಶೋಗೆ ಬೇಕಾಗಿರುವವರು ಎನ್ನುವುದು ಸಂಯುಕ್ತಾ ಹೆಗ್ಡೆಯ ಪ್ರವೇಶದೊಂದಿಗೆ ಮತ್ತೊಮ್ಮೆ ಸಾಬೀತಾಯಿತು.

 ಯಾಕೆಂದರೆ ‘ಕಿರಿಕ್ ಪಾರ್ಟಿ’ ಚಿತ್ರದ ಬಳಿಕ ಆಕೆ ನಟಿಸಿದ ಕಾಲೇಜ್ ಕುಮಾರ ಚಿತ್ರೀಕರಣದ ವೇಳೆ ಆಕೆ ಸಹಕರಿಸಿಲ್ಲವೆಂದು ನಿರ್ಮಾಪಕ ಪದ್ಮನಾಭ್ ವಾಣಿಜ್ಯ ಮಂಡಳಿಗೆ ದೂರನ್ನೂ ನೀಡಿದ್ದರು. ಅಂಥ ಸಂಯುಕ್ತಾ ‘ಬಿಗ್‌ಬಾಸ್’ ಮನೆಯಲ್ಲಿ ಸಹ ಸ್ಪರ್ಧಿ ಸಮೀರ್ ಆಚಾರ್ಯ ಎಂಬುವವರ ಮುಖಕ್ಕೆ ಹೊಡೆದು ಅಲ್ಲಿಂದ ಹೊರಗೆ ಬಂದರು.

ಮತ್ತೋರ್ವ ನಟಿ, ಒಂದು ಚಿತ್ರದಿಂದ ಸುದ್ದಿಯಾದ ಆವಂತಿಕಾ ಶೆಟ್ಟಿ ಕೂಡ ಒಂದು ವಿವಾದದಲ್ಲಿ ಸುದ್ದಿಯಾದರು. ‘ರಾಜು ಕನ್ನಡ ಮೀಡಿಯಂ’ ಚಿತ್ರದ ನಿರ್ಮಾಪಕ ಸುರೇಶ್ ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾಗಿ ಅವರು ಆಪಾದನೆ ಮಾಡಿದ್ದರು. ಇದು ಸೇರಿದಂತೆ ನಾಲ್ಕೈದು ಗಂಭೀರವಾದ ವಿವಾದಗಳನ್ನು ಬಗೆಹರಿಸುವಲ್ಲಿ ವಾಣಿಜ್ಯಮಂಡಳಿ ಪ್ರಧಾನ ಪಾತ್ರ ವಹಿಸಿತು ಎನ್ನುವುದು ವಿಶೇಷ. ಉದಾಹರಣೆಗೆ ನಿರ್ಮಾಪಕ ಯೋಗೀಶ್‌ನಾರಾಯಣ್ ಮತ್ತು ನಿರ್ದೇಶಕ ‘ಮಠ’ ಗುರು ಪ್ರಸಾದ್ ನಡುವಿನ ಜಗಳ, ‘ದನ ಕಾಯೋನು’ ಚಿತ್ರದ ಸಂಭಾವನೆ ಸಿಕ್ಕಿಲ್ಲವೆಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಯೋಗರಾಜ್ ಭಟ್ ನೀಡಿದ ದೂರು ಮೊದಲಾದವು ಅಲ್ಲೇ ಪರಿಹಾರ ಕಂಡವು.

‘ದಂಡುಪಾಳ್ಯ 2’ರಲ್ಲಿ ತಮ್ಮನ್ನು ಕಡೆಗಣಿಸಿದ್ದಕ್ಕಾಗಿ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದು ಮತ್ತು ಅದಕ್ಕೆ ಉತ್ತರವಾಗಿ ಪೂಜಾಗಾಂಧಿ ‘‘ಸಂಜನಾಗೆ ಅಭದ್ರತೆ ಕಾಡುತ್ತಿದೆ’’ ಎಂದು ಅಣಕಿಸಿದ್ದು ಸಂಜನಾ ಪೂಜಾರ ಜತೆಗೆ ಮಾತು ಬಿಡುವ ಸಂದರ್ಭ ಸೃಷ್ಟಿಸಿತು. ಚಿತ್ರದಲ್ಲಿ ಸಂಜನಾರನ್ನು ಬೆತ್ತಲಾಗಿ ಚಿತ್ರೀಕರಿಸಿರುವಂತೆ ತೋರಿಸಲಾದ ವೀಡಿಯೊಗಳು ಹೊರ ಬಂದಾಗ ಸಂಜನಾ ನಿರ್ದೇಶಕರ ವಿರುದ್ಧ ಕೋಪಿಸಿದ್ದು, ಚಿತ್ರಕ್ಕೆ ಪ್ರಚಾರ ನೀಡಿದರೂ ಚಿತ್ರ ಗೆಲ್ಲಲಿಲ್ಲ ಎನ್ನುವುದು ಸತ್ಯ.

ಸೆನ್ಸಾರ್ ಬೋರ್ಡ್ ಮತ್ತು ಚಿತ್ರತಂಡದ ನಡುವಿನ ಸಮಸ್ಯೆಗಳು ಈ ವರ್ಷ ತಾರಕಕ್ಕೇರಿತು. ಅದಕ್ಕೆ ಕಾರಣ ಸೆನ್ಸಾರ್ ಮಂಡಳಿಯಲ್ಲಿ ಜಾರಿಯಾಗಿರುವ ಆನ್‌ಲೈನ್ ವ್ಯವಸ್ಥೆ. ಇದರಿಂದ ಸೆನ್ಸಾರ್ ಪ್ರಕ್ರಿಯೆಯು ಸರದಿ ಪ್ರಕಾರ ನಡೆಯುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಂಡ ಸಮಾಧಾನ. ಆದರೆ ಕೆಲವೊಂದು ದೊಡ್ಡ ಸ್ಟಾರ್‌ಗಳ ಚಿತ್ರಗಳನ್ನು ಸರದಿಗೂ ಮೊದಲೇ ಸೆನ್ಸಾರ್ ಮಾಡಿ ಹೊರತರಲಾಗಿದೆ ಎಂದು ಸಣ್ಣ ಬಜೆಟ್ ನಿರ್ಮಾಪಕರು ಆಪಾದಿಸಿದ ಘಟನೆ ನಡೆಯಿತು. ಇದರ ಜತೆಗೆ ಸೆನ್ಸಾರ್ ಮಂಡಳಿಯವರು ‘ಎ’ ಪ್ರಮಾಣ ಪತ್ರ ನೀಡುವಾಗಲೂ ಕಟ್ ಮತ್ತು ಮ್ಯೂಟ್‌ಗಳನ್ನು ನೀಡುತ್ತಿರುವುದರ ವಿರುದ್ಧ ನಿರ್ಮಾಪಕ ನಿರ್ದೇಶಕರು ಸಿಡಿದೆದ್ದರು. ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದಾಗ ಸೆನ್ಸಾರ್ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಲಾಯಿತು.
‘ಬುಕ್ ಮೈ ಶೋ’ ಎಂಬ ಮುಂಬೈ ಮೂಲದ ಖಾಸಗಿ ಸಾಮಾಜಿಕ ಜಾಲತಾಣದ ಮಂದಿ ನಮ್ಮಿಂದ ಜಾಹೀರಾತು ನಿರೀಕ್ಷಿಸುತ್ತಿದ್ದಾರೆ. ನೀಡದೇ ಹೋದಾಗ ಅವರು ತಮ್ಮ ಆ್ಯಪ್‌ನಲ್ಲಿ ಕನ್ನಡ ಚಿತ್ರಗಳಿಗೆ ಕಡಿಮೆ ರೇಟಿಂಗ್ ನೀಡುತ್ತಾರೆ. ಚಿತ್ರದ ಬಗ್ಗೆ ಅವರು ಮೊದಲೇ ಅಪಪ್ರಚಾರ ಶುರು ಮಾಡುವುದರಿಂದಾಗಿ ಅದು ಸಾಮಾಜಿಕ ಜಾಲತಾಣದಲ್ಲಿ ಋಣಾತ್ಮಕ ಅಭಿಪ್ರಾಯ ಹರಡುತ್ತದೆ. ಅದರಿಂದ ನಿರ್ಮಾಪಕರಿಗೆ ನಷ್ಟವೇ ಹೊರತು ಯಾವುದೇ ಲಾಭ ಇಲ್ಲ ಎಂದು ಕೆಲವು ನಿರ್ಮಾಪಕರು ದೂರಿದರು. ಅವರ ವಿರುದ್ಧ ಸೆಟೆದು ನಿಲ್ಲಲು ಕನ್ನಡ ಚಿತ್ರಗಳ ಬುಕಿಂಗ್ ಮಾಡಲೆಂದೇ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಹೊಸ ಆ್ಯಪ್ ಪ್ರಾರಂಭಿಸುವುದಾಗಿಹೇಳಿತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ!

2016ರಲ್ಲಿ ತಿಥಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಅನಿರೀಕ್ಷಿತವಾಗಿ ಪ್ರವೇಶಿಸಿದ ಗಡ್ಡಪ್ಪಮತ್ತು ಸೆಂಚುರಿ ಗೌಡ (ಪಾತ್ರದ ಹೆಸರುಗಳು) ಅತಿಹೆಚ್ಚು ಬೇಡಿಕೆ ಪಡೆದುಕೊಂಡರು. ಈ ವರ್ಷ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಕಲಾವಿದರಾಗಿ ಗುರುತಿಸಿಕೊಂಡ ಇವರಿಬ್ಬರಿಂದ ಮುಕ್ಕಾಲುಪಾಲು ನಿರ್ದೇಶಕರು ಕೂಡ ಡಬಲ್ ಮೀನಿಂಗ್ ಸಂಭಾಷಣೆಗಳನ್ನೇ ಹೇಳಿಸಿದ್ದು ವಿಪರ್ಯಾಸವಾಗಿತ್ತು.

ವಿದಾಯ- ವಿಷಾದ

ಈ ವರ್ಷ ಸಿನೆಮಾರಂಗವು ಹಲವು ಹಿರಿಯ ಮತ್ತು ಕಿರಿಯ ಚೇತನಗಳನ್ನು ಕಳೆದುಕೊಂಡಿತು.
ಹಿರಿಯ ನಿರ್ಮಾಪಕಿಯಾಗಿ ಚಿತ್ರರಂಗದ ಶಕ್ತಿಯಾಗಿದ್ದ ಪಾರ್ವತಮ್ಮ ರಾಜಕುಮಾರ್, ಹಿರಿಯ ನಟ ಆರ್. ಎನ್. ಸುದರ್ಶನ್, ನಟಿ ಬಿವಿ ರಾಧಾ, ಯುವನಟ ಧ್ರುವ ಶರ್ಮ, ನಿರ್ದೇಶಕ ಆನಂದ್, ಪೂರ್ಣಿಮಾ ಮೋಹನ್, ಗಾಯಕ ಸಂಗೀತ ನಿರ್ದೇಶಕ ಎಲ್ಲೆನ್ ಶಾಸ್ತ್ರಿ ಮತ್ತು ವರ್ಷದ ಕೊನೆಗೆ ನಟಿ ಕಲ್ಯಾಣ್ ಕುಮಾರ್ ಪತ್ನಿ ನಟಿ ರೇವತಿ ಕಲ್ಯಾಣ್ ಕುಮಾರ್ ನಿಧನರಾದರು.

Writer - -ಶಶಿಕರ ಪಾತೂರು

contributor

Editor - -ಶಶಿಕರ ಪಾತೂರು

contributor

Similar News