×
Ad

ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ: ಮುಷ್ಕರ ಹಿಂಪಡೆದ ವೈದ್ಯಕೀಯ ಮಂಡಳಿ

Update: 2018-01-02 19:51 IST

ಹೊಸದಿಲ್ಲಿ, ಜ.2: ಭಾರತೀಯ ವೈದ್ಯಕೀಯ ಮಂಡಳಿಯನ್ನು ಬೇರೆ ಮಂಡಳಿಯೊಂದಿಗೆ ಬದಲಾಯಿಸುವ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕವನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಕರೆ ನೀಡಿದ್ದ 12 ಗಂಟೆಗಳ ಮುಷ್ಕರವನ್ನು ಮಂಡಳಿಯು ಹಿಂಪಡೆದುಕೊಂಡಿದೆ. ಪ್ರಸ್ತಾಪಿತ ವಿಧೇಯಕವನ್ನು ಸಂಸತ್ ಸ್ಥಾಯಿ ಸಮಿತಿಗೆ ಪರಿಶೀಲನೆಗೆ ಕಳುಹಿಸಿದ ಹಿನ್ನೆಲೆಯಲ್ಲಿ ವೈದ್ಯರು ಮುಷ್ಕರ ಹಿಂಪಡೆಯಲು ನಿರ್ಧರಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ವರದಿಯನ್ನು ಮುಂದಿನ ಬಜೆಟ್ ಸೆಶನ್‌ಗೂ ಮುನ್ನ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ.

ಶುಕ್ರವಾರ ಸಂಸತ್‌ನಲ್ಲಿ ಮಂಡಿಸಲಾದ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎಂಎಂಸಿ) ವಿಧೇಯಕವು ಭಾರತೀಯ ವೈದ್ಯಕೀಯ ಮಂಡಳಿಯನ್ನು ಬದಲಾಯಿಸುವುದು ಮಾತ್ರವಲ್ಲ ಹೋಮಿಯೋಪಥಿ ಮತ್ತು ಆಯುರ್ವೇದಂಥ ಪರ್ಯಾಯ ವೈದ್ಯಕೀಯ ಪದ್ಧತಿಯ ವೈದ್ಯರು ಬ್ರಿಡ್ಜ್ ಕೋರ್ಸ್ ಮುಗಿಸಿದ ನಂತರ ಅಲೋಪಥಿ ಪದ್ಧತಿಯಂತೆ ಚಿಕಿತ್ಸೆ ನೀಡಲು ಅನುಮತಿ ನೀಡುತ್ತದೆ.

ಸದ್ಯ ಈ ವಿಧೇಯಕವನ್ನು ಸಂಸತ್ ಸ್ಥಾಯಿ ಸಮಿತಿಗೆ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಆ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಸದಸ್ಯರಾಗಿರುವುದರಿಂದ ಉತ್ತಮವಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಹಾಗಾಗಿ ನಮ್ಮ ಮುಷ್ಕರವನ್ನು ಹಿಂಪಡೆದುಕೊಂಡಿದ್ದೇವೆ ಎಂದು ಐಎಂಎಯ ಕೆ.ಕೆ ಅಗರ್ವಾಲ್ ತಿಳಿಸಿದ್ದಾರೆ.

ಮಂಗಳವಾರದಂದು ವೈದ್ಯರು ಮುಷ್ಕರವನ್ನು ಹಿಂಪಡೆಯುವುದಕ್ಕೂ ಮುನ್ನ ಎಂಟು ಗಂಟೆಗಳ ಕಾಲ ಆಸ್ಪತ್ರೆಗಳ ಹೊರರೋಗಿ ವಿಭಾಗದ ಸೇವೆಯನ್ನು ಬಂದ್ ಮಾಡಲಾಗಿತ್ತು. ವೈದ್ಯಕೀಯ ವೃತ್ತಿಪರರನ್ನು ಅಧಿಕಾರಿಗಳಿಗೆ ಮತ್ತು ವೈದ್ಯರಲ್ಲದ ಆಡಳಿತಗಾರರಿಗೆ ಉತ್ತರದಾಯಿಗಳನ್ನಾಗಿ ಮಾಡುವುದರಿಂದ ಈ ವಿಧೇಯಕವು ವೈದ್ಯರ ಕಾರ್ಯನಿರ್ವಹಣೆಗೆ ತೊಡಕಾಗಲಿದೆ ಎಂದು ಐಎಂಎ ಅಭಿಪ್ರಾಯಿಸಿದೆ. ಇದಕ್ಕೂ ಮುನ್ನ ಹೇಳಿಕೆ ನೀಡಿದ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡ, ಐಎಂಎಯ ಅನುಮಾನಗಳನ್ನು ದೂರ ಮಾಡಲು ಮಾತುಕತೆ ಜಾರಿಯಲ್ಲಿರುವುದಾಗಿ ತಿಳಿಸಿದ್ದರು. ಈ ವಿಧೇಯಕದಿಂದ ವೈದ್ಯಕೀಯ ವೃತ್ತಿಗೆ ಲಾಭವಾಗಲಿದೆ ಎಂದು ಅವರು ತಿಳಿಸಿದರು.

ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಈ ಬಗ್ಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದು ವಿಧೇಯಕವನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಕಳುಹಿಸುವಂತೆ ಆಗ್ರಹಿಸಿದ್ದರು.

ಆಯುಶ್ ಪದವೀಧರರು ಆಧುನಿಕ ವೈದ್ಯ ಪದ್ಧತಿಯಂತೆ ಚಿಕಿತ್ಸೆ ನೀಡಲು ಅವಕಾಶ ನೀಡುವ ಮೂಲಕ ಈ ವಿಧೇಯಕವು ವೈದ್ಯಕೀಯ ಕ್ಷೇತ್ರದಲ್ಲಿ ವಂಚನೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಐಎಂಎ ಆರೋಪಿಸಿದೆ. ಈ ವಿಧೇಯಕವು ಭಾರತದ ಪ್ರತಿಯೊಬ್ಬ ವೈದ್ಯರು ತಮ್ಮ ವೈದ್ಯಕೀಯ ಮಂಡಳಿಯನ್ನು ಆಯ್ಕೆ ಮಾಡುವ ಹಕ್ಕನ್ನು ಕಸಿಯಲಿದೆ ಎಂದು ಮಂಡಳಿ ಅಭಿಪ್ರಾಯಿಸಿದೆ.

ಪ್ರಸ್ತುತ ರೂಪದಲ್ಲಿ ಈ ವಿಧೇಯಕವು ಖಾಸಗಿ ವೈದ್ಯಕೀಯ ಕಾಲೇಜುಗಳು ತಮ್ಮಿಷ್ಟದಂತೆ ಶುಲ್ಕ ಪಡೆಯಲು ಅವಕಾಶ ನೀಡುವ ಮೂಲಕ ನೀಟ್‌ನ ಉದ್ದೇಶವನ್ನು ಬುಡಮೇಲು ಮಾಡಲಿದೆ ಎಂದು ಡಾ. ಅಗರ್ವಾಲ್ ತಿಳಿಸಿದ್ದಾರೆ.

ಭ್ರಷ್ಟಾಚಾರವನ್ನು ನಿಗ್ರಹಿಸಲು ರಚಿಸಲಾಗಿದೆ ಎಂದು ಹೇಳಲಾಗುವ ಈ ವಿಧೇಯಕವು ಭ್ರಷ್ಟಾಚಾರಕ್ಕೆ ಮುಖ್ಯದ್ವಾರವನ್ನೇ ತೆರೆಯಲಿದೆ. ವೈದ್ಯಕೀಯ ವೃತ್ತಿಪರರ ಅಭಿಪ್ರಾಯ ಪಡೆಯದೆ ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಸೇವೆಯನ್ನು ನಿಯಂತ್ರಿಸಲು ರಚಿಸಲಾಗಿರುವ ಈ ವಿಧೇಯಕ ಒಂದು ದುರಂತವಾಗಲಿದೆ ಎಂದು ಡಾ. ವಾಂಕೆಡ್ಕರ್ ತಿಳಿಸಿದ್ದಾರೆ.

ಈ ವಿಧೇಯಕವು ನಾಲ್ಕು ಸ್ವಾಯತ್ತ ಮಂಡಳಿಗಳನ್ನು ರಚಿಸುವ ಪ್ರಸ್ತಾಪವನ್ನು ಹೊಂದಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಡಿಯಲ್ಲಿ ಪದವಿಪೂರ್ವ, ಸ್ನಾತಕೋತ್ತರ ಶಿಕ್ಷಣ, ಪರಿಶೀಲನೆ ಮತ್ತು ವೈದ್ಯಕೀಯ ಸಂಸ್ಥೆಗಳ ರೇಟಿಂಗ್ ಹಾಗೂ ವೈದ್ಯರ ನೋಂದಣಿ ಮುಂತಾದ ಕಾರ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News