ವೈದ್ಯಕೀಯ ಮಂಡಳಿ ಬದಲಾವಣೆ ವಿಧೇಯಕದಿಂದ ವೃತ್ತಿಗೆ ಲಾಭ: ಜೆ.ಪಿ ನಡ್ಡ
ಹೊಸದಿಲ್ಲಿ, ಜ.2: ಭಾರತೀಯ ವೈದ್ಯಕೀಯ ಮಂಡಳಿಯನ್ನು ನೂತನ ಮಂಡಳಿಯೊಂದಿಗೆ ಬದಲಾಯಿಸುವ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕದಂದ ವೈದ್ಯಕೀಯ ವೃತ್ತಿಗೆ ಲಾಭವಾಗಲಿದೆ ಎಂದು ಕೇಂದ್ರ ಸರಕಾರ ಮಂಗಳವಾರ ತಿಳಿಸಿದೆ.
ಮಸೂದೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಮಂಗಳವಾರದಂದು 12 ಗಂಟೆಗಳ ಕಾಲ ಹೊರರೋಗಿ ಸೇವೆ ವಿಭಾಗವನ್ನು ಬಂದ್ ಮಾಡಿ ಮುಷ್ಕರ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡ, ಐಎಂಎಯ ಅನುಮಾನಗಳನ್ನು ದೂರ ಮಾಡಲು ಮಾತುಕತೆ ಜಾರಿಯಲ್ಲಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವರು, ಈ ವಿಧೇಯಕದಿಂದ ವೈದ್ಯಕೀಯ ವೃತ್ತಿಗೆ ಲಾಭವಾಗಲಿದೆ ಎಂದು ತಿಳಿಸಿದರು. ಮುಷ್ಕರ ನಿರತ ವೈದ್ಯರ ಜೊತೆ ಮಾತುಕತೆ ಮುಂದುವರಿದಿದೆ. ಭಾರತೀಯ ವೈದ್ಯಕೀಯ ಮಂಡಳಿಯನ್ನು ಬೇರೆ ಮಂಡಳಿಯಿಂದ ಬದಲಾಯಿಸುವ ಜೊತೆಗೆ ಪರ್ಯಾಯ ವೈದ್ಯಕೀಯ ಪದವೀಧರರು ಬ್ರಿಡ್ಜ್ ಕೋರ್ಸ್ ಮುಗಿಸಿದ ನಂತರ ಅಲೋಪತಿ ಪದ್ಧತಿಯಂತೆ ವೃತ್ತಿ ಆರಂಭಿಸಲು ಅನುಮತಿ ನೀಡುತ್ತದೆ. ವೈದ್ಯಕೀಯ ವೃತ್ತಿಪರರನ್ನು ಅಧಿಕಾರಿಗಳಿಗೆ ಮತ್ತು ವೈದ್ಯರಲ್ಲದ ಆಡಳಿತಗಾರರಿಗೆ ಉತ್ತರದಾಯಿಗಳನ್ನಾಗಿ ಮಾಡುವುದರಿಂದ ಈ ವಿಧೇಯಕವು ವೈದ್ಯರ ಕಾರ್ಯನಿರ್ವಹಣೆಗೆ ತೊಡಕಾಗಲಿದೆ ಎಂದು ಐಎಂಎ ಅಭಿಪ್ರಾಯಿಸಿದೆ.
ಚುನಾಯಿತ ವೈದ್ಯಕೀಯ ವೃತ್ತಿಪರರ ಮೇಲೆ ಅತಿಕ್ರಮಣ ಮಾಡಲು ಅನುಮತಿ ನೀಡುವ ಈ ವಿಧೇಯಕವನ್ನು ವಿರೋಧಿಸಿ ವೈದ್ಯರು ಮುಷ್ಕರ ನಡೆಸುತ್ತಿರುವ ಕಾರಣ ಹಲವಾರು ರೋಗಿಗಳು ಈಗಾಗಲೇ ಸರಿಯಾದ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ ಎಂದು ಸಮಾಜವಾದಿ ಪಕ್ಷದ ನರೇಶ್ ಅಗರ್ವಾಲ್ ಆರೋಪಿಸಿದ್ದಾರೆ.
ವೈದ್ಯರ ಮುಷ್ಕರವನ್ನು ಅಂತ್ಯಗೊಳಿಸಲು ಸರಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಝಾದ್ ಆಗ್ರಹಿಸಿದ್ದಾರೆ.