ಊಟದ ಸಮಯದಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

Update: 2018-01-03 11:17 GMT

ಊಟದ ಸಮಯದಲ್ಲಿ ನಾವೆಲ್ಲ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತಿರುತ್ತೇವೆ. ಇವು ನಾವು ತಿನ್ನುವ ಆಹಾರದ ಮೇಲೆ ಪರಿಣಾಮವನ್ನು ಬೀರುತ್ತವೆ. ಊಟದ ಸಮಯದಲ್ಲಿ ನಾವು ಮಾಡಲೇಬಾರದ ಕೆಲವೊಂದು ತಪ್ಪುಗಳು ಇಲ್ಲಿವೆ, ಓದಿಕೊಳ್ಳಿ........

► ಬೆಳಿಗ್ಗೆಯಿಂದ ಸಂಜೆಯವರೆಗೆ ಕಚೇರಿಯಲ್ಲಿ ಕೆಲಸ ಮಾಡುವ ಹೆಚ್ಚಿನವರು ಮನೆಯಿಂದ ಊಟವನ್ನು ಒಯ್ಯುವ ಗೋಜಿಗೆ ಹೋಗುವುದಿಲ್ಲ, ಬದಲಿಗೆ ಊಟದ ಅವಧಿಯಲ್ಲಿ ಹೊರಗೆ ಹೋಗಿ ಏನಾದರೂ ತಿನ್ನುತ್ತಾರೆ. ರೆಸ್ಟೋರಂಟ್‌ಗಳಲ್ಲಿ ಮತ್ತು ಫಾಸ್ಟ್‌ಫುಡ್ ಅಂಗಡಿಗಳಲ್ಲಿ ದೊರೆಯುವ ಖಾದ್ಯಗಳು ಮನೆಯ ಆಹಾರಕ್ಕೆ ಹೋಲಿಸಿದರೆ ಅಧಿಕ ಕ್ಯಾಲರಿಗಳು, ಕೊಬ್ಬು ಮತ್ತು ಉಪ್ಪನ್ನು ಹೊಂದಿರುತ್ತವೆ. ಇವು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಕಚೇರಿಗಳಲ್ಲಿ ಕೆಲಸ ಮಾಡುವವರು ಹೊರಗೆ ತಿನ್ನುವುದಕ್ಕಿಂತ ಮನೆಯಿಂದಲೇ ಏನಾದರೂ ಆಹಾರ ಒಯ್ಯುವುದು ಒಳ್ಳೆಯದು.

► ಕೆಲಸ ಮಾಡುವ ಟೇಬಲ್‌ನಲ್ಲಿಯೇ ಕುಳಿತು ಊಟ ಮಾಡುವುದು ಒಳ್ಳೆಯದಲ್ಲ. ಹಾಗೆ ಮಾಡುವುದರಿಂದ ಗಮನ ಬೇರೆಡೆಗೆ ಹೋಗಿ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಹೊಟ್ಟೆಯನ್ನು ಸೇರುತ್ತದೆ.

► ಊಟ ಮಾಡುವಾಗ ಮೊಬೈಲ್ ಬಳಕೆ ನಾವೆಲ್ಲ ಮಾಡುವ ಸಾಮಾನ್ಯ ತಪ್ಪಾಗಿದೆ. ಮೊಬೈಲ್ ಮೇಲೆಯೇ ಗಮನವಿರುವುದರಿಂದ ನಾವು ಎಷ್ಟು ತಿನ್ನುತ್ತಿದ್ದೇವೆ ಎನ್ನುವುದು ನಮಗೇ ಗೊತ್ತಾಗುವುದಿಲ್ಲ. ಹೀಗಾಗಿ ಊಟ ಮಾಡುವಾಗ ಮೊಬೈಲ್ ಇತ್ಯಾದಿಗಳನ್ನು ಬದಿಗಿರಿಸಿ ತಿನ್ನುವುದರ ಮೇಲೆ ಮಾತ್ರ ಗಮನ ಹರಿಸಿ.

► ನೀವು ಊಟದ ವೇಳೆ ಹಸಿರು ತರಕಾರಿಗಳಿಂದ ದೂರ ಇರಿಸುವವರಾದರೆ ಅದು ನಿಮ್ಮ ಊಟದಲ್ಲಿ ಪೋಷಕಾಂಶಗಳ ಭಾರೀ ಕೊರತೆಯನ್ನುಂಟು ಮಾಡುತ್ತದೆ. ನಾರು, ವಿಟಾಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡಂಟ್‌ಗಳು ಹೇರಳವಾಗಿರುವ ಪಾಲಕ್, ಕ್ಯಾಬೇಜ್ ನಂತಹ ತರಕಾರಿಗನ್ನು ತಿನ್ನುವುದನ್ನು ರೂಢಿಸಿಕೊಳ್ಳಿ.

► ಸೋಡಾ ಮತ್ತು ತಂಪು ಪಾನೀಯಗಳು ಆಹ್ಲಾದವನ್ನು ನೀಡುತ್ತವೆಯಾದರೂ ಅವು ನಿಮ್ಮ ರಕ್ತದಲ್ಲಿಯ ಸಕ್ಕರೆಯ ಮಟ್ಟ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತವಲ್ಲ. ಸಂಸ್ಕರಿತ ಜ್ಯೂಸ್, ಸಕ್ಕರೆ ಬೆರೆತ ಸೋಡಾ ಮತ್ತು ತಂಪು ಪಾನೀಯಗಳು ಅಧಿಕ ಕ್ಯಾಲರಿಗಳನ್ನು ಒಳಗೊಂಡಿರುತ್ತವೆ. ಊಟದೊಂದಿಗೆ ಇಂತಹ ಪಾನೀಯಗಳ ಸೇವನೆ ರಕ್ತದಲ್ಲಿಯ ಸಕ್ಕರೆಯ ಮಟ್ಟ ಮತ್ತು ಇನ್ಸುಲಿನ್‌ನಂತಹ ಹಾರ್ಮೋನ್‌ಗಳನ್ನು ಹೆಚ್ಚಿಸುತ್ತದೆ.

► ಊಟಕ್ಕೆ ಮೊದಲು ಚಿಪ್ಸ್ ಅಥವಾ ಕುಕೀಸ್‌ನಂತಹ ತಿನಿಸುಗಳನ್ನು ತಿನ್ನುತ್ತಿದ್ದರೆ ನೀವು ಖಂಡಿತ ಮಧ್ಯಾಹ್ನದ ಊಟವನ್ನು ಮಾಡುವುದಿಲ್ಲ. ನೀವು ಕೆಲಸದಲ್ಲಿ ವ್ಯಸ್ತರಾಗಿದ್ದಾಗಲೂ ಊಟವನ್ನು ಮರೆಯಬಹುದು. ದೇಹದ ತೂಕವನ್ನು ಇಳಿಸಲು ಮಧ್ಯಾಹ್ನದ ಊಟ ಬಿಡುವುದು ಒಳ್ಳೆಯ ಐಡಿಯಾ ಎಂದು ನೀವು ಭಾವಿಸಿದ್ದರೆ ಅದರಂತಹ ದೊಡ್ಡ ತಪ್ಪು ಇನ್ನೊಂದಿಲ್ಲ. ಹೀಗೆ ಮಾಡುವುದರಿಂದ ನೀವು ನಂತರ ಊಟ ಮಾಡುವಾಗ ಅಧಿಕ ಆಹಾರ ನಿಮ್ಮ ಹೊಟ್ಟೆಯನ್ನು ಸೇರುತ್ತದೆ. ಯಾವುದೇ ಕಾರಣಕ್ಕೂ ಮಧ್ಯಾಹ್ನದ ಊಟವನ್ನು ಬಿಡಬೇಡಿ.

► ಸಲಾಡ್‌ನೊಂದಿಗೆ ಬಿಳಿಯ ಬ್ರೆಡ್‌ನ್ನು ಎಂದಿಗೂ ತಿನ್ನಬೇಡಿ. ಬ್ರೆಡ್‌ನಲ್ಲಿ ಕಾರ್ಬೋಹೈಡ್ರೇಟ್‌ಗಳು ಪುಷ್ಕಳವಾಗಿದ್ದು, ಇವು ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಲ್ಲವು. ಬಿಳಿಯ ಬ್ರೆಡ್ ಸೇವಿಸುವುದರಿಂದ ಇನ್ನಷ್ಟು ಹೆಚ್ಚು ಕ್ಯಾಲರಿಗಳು ಶರೀರದಲ್ಲಿ ಸೇರಿಕೊಳ್ಳುತ್ತವೆ. ಇದರ ಬದಲು ನಾರಿನಂಶ ಅಧಿಕವಾಗಿರುವ ಇಡಿಯ ಧಾನ್ಯದಿಂದ ಮಾಡಲಾದ ಬ್ರೆಡ್‌ನ್ನು ತಿನ್ನಿ.

► ಮಧ್ಯಾಹ್ನದ ಊಟವನ್ನು ಬಹಳ ಬೇಗ ಮಾಡುವುದರಿಂದ ಸಂಜೆ ಬೇಗನೆ ಹಸಿವಾಗುತ್ತದೆ ಮತ್ತು ತಡವಾಗಿ ಊಟ ಮಾಡುವುದರಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಆಹಾರ ಹೊಟ್ಟೆಯನ್ನು ಸೇರುವಂತಾಗುತ್ತದೆ. ಹೀಗಾಗಿ ಸರಿಯಾದ ಸಮಯದಲ್ಲಿ ಊಟ ಮಾಡುವುದು ಬಹು ಮುಖ್ಯವಾಗಿದೆ.

► ಕೆಲವರು ಒಂದೇ ಬಗೆಯ ಆಹಾರವನ್ನು ಸೇವಿಸುತ್ತಿರುತ್ತಾರೆ. ಎಲ್ಲ ವಿಧಗಳ ಆಹಾರ ಸೇವನೆಯನ್ನು ನಾವು ಪ್ರಯತ್ನಿಸಬೇಕು. ನಾವು ಏನನ್ನು ತಿನ್ನುತ್ತೇವೋ ಅದರಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಎಲ್ಲ ವಿಧದ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯಕರ ಶರೀರಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳು ಲಭಿಸುತ್ತವೆ.

► ಹಣ್ಣುಗಳು ನಮ್ಮ ಆರೋಗ್ಯಕ್ಕೆ ಅಗತ್ಯವಾಗಿದ್ದು, ಅವುಗಳನ್ನು ನಮ್ಮ ಸಮತೋಲಿತ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಹೇರಳ ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಶರೀರಕ್ಕೆ ನೀಡುವ ಹಣ್ಣುಗಳನ್ನು ಊಟದ ಬಳಿಕ ಸೇವಿಸುವುದು ಅಗತ್ಯವಾಗಿದೆ.

► ಆರೋಗ್ಯವಂತರಾಗಿರಬೇಕು ಎಂದು ಬಯಸಿದ್ದರೆ ಆಹಾರದಲ್ಲಿ ಒಳ್ಳೆಯ ಕೊಬ್ಬಿನಿಂದ ವಂಚಿತರಾಗಬಾರದು. ಊಟದಲ್ಲಿ ಸಾಕಷ್ಟು ಕೊಬ್ಬು ಇಲ್ಲದಿದ್ದರೆ ಹಸಿವು ಕಾಡುತ್ತಲೇ ಇರುತ್ತದೆ. ಕೊಬ್ಬು ಮಿದುಳಿಗೂ ಆಹಾರವನ್ನು ಒದಗಿಸುತ್ತದೆ.?ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆಯಂತಹ ಆರೋಗ್ಯಕರ ಕೊಬ್ಬು ಆಹಾರದಲ್ಲಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News