×
Ad

ಆಧಾರ್ ದೃಢೀಕರಣ ವೈಫಲ್ಯ: ಜಾರ್ಖಂಡ್‌ನಲ್ಲಿ ಹಸಿವೆಗೆ ವೃದ್ಧೆ ಬಲಿ

Update: 2018-01-03 19:34 IST

ರಾಂಚಿ,ಜ.3: ಆಧಾರ್ ದೃಢೀಕರಣ ವೈಫಲ್ಯದಿಂದಾಗಿ ಕಳೆದ ಮೂರು ತಿಂಗಳುಗಳಿಂದಲೂ ತನ್ನ ಕುಟುಂಬಕ್ಕೆ ಉಚಿತ ಪಡಿತರವನ್ನು ನಿರಾಕರಿಸಿದ್ದರಿಂದ ಕಡುಬಡತನವನ್ನೇ ಹಾಸುಹೊದ್ದಿದ್ದ ವೃದ್ಧೆಯೋರ್ವಳು ಹಸಿವಿನಿಂದ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ನಡೆದಿದೆ. ಇದು ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಹಸಿವೆಯಿಂದ ಸಾವು ಸಂಭವಿಸಿರುವ ನಾಲ್ಕನೇ ಪ್ರಕರಣವಾಗಿದೆ. ಆದರೆ ಇದನ್ನು ನಿರಾಕರಿಸಿರುವ ಸರಕಾರವು ಅನಾರೋಗ್ಯ ಈ ಸಾವುಗಳಿಗೆ ಕಾರಣವೆಂದು ಹೇಳಿಕೊಳ್ಳುತ್ತಾ ಬಂದಿದೆ.

ಸೋನಾಪುರ ಗ್ರಾಮದಲ್ಲಿ ತನ್ನ ಮಗ-ಸೊಸೆ ಮತ್ತು ಮೂವರು ಮಕ್ಕಳೊಂದಿಗೆ ವಾಸವಿದ್ದ ಎತ್ವರಿಯಾ ದೇವಿ ಹಸಿವು ತಾಳಲಾರದೇ ಡಿ.25ರಂದು ಕೊನೆಯುಸಿರೆಳೆದಿದ್ದಾಳೆ ಎಂದು ಎನ್‌ಜಿಒ ರೈಟ್ ಟು ಫುಡ್ ಕ್ಯಾಂಪೇನ್ ಆರೋಪಿಸಿದೆ.

ಈ ಕುಟುಂಬ ಪ್ರತಿ ತಿಂಗಳು 25ಕೆ.ಜಿ.ಉಚಿತ ಪಡಿತರ ಪಡೆಯಲು ಅರ್ಹವಾಗಿದ್ದು, ಕಳೆದ ಅಕ್ಟೋಬರ್‌ನಲ್ಲಿ ಕಳಪೆ ಅಂತರ್ಜಾಲ ಸಂಪರ್ಕದಿಂದಾಗಿ ಎತ್ವರಿಯಾ ದೇವಿಯ ಸೊಸೆ ಉಷಾದೇವಿಯ ಆಧಾರ್ ದೃಢೀಕರಣ ಸಾಧ್ಯವಾಗಿರಲಿಲ್ಲ ಮತ್ತು ಆ ಬಳಿಕ ಪಡಿತರ ಅಂಗಡಿಯ ಮಾಲಿಕ ಹಲವಾರು ನೆಪಗಳನ್ನು ಹೇಳಿಕೊಳ್ಳುತ್ತಲೇ ಬಂದಿದ್ದ. ಎತ್ವರಿಯಾ ದೇವಿಯ ಸಾವಿನ ದಿನದವರೆಗೂ ಈ ಕುಟುಂಬಕ್ಕೆ ಪಡಿತರ ನೀಡಲಾಗಿಲ್ಲ ಮತ್ತು ಪಿಒಎಸ್ ಯಂತ್ರ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ನೆಪವನ್ನು ಹೇಳಲಾಗಿತ್ತು ಎಂದು ಎನ್‌ಜಿಒ ಹೇಳಿದೆ.

ಅಂತರ್ಜಾಲ ಅಲಭ್ಯತೆಯ ಕಾರಣವನ್ನೊಡ್ಡಿ ಪಡಿತರ ವಿತರಣೆಯನ್ನು ನಿರಾಕರಿಸು ವಂತಿಲ್ಲ. ಪಡಿತರ ಅಂಗಡಿಕಾರ ತಪ್ಪೆಸಗಿರುವುದು ಕಂಡು ಬಂದರೆ ಆತನ ವಿರುದ್ಧ ಕ್ರಮವನ್ನು ಜರುಗಿಸಲಾಗುವುದು ಎಂದು ಗರ್ವಾ ಜಿಲ್ಲಾಧಿಕಾರಿ ನೇಹಾ ಅರೋರಾ ಹೇಳಿದ್ದಾರೆ.

ಎತ್ವರಿಯಾ ದೇವಿಗೆ ಮಾಸಿಕ 600 ರೂ.ಗಳ ಪಿಂಚಣಿ ದೊರೆಯುತ್ತಿದ್ದು, ಆಧಾರ್ ದೃಢೀಕರಣ ವೈಫಲ್ಯದಿಂದಾಗಿ ಅಕ್ಟೋಬರ್ ತಿಂಗಳ ಪಿಂಚಣಿ ವಿಳಂಬವಾಗಿ ಕೈ ಸೇರಿತ್ತು ಮತ್ತು ಆನಂತರದ ಪಿಂಚಣಿ ಆಕೆಗೆ ಬಂದಿರಲಿಲ್ಲ ಎಂದು ಎನ್‌ಜಿಒದ ಪ್ರತಿನಿಧಿ ಸಿರಾಜ್ ದತ್ತಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News