ದ್ರಾವಿಡ ಸಂಸ್ಕೃತಿಗೆ ಹೊಗೆ ಹಾಕದಿರಲಿ

Update: 2018-01-05 18:28 GMT

ಮಾನ್ಯರೇ,

 ರಜನಿಕಾಂತರ ರಾಜಕೀಯ ಪ್ರವೇಶವನ್ನು ಸ್ವಾಗತಿಸಲಾರದ ಸ್ಥಿತಿಯಲ್ಲಿ ಪ್ರಜ್ಞಾವಂತರು ಒದ್ದಾಡಬೇಕಾಗಿದೆ. ಮೊದಲನೆಯದಾಗಿ ಇಷ್ಟು ವರ್ಷ ಸುಮ್ಮನಿದ್ದು ತೀರಾ ಇಳಿವಯಸ್ಸಿನಲ್ಲಿ ಬಂದಿದ್ದಾರೆ ರಜನಿ. ಅಭ್ಯಾಸವಾಗಿರುವ ಚಿತ್ರರಂಗದಲ್ಲೇ ಬಹುಕಾಲ ಸಕ್ರಿಯರಾಗಿರುವುದು ಅವರಿಗೆ ಇನ್ನು ಸಾಧ್ಯವಾಗಲಾರದು. ಅಂತಹದ್ದರಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟಿ, ಬಲಗೊಳಿಸಲು ಅವರೊಬ್ಬರಿಂದ ಖಂಡಿತ ಸಾಧ್ಯವಿಲ್ಲ. ಇದನ್ನು ತಿಳಿದೇ ನಾಯಿನರಿಗಳು ಪಾಲಿಗಾಗಿ ಹೊಂಚುಹಾಕುತ್ತಿವೆ.

ಆರಂಭದಲ್ಲೇ ರಜನಿಕಾಂತ್ ಆಷಾಢಭೂತಿತನ ಪ್ರದರ್ಶಿಸಿದ್ದಾರೆ. ಸಿನೆಮಾವೊಂದಕ್ಕೆ ಕೋಟ್ಯಂತರ ರೂ. ಸಂಭಾವನೆ ಪಡೆದು ಕೋಟ್ಯಧೀಶರಾಗಿರುವ ಅವರು ‘ಮಾಫಲೇಶು ಕದಾಚನ’ ಎಂದು ಯಾರಿಗೆ ಹೇಳಿದ್ದಾರೆ? ಶೂದ್ರ ಸಮುದಾಯದ ಸಾಧಕರಾದ ತಾವೂ ಸಹ ಮನುವಾದಿಗಳ ದೃಷ್ಟಿಯಲ್ಲಿ ‘ಪಾಪಯೋನಿಜ’ರೆಂಬುದು ಅವರಿಗೆ ಗೊತ್ತೇ ಇದ್ದಂತಿಲ್ಲ. ಇಡೀ ಭಾಷಣದಲ್ಲಿ ಡ್ರಾವಿಡ ಸಂಸ್ಕೃತಿ, ಪೆರಿಯಾರ್, ತಮಿಳು ಸಾಹಿತಿಗಳ ಮೇಲೆ ಮನುವಾದಿಪಡೆ ವಿಧಿಸಿದ ನಿಷೇಧ ಇತ್ಯಾದಿಗಳ ಬಗ್ಗೆ ಅವರು ಸೂಕ್ತ ರೀತಿಯಲ್ಲಿ ಪ್ರಸ್ತಾಪಿಸಲೇ ಇಲ್ಲ. ಬದಲಿಗೆ ಕೇಸರಿ ಪಕ್ಷದ ‘ಬಿ’ ಟೀಮ್ ಆಗುವ ಲಕ್ಷಣಗಳನ್ನು ತೋರಿದರು.

ಬಾಳಾಠಾಕ್ರೆಯನ್ನು ಹೊಗಳಿದ, ಮೋದಿಯವರನ್ನು ಮೆಚ್ಚುವ ರಜನಿಕಾಂತ್‌ರಿಂದ ಮುತ್ಸದ್ದಿ ನಡೆಯನ್ನು, ಗಟ್ಟಿತನವನ್ನು ನಿರೀಕ್ಷಿಸಲಾಗದು. ‘ಪ್ರಜಾರಾಜ್ಯಂ’ ಕಟ್ಟಿ, ಮಣ್ಣು ಮಾಡಿ ಕಾಂಗ್ರೆಸ್ ಸೇರಿದ್ದಾರೆ ಚಿರಂಜೀವಿ. ರಜನಿಕಾಂತ್ ಪಕ್ಷಕ್ಕೂ ಅದೇ ಗತಿ ಒದಗಿ ಅವರು ಕೇಸರಿ ಪಕ್ಷಕ್ಕೆ ಸೇರಿದರೆ ತಮಿಳುನಾಡನ್ನು ಆರ್ಯರಿಗೆ ಆಹುತಿಕೊಟ್ಟಂತೆಯೇ...

ಎಪ್ಪತ್ತು- ಎಂಬತ್ತರ ದಶಕದಲ್ಲಿ ರಜನೀಕಾಂತ್ ಸ್ಟೈಲಾಗಿ ಸಿಗರೇಟು ಸೇದಿ ಸಾವಿರಾರು ಎಳೆಯರ ಶ್ವಾಸಕೋಶಗಳಿಗೆ ಹೊಗೆಹಾಕಿದರು. ಇದೀಗ ದಕ್ಷಿಣ ಭಾರತದ ದ್ರಾವಿಡ ಸಂಸ್ಕೃತಿಗೆ ಹೊಗೆ ಹಾಕಿ ಇತಿಹಾಸದಲ್ಲಿ ತಲೈವಾ ತಲೆತೆಗೆದವನಾಗಿ ದಾಖಲಾಗದಿರಲಿ.

-ಕಸ್ತೂರಿ, ತುಮಕೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News