2018ರಲ್ಲಿ ಬಾಲಿವುಡ್‌ನ ಮೋಸ್ಟ್ ವಾಂಟೆಡ್ ಚಿತ್ರಗಳು

Update: 2018-01-06 12:51 GMT

ಪ್ರತಿವರ್ಷದಂತೆ, 2018ರಲ್ಲಿ ಬಹಳಷ್ಟು ಬಾಲಿವುಡ್ ಚಿತ್ರಗಳು ತೆರೆ ಕಾಣಲಿವೆ. ಆದರೆ ಕೆಲವು ಚಿತ್ರಗಳ ಬಗ್ಗೆ ಬಾಲಿವುಡ್ ಚಿತ್ರೋದ್ಯಮ ಅಪಾರವಾದ ನಿರೀಕ್ಷೆಯಿಟ್ಟುಕೊಂಡಿದೆ. ಇವುಗಳಲ್ಲಿ ಕೆಲವು ಬಿಗ್‌ಬಜೆಟ್ ಚಿತ್ರಗಳಾದರೆ, ಇನ್ನೂ ಕೆಲವು ಖ್ಯಾತ ನಟ,ನಟಿಯರ ತಾರಾಗಣವಿರುವ ಹಾಗೂ ಸ್ಟಾರ್ ನಿರ್ದೇಶಕರ ಚಿತ್ರಗಳಾಗಿವೆ. ಒಟ್ಟಿನಲ್ಲಿ ಬಾಲಿವುಡ್ ಪ್ರೇಕ್ಷಕರನ್ನು ಈ ವರ್ಷ ರಂಜಿಸಲು ಸಿದ್ಧವಾಗಿರುವ ಕೆಲವು ಬಹುನಿರೀಕ್ಷೆಯ ಚಿತ್ರಗಳ ಕುರಿತ ಕಿರು ಝಲಕ್ ಇಲ್ಲಿದೆ.

►ಅಕ್ಟೋಬರ್

               ಶೂಜಿತ್ ಸರ್ಕಾರ್

ಶೂಜಿತ್ ಸರ್ಕಾರ್ ನಿರ್ದೇಶನದ ಚಿತ್ರದ ಟೈಟಲ್ ‘ಅಕ್ಟೋಬರ್’ ಎಂದಿದ್ದರೂ, ಚಿತ್ರ ಮಾತ್ರ ಏಪ್ರಿಲ್‌ನಲ್ಲೇ ಬಿಡುಗಡೆಯಾಗಲಿದೆ. 2017ರ ಅತ್ಯಂತ ಯಶಸ್ವಿ ನಟನೆಂಬ ಹೆಗ್ಗಳಿಕೆ ಪಡೆದಿರುವ ವರುಣ್‌ಧವನ್ ಚಿತ್ರದ ನಾಯಕ. ಕೆಲವು ಜಾಹೀರಾತುಗಳಲ್ಲಿ ನಟಿಸಿರುವ ಬನಿತಾ ಸಂಧು, ಅಕ್ಟೋಬರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ತೀರಾ ವಿಭಿನ್ನವಾದ ಪ್ರೇಮಕಥೆಯನ್ನು ಹೊಂದಿರುವ ಚಿತ್ರ ಇದೆನ್ನಲಾಗಿದೆ. ಪತ್ರಿಕೆಯೊಂದರಲ್ಲಿ ಪ್ರಕಟವಾದ ಸಣ್ಣ ಸುದ್ದಿಯೊಂದು ಈ ಚಿತ್ರಕ್ಕೆ ಪ್ರೇರಣೆಯೆಂದು ನಿರ್ದೇಶಕ ಶೂಜಿತ್ ಸರ್ಕಾರ್ ಹೇಳಿದ್ದಾರೆ. 2015ರ ಸೂಪರ್‌ಹಿಟ್ ಚಿತ್ರ ಪೀಕೂವನ್ನು ನಿರ್ದೇಶಿಸಿದ್ದ ಶೂಜಿತ್ ಸರ್ಕಾರ್, ಅಕ್ಟೋಬರ್ ಮೂಲಕ ಬಾಲಿವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆಯಿದೆ.

►ಫ್ಯಾನಿಖಾನ್

ತಾಲ್ ಚಿತ್ರದ ಬಳಿಕ ಐಶ್ವರ್ಯಾ ರೈ ಬಚ್ಚನ್ ಹಾಗೂ ಅನಿಲ್ ಕಪೂರ್ ಈ ಚಿತ್ರದ ಮೂಲಕ ಮತ್ತೆ ಜೊತೆಗೂಡಿದ್ದಾರೆ. ಹಾಸ್ಯ ಹಾಗೂ ಭಾವುಕತೆಗಳ ಸಮ್ಮಿಲನವಿರುವ ಈ ಚಿತ್ರದಲ್ಲಿ , ಖ್ಯಾತ ಗಾಯಕಿ (ಐಶ್ವರ್ಯಾ ರೈ) ಯೊಬ್ಬಳು, ತನ್ನ ಪುತ್ರಿ ಜನಪ್ರಿಯ ಗಾಯಕಿಯಾಗಬೇಕೆಂಬ ಹಂಬಲ ಹೊತ್ತಿರುವ ವ್ಯಕ್ತಿ (ಅನಿಲ್‌ಕಪೂರ್)ಯಿಂದ ಅಪಹರಿಸಲ್ಪಟ್ಟಾಗ, ನಡೆಯುವ ರೋಚಕ ಘಟನೆಗಳ ಸುತ್ತ ಚಿತ್ರ ತಿರುಗುತ್ತದೆ. ಆಸ್ಕರ್‌ಗೆ ನಾಮಕರಣಗೊಂಡ ಬೆಲ್ಜಿಯನ್ ಚಿತ್ರ ಏವರಿಬಡಿ ವಾಂಟ್ಸ್ ಟು ಬಿ ಫೇಮಸ್‌ನ ಕಥೆಯಿಂದ ಪ್ರೇರಿತವಾದ ಫ್ಯಾನಿಖಾನ್ ಜೂನ್ 15ರಂದು ಬಿಡುಗಡೆಯಾಗಲಿದೆ. ರಾಜ್‌ಕುಮಾರ್ ರಾವ್ ಚಿತ್ರದ ಇನ್ನೋರ್ವ ನಾಯಕ. ಹೊಸಬರಾದ ಅತುಲ್ ಮಂಜ್ರೇಕರ್, ಈ ಚಿತ್ರದ ನಿರ್ದೇಶಕ.

►ಗೋಲ್ಡ್‌

ಗಣರಾಜ್ಯೋತ್ಸವದಂದು ಅಕ್ಷಯ್ ಅಭಿನಯದ ಪ್ಯಾಡ್‌ಮ್ಯಾನ್ ತೆರೆಕಂಡರೆ, ಸ್ವಾತಂತ್ರೋತ್ಸವದ ದಿನವಾದ ಆಗಸ್ಟ್ 15ರಂದು, ಈ ನಟನ ಗೋಲ್ಡ್ ರಿಲೀಸ್ ಆಗಲಿದೆ. 1948ರ ಒಲಿಂಪಿಕ್ಸ್‌ನಲ್ಲಿ ಭಾರತ ಚಾರಿತ್ರಿಕ ಹಾಕಿ ಚಿನ್ನವನ್ನು ಗೆದ್ದ ರೋಮಾಂಚಕ ಘಟನೆ ಈ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮರುಸೃಷ್ಟಿಯಾಗಲಿದೆ.

ರೀಮಾ ಕಾಗ್ತಿ ನಿರ್ದೇಶನದ ಗೋಲ್ಡ್‌ನಲ್ಲಿ, ಇಡೀ ಚಿತ್ರ ಹಾಕಿ ಕ್ರೀಡೆಯ ಸುತ್ತ ಕೇಂದ್ರೀಕೃತವಾಗಿದೆ. ಅಂದಹಾಗೆ ಗೋಲ್ಡ್ ಕೇವಲ 1948ರ ಒಲಿಂಪಿಕ್‌ನಲ್ಲಿ ಭಾರತದ ಹಾಕಿ ಗೆಲುವನ್ನು ಮಾತ್ರವಲ್ಲ, ಭಾರತದ ಇತಿಹಾಸದ 12 ನಿರ್ಣಾಯಕ ವರ್ಷಗಳ ವಿದ್ಯಮಾನಗಳನ್ನೂ ಈ ಚಿತ್ರವು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲಿದೆ.ಈಗಾಗಲೇ ಬಿಡುಗಡೆಯಾಗಿರುವ ಗೋಲ್ಡ್‌ನ ಟೀಸರ್, ಚಿತ್ರದ ಬಗ್ಗೆ ಸಿನೆಮಾಪ್ರೇಮಿಗಳ ಕಾತರವನ್ನು ಇಮ್ಮಡಿಗೊಳಿಸಿದೆ.ವೌನಿ ರಾಯ್ ಹಾಗೂ ಗೌಹರ್ ಖಾನ್ ಚಿತ್ರದ ನಾಯಕಿಯರು.

►ಸೂಪರ್ 30

ಶಾನ್‌ದಾರ್ ಚಿತ್ರದ ಸೋಲಿನಿಂದ ಕಂಗೆಡದ ನಿರ್ದೇಶಕವಿಕಾಸ್ ಬೆಹ್ಲ್, ಸೂಪರ್ 30 ಮೂಲಕ ಮತ್ತೆ ವಾಪಸಾಗುತ್ತಿದ್ದಾರೆ.ಬಿಹಾರದ ಪಾಟ್ನಾದಲ್ಲಿ ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಐಐಟಿ ತರಬೇತಿ ನೀಡಿ, ದೇಶಾದ್ಯಂತ ಮನೆಮಾತಾಗಿರುವ ಆನಂದ್‌ಕುಮಾರ್ ಅವರ ಜೀವನಾಧಾರಿತ ಚಿತ್ರ ಇದಾಗಿದೆ.ಆನಂದ್ ಕುಮಾರ್ ಅವರ ಪಾತ್ರದಲ್ಲಿ ಬಾಲಿವುಡ್‌ನ ಸೂಪರ್‌ಸ್ಟಾರ್ ಹೃತಿಕ್ ರೋಶನ್ ನಟಿಸಿದ್ದಾರೆ. ಜನಪ್ರಿಯ ಹಿಂದಿ ಟಿವಿ ಧಾರಾವಾಹಿ ಕುಂಕುಮ್ ಭಾಗ್ಯದ ನಟಿ ಮೃಣಾಲ್ ಠಾಕೂರ್ ಚಿತ್ರದಲ್ಲಿ ಆನಂದ್ ಕುಮಾರ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಹೃತಿಕ್ ರೋಶನ್ ಬಯೋಪಿಕ್ ಚಿತ್ರವೊಂದರಲ್ಲಿ ನಟಿಸುತ್ತಿರುವುದು ಇದೇ ಮೊದಲ ಸಲವಾಗಿದೆ. ನವೆಂಬರ್ 23ರಂದು ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

►ಪ್ಯಾಡ್‌ಮ್ಯಾನ್

ಜನವರಿ 26ರಂದು ಬೆಳ್ಳಿತೆರೆಗೆ ಅಪ್ಪಳಿಸಲಿರುವ ಪ್ಯಾಡ್‌ಮ್ಯಾನ್ ಬಗ್ಗೆ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ವ್ಯಾಪಕ ನಿರೀಕ್ಷೆ ವ್ಯಕ್ತವಾಗಿದೆ. ಅಕ್ಷಯ್ ಕುಮಾರ್ ನಾಯಕನಾಗಿ ನಟಿಸಿರುವ ‘ಪ್ಯಾಡ್‌ಮ್ಯಾನ್’, ಗ್ರಾಮೀಣ ಮಹಿಳೆಯರಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸಲು ಅಪಾರವಾಗಿ ಶ್ರಮಿಸಿದ ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತ ಅರುಣಾಚಲಂ ಮುರುಗಾನಂದಮ್‌ನ ಜೀವನಾಧಾರಿತ ಕಥೆಯನ್ನು ಹೊಂದಿದೆ. ಲಿಂಗಸಮಾನತೆಯನ್ನು ಪ್ರತಿಪಾದಿಸುವ ಪ್ಯಾಡ್‌ಮ್ಯಾನ್ ಚಿತ್ರದಲ್ಲಿ ರಾಧಿಕಾ ಅಪ್ಟೆ, ಸೋನಮ್ ಕಪೂರ್ ನಾಯಕಿಯರು.ಶಮಿತಾಭ್, ಕಿ ಆ್ಯಂಡ್ ಕಾ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಆರ್.ಬಾಲ್ಕಿ ಪ್ಯಾಡ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

►ಪದ್ಮಾವತ್

ಕಳೆದ ವರ್ಷ ಭಾರೀ ವಿವಾದಕ್ಕೆ ತುತ್ತಾಗಿದ್ದ ಪದ್ಮಾವತಿ ಈ ವರ್ಷದ ಆರಂಭದ ವೇಳೆಗೆ ಬಿಡುಗಡೆಗೊಳ್ಳವುದು ಈಗ ಖಚಿತವಾಗಿದೆ. ಕಳೆದ ವರ್ಷ ತೆರೆಕಾಣಬೇಕಿದ್ದ ಈ ಚಿತ್ರ, ‘ಪದ್ಮಾವತ್’ ಎಂಬ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ. ಸೆನ್ಸಾರ್ ಮಂಡಳಿಯು ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಿ, ಚಿತ್ರದ ಬಿಡುಗಡೆಗೆ ಹಸಿರು ನಿಶಾನೆ ತೋರಿಸಿದೆ.

ಭಾರೀ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪದ್ಮಾವತ್‌ನ್ನು ಕ್ಲಾಸಿಕ್ ಚಿತ್ರಗಳ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ನಾಯಕಿ ಪ್ರಧಾನವಾದ ಕಥೆಯಿರುವ ಈ ಚಿತ್ರವು ದೀಪಿಕಾ ಪಡುಕೋಣೆಗೆ ಹೊಸ ಇಮೇಜನ್ನು ನೀಡುವ ನಿರೀಕ್ಷೆಯಿದೆ. ಶಹೀದ್ ಕಪೂರ್ ಹಾಗೂ ರಣವೀರ್‌ಸಿಂಗ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

►ಝೀರೋ

‘ತನು ವೆಡ್ಸ್ ಮನು’ ಖ್ಯಾತಿಯ ಆನಂದ್ ಎಲ್.ರಾಯ್, 2018ರಲ್ಲೂ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಗೆಲುವನ್ನು ಕಾಣುವ ತವಕದಲ್ಲಿದ್ದಾರೆ. ಅವರ ಝೀರೋ ಚಿತ್ರಕ್ಕಾಗಿ ಬಾಲಿವುಡ್ ಚಿತ್ರರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಬಾಲಿವುಡ್ ಬಾದ್‌ಷಾ ಶಾರುಕ್‌ಖಾನ್, ಚಿತ್ರದಲ್ಲಿ ಕುಳ್ಳಗಿನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರದ ಸೋಲಿನಿಂದ ಮಂಕಾಗಿರುವ ಶಾರುಕ್‌ಗೆ ಝೀರೋ, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಗೆಲುವು ತಂದುಕೊಡುವ ನಿರೀಕ್ಷೆಯಿದೆ. ಬಾಲಿವುಡ್‌ನ ಖ್ಯಾತ ನಟಿಮಣಿಯರಾದ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ಕೂಡಾ ಚಿತ್ರದಲ್ಲಿದ್ದಾರೆ. ಡಿಸೆಂಬರ್ 21ರಂದು ಬಿಡುಗಡೆಗೊಳ್ಳಲಿರುವ ಝೀರೋದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗಿಬಿಟ್ಟಿದೆ.

►ರೇಸ್ 3

ಈ ವರ್ಷದ ಈದ್‌ನಲ್ಲೂ ‘ಬಾಕ್ಸ್ ಆಫೀಸ್ ಸುಲ್ತಾನ್’, ಸಲ್ಮಾನ್ ಖಾನ್ ಅಭಿನಯದ ಚಿತ್ರ ಬಿಡುಗಡೆಗೊಳ್ಳುವುದು ಖಚಿತವಾಗಿದೆ. ಹೌದು ಅವರು ನಟಿಸಿರುವ ರೇಸ್ 3, ಜೂನ್ 14ರಂದು ಬಿಡುಗಡೆಗೊಳ್ಳುವುದು ಖಚಿತವಾಗಿದೆ. ರೇಸ್ ಸರಣಿಯ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸಲ್ಮಾನ್ ಕಾಣಿಸಿಕೊಳ್ಳುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಡೇಸಿ ಶಾ, ಸಾಕಿಬ್ ಸಾಲಿಮ್ ಹಾಗೂ ಬಾಬಿ ಡಿಯೋಲ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅತ್ಯಂತ ಅದ್ಭುತವಾದ ಆ್ಯಕ್ಷನ್ ದೃಶ್ಯಗಳು ಈ ಚಿತ್ರದ ಹೈಲೈಟ್ ಎಂದು ಚಿತ್ರತಂಡವು ಈಗಾಗಲೇ ಹೇಳಿಕೊಂಡಿದೆ. ಎಬಿಸಿಡಿ ಸರಣಿಯ ಚಿತ್ರಗಳ ನಿರ್ದೇಶಕ, ರೆಮೋ ಡಿಸೋಜಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಐಶ್ವರ್ಯಾ ಹಾಗೂ ಅನಿಲ್ ಕಪೂರ್ ಅಭಿನಯದ ಫ್ಯಾನಿ ಖಾನ್ ಕೂಡಾ ಈದ್ ವೇಳೆಯಲ್ಲೇ ಬಿಡುಗಡೆಯಾಗಲಿದ್ದು, ಎರಡೂ ಚಿತ್ರಗಳ ನಡುವೆ ಬಾಕ್ಸ್‌ಆಫೀಸ್ ಕದನ ನಡೆಯುವ ಸಾಧ್ಯತೆಯಿದೆ.

►ಹಿಚ್‌ಕಿ

ಬಾಲಿವುಡ್‌ನ ಪ್ರತಿಭಾವಂತ ನಟಿ ರಾಣಿಯ ಕಂಬ್ಯಾಕ್ ಚಿತ್ರವಾಗಿರುವ ಹಿಚ್‌ಕಿ ಈಗಾಗಲೇ ಭಾರೀ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ರಾಣಿ, ಬಿಕ್ಕಳಿಕೆಯ ತೊಂದರೆಯಿಂದ ಬಳಲುತ್ತಿರುವ ಶಿಕ್ಷಕಿಯ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದಾರೆಂಬ ಮಾತುಗಳು ಚಿತ್ರವಲಯದಲ್ಲಿ ಕೇಳಿಬರುತ್ತಿವೆ. ಕೊಳೆಗೇರಿಯ ಕಿಡಿಗೇಡಿ ಮಕ್ಕಳನ್ನು ತಿದ್ದಿ, ಸರಿದಾರಿಗೆ ತರುವ ಶಿಕ್ಷಕಿಯಾಗಿ ಅವರು ಅಭಿನಯಿಸಿದ್ದಾರೆ. ಹಾಲಿವುಡ್ ಚಿತ್ರ ‘‘ಫ್ರಂಟ್ ಆಫ್ ದಿ ಕ್ಲಾಸ್’’ನ ರಿಮೇಕ್ ಆಗಿರುವ ಈ ಚಿತ್ರವನ್ನು ರಾಣಿ ಮುಖರ್ಜಿಯ ಪತಿ ಆದಿತ್ಯ ಚೋಪ್ರಾ, ಯಶ್‌ರಾಜ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಿದ್ದಾರೆ. ಫೆಬ್ರವರಿ 23ರಂದು ಚಿತ್ರ ತೆರೆಕಾಣಲಿದೆ.

►ಸಂಜಯ್‌ದತ್ತ್ ಬಯೋಪಿಕ್

ಬಾಲಿವುಡ್‌ನ ‘ಮುನ್ನಾಭಾಯಿ’ ಸಂಜಯ್‌ದತ್ತ್ ಅವರ ಜೀವನಕಥೆಯನ್ನು ಆಧರಿಸಿದ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಸಂಜಯ್‌ದತ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಮಾದಕದ್ರವ್ಯ ವ್ಯಸನ, ವಿಷಮ ದಾಂಪತ್ಯ ಜೀವನ, ಕಾರಾಗೃಹ ವಾಸ ಸಂಜಯ್‌ದತ್ತ್ ಬದುಕಿನ ಏಳುಬೀಳುಗಳನ್ನು ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆಯಂತೆ. ರಾಜ್‌ಕುಮಾರ್ ಹೀರಾನಿ ನಿರ್ದೇಶನದ ಈ ಚಿತ್ರವನ್ನು ಭಾರೀ ವೆಚ್ಚದಲ್ಲಿ ನಿರ್ಮಿಸಲಾಗಿದೆ.ಇನ್ನೂ ಹೆಸರಿಡದ ಈ ಚಿತ್ರವು ಮಾರ್ಚ್ 30ರಂದು ತೆರೆಕಾಣುವುದು ಪಕ್ಕಾ ಆಗಿದೆ.

►ಥಗ್ಸ್ ಆಫ್ ಹಿಂದೂಸ್ಥಾನ್

ಬಾಲಿವುಡ್‌ನ ಮಿಸ್ಟರ್ ಪರ್‌ಫೆಕ್ಷನಿಸ್ಟ್ಟ್ ಆಮಿರ್‌ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ಥಾನ್ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಯಶ್‌ರಾಜ್ ಫಿಲ್ಮ್ಸ್ ಭಾರೀ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಈಸ್ಟ್ ಇಂಡಿಯಾ ಕಂಪೆನಿಯ ಆಳ್ವಿಕೆ ಕಾಲದಲ್ಲಿದ್ದ ಪಿಂಡಾರಿಗಳ ಕಥೆ ಹೇಳುವ ಈ ಚಿತ್ರದಲ್ಲಿ ಆಮಿರ್‌ಖಾನ್ ದರೋಡೆಕೋರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಕೆದರಿದ ಕೂದಲು, ಕೊಳಕು ಉಡುಪಿನಲ್ಲಿರುವ ಆಮಿರ್‌ಖಾನ್ ಅವರ ಗೆಟಪ್ ಈಗಾಗಲೇ ಸಾಕಷ್ಟು ವೈರಲ್ ಆಗಿದೆ. ಇದೇ ಮೊದಲ ಬಾರಿಗೆ ಥಗ್ಸ್ ಆಫ್ ಹಿಂದೂಸ್ತಾನ್ ಮೂಲಕ ಆಮಿರ್‌ಖಾನ್ ಹಾಗೂ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದಾರೆ. ಫಿಲಿಪ್ಸ್ ಮಿಡೋ ಟೇಲರ್ ಬರೆದಿರುವ ‘ಕನ್‌ಫೆಶನ್ಸ್ ಆಫ್ ಎ ಥಗ್’ ಕಾದಂಬರಿಯನ್ನು ಆಧರಿಸಿದ ಈ ಚಿತ್ರವನ್ನು ಧೂಮ್ 2 ಖ್ಯಾತಿಯ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸಿದ್ದಾರೆ.

ಅಮಿತಾಭ್ ಬಚ್ಚನ್‌ಗೆ ಈ ಚಿತ್ರದಲ್ಲಿ ಅವರು ಹಿಂದೆಂದೂ ಅಭಿನಯಸದೇ ಇದ್ದಂತಹ ಅತ್ಯದ್ಭುತವಾದ ಪಾತ್ರವೊಂದು ದೊರೆತಿದೆಯಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಕತ್ರಿನಾ ಕೈಫ್, ದಂಗಲ್ ಖ್ಯಾತಿಯ ಸಾನಾ ಶೇಖ್ ನಾಯಕಿಯರಾಗಿ ನಟಿಸಿದ್ದು, ಜಾಕಿ ಶ್ರಾಫ್‌ಗೆ ಕೂಡಾ ಮುಖ್ಯವಾದ ಪಾತ್ರವೊಂದಿದೆಯಂತೆ. ನವೆಂಬರ್ 7ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರ ಈಗಾಗಲೇ ಬಾಲಿವುಡ್‌ನಲ್ಲಿ ಭಾರೀ ಸುದ್ದಿ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News