500 ರೂ.ಗೆ ಆಧಾರ್ ಮಾಹಿತಿ ಬಗ್ಗೆ ವರದಿ: ಯುಐಡಿಎಐನಿಂದ ಪ್ರಕರಣ ದಾಖಲು

Update: 2018-01-07 14:08 GMT

ಹೊಸದಿಲ್ಲಿ,ಜ.7: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ದ ದತ್ತಾಂಶ ಕೋಶದಿಂದ ಆಧಾರ್ ಮಾಹಿತಿಗಳನ್ನು ಅಕ್ರಮವಾಗಿ ಪಡೆದುಕೊಳ್ಳಬಹುದು ಎನ್ನುವುದನ್ನು ಬಯಲಿಗೆಳೆದಿದ್ದ ಟ್ರಿಬ್ಯೂನ್ ವರದಿಗಾರನ ವಿರುದ್ಧ ಪೊಲೀಸ್ ಪ್ರಕರಣವೊಂದು ದಾಖಲಾಗಿದೆ. ಯುಐಡಿಎಐ ದಾಖಲಿಸಿರುವ ದೂರಿನಲ್ಲಿ ವರದಿಗಾರನಿಂದ ಹಣವನ್ನು ಪಡೆದುಕೊಂಡು ದತ್ತಾಂಶ ಕೋಶಕ್ಕೆ ಕನ್ನ ಹಾಕಲು ನೆರವಾಗಿದ್ದ ವ್ಯಕ್ತಿಗಳನ್ನೂ ಹೆಸರಿಸಲಾಗಿದೆ.

500 ರೂ.ಗಳಲ್ಲಿ ಆಧಾರ್ ದತ್ತಾಂಶ ಕೋಶಕ್ಕೆ ಕನ್ನ ಹಾಕಲು ಅಗತ್ಯ ಲಾಗಿನ್ ಸಂಕೇತಗಳ ಕೊಡುಗೆ ತನಗೆ ಬಂದಿದ್ದು, ತನ್ನ ವರದಿಗಾರ ಹಣವನ್ನು ತೆತ್ತು ದತ್ತಾಂಶ ಕೋಶಕ್ಕೆ ಲಾಗಿನ್ ಆಗಲು ಅಗತ್ಯ ವಿವರಗಳನ್ನು ಪಡೆದುಕೊಂಡಿದ್ದ. ಈ ಲಾಗಿನ್ ಡಿಟೇಲ್‌ಗಳನ್ನು ಬಳಸಿ ವ್ಯಕ್ತಿಯೋರ್ವನ ಆಧಾರ್ ಮಾಹಿತಿಗಳನ್ನು ನೋಡಲು ಆತನಿಗೆ ಸಾಧ್ಯವಾಗಿತ್ತು ಎಂದು ಟ್ರಿಬ್ಯೂನ್ ತನ್ನ ವರದಿಯಲ್ಲಿ ತಿಳಿಸಿತ್ತು.

ಪೊಲೀಸ್ ಪ್ರಕರಣ ದಾಖಲಾಗಿರುವುದನ್ನು ಟ್ರಿಬ್ಯೂನ್ ರವಿವಾರ ದೃಢಪಡಿಸಿದೆ.

ದತ್ತಾಂಶ ಕೋಶಕ್ಕೆ ಅನಧಿಕೃತ ಪ್ರವೇಶ ಕ್ರಿಮಿನಲ್ ಅಪರಾಧವಾಗಿರುವುದರಿಂದ ಯುಐಡಿಎಐ ಪ್ರಕರಣವನ್ನು ದಾಖಲಿಸಿದೆ ಎಂದು ಮೂಲವು ತಿಳಿಸಿದೆ.

ಯಾವುದೇ ವ್ಯಕ್ತಿಯ ಬೆರಳಚ್ಚುಗಳು ಮತ್ತು ಅಕ್ಷಿಪಟಲದ ಸ್ಕಾನ್ ವೀಕ್ಷಿಸಲು ಸಾಧ್ಯವಾಗಿತ್ತೇ ಮತ್ತು ಎಷ್ಟು ಜನರ ವಿವರಗಳನ್ನು ನೋಡಲಾಗಿತ್ತು ಎನ್ನುವುದನ್ನು ಸ್ಪಷ್ಟಪಡಿಸುವಂತೆಯೂ ಯುಐಡಿಎಐ ಶನಿವಾರ ಟ್ರಿಬ್ಯೂನ್‌ಗೆ ಬರೆದಿರುವ ಪತ್ರದಲ್ಲಿ ವರದಿಗಾರನಿಗೆ ಸೂಚಿಸಿದೆ.

ಆಧಾರ್ ದತ್ತಾಂಶ ಕೋಶದ ಉಲ್ಲಂಘನೆಯಾಗಿದೆ ಎನ್ನುವುದನ್ನು ಯುಐಡಿಎಐ ಈಗಾಗಲೇ ನಿರಾಕರಿಸಿದೆಯಾದರೂ, ದೂರುಗಳನ್ನು ಬಗೆಹರಿಸಲು ಪ್ರಜೆಗಳ ಆಧಾರ ಮಾಹಿತಿಗಳನ್ನು ತಲುಪಲು ನಿಯೋಜಿತ ಆಧಿಕಾರಿಗಳಿಗೆ ಒದಗಿಸಿರುವ ಸೌಲಭ್ಯಗಳ ದುರುಪಯೋಗವಾಗಿದೆ ಎನ್ನುವುದನ್ನು ಒಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News