ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣ ನಡೆಸಿರಲಿಲ್ಲ

Update: 2018-01-07 15:01 GMT

ಹೊಸದಿಲ್ಲಿ.ಜ.7: ಅರುಣಾಚಲ ಪ್ರದೇಶದಲ್ಲಿ ಇತ್ತೀಚಿನ ಚೀನಾ ಅತಿಕ್ರಮಣವು ಅನುದ್ದಿಷ್ಟವಾಗಿತ್ತು ಮತ್ತು ಕೆಲವು ಕಾರ್ಮಿಕರು ಅರಿವಿಲ್ಲದೆ ಗಡಿಯನ್ನು ದಾಟಿದ್ದರು,ಅದರಲ್ಲಿ ಚೀನಿ ಸೈನಿಕರು ಭಾಗಿಯಾಗಿರಲಿಲ್ಲ ಎಂದು ಭದ್ರತೆ ಸಂಬಂಧಿತ ವಿಷಯಗಳಲ್ಲಿ ಪ್ರಧಾನ ಮಂತ್ರಿಗಳಿಗೆ ಸಲಹೆ ನೀಡುವ ರಾಷ್ಟ್ರೀಯ ಸುರಕ್ಷತಾ ಮಂಡಳಿ(ಎನ್‌ಎಸ್‌ಸಿ)ಯ ವರದಿಯು ತಿಳಿಸಿದೆ.

ಕಾರ್ಮಿಕರಿಗೆ ನಿರ್ಮಾಣ ಕಾಮಗಾರಿಯನ್ನು ಒಪ್ಪಿಸಲಾಗಿತ್ತು ಮತ್ತು ಐಟಿಬಿಪಿಯ ಯೋಧರು ತಮಗೆದುರಾಗುವವರೆಗೂ ಅವರಿಗೆ ತಾವು ಭಾರತೀಯ ಭೂಪ್ರದೇಶದಲ್ಲಿ ಇದ್ದೇವೆ ಎನ್ನುವುದು ಗೊತ್ತಿರಲಿಲ್ಲ. ಈ ಕಾರ್ಮಿಕರ ಗುಂಪಿಗೂ ಚೀನಿ ಸೇನೆಗೂ ಸಂಬಂಧವಿರಲಿಲ್ಲ ಎಂದು ವರದಿಯು ಹೇಳಿದೆಯೆಂದು ಉನ್ನತ ಮೂಲಗಳು ತಿಳಿಸಿವೆ.

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಅಪ್ಪರ್ ಸಿಯಾಂಗ್ ಜಿಲ್ಲೆಯ ಬಿಷಿಂಗ್ ಎಂಬಲ್ಲಿ ಡಿ.26ರಂದು ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ನಡುವೆ ಒಪ್ಪಿತ ಗಡಿಯಿಲ್ಲ. ಪರ್ವತ ಪ್ರದೇಶವಾಗಿರುವ ಇಲ್ಲಿ ಗಡಿಯ ಅಂದಾಜು ತಪ್ಪಿ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿದ್ದ ಚೀನಿ ಕಾರ್ಮಿಕರು 600 ಮೀ.ಗೂ.ಉದ್ದದ ರಸ್ತೆಯನ್ನು ನಿರ್ಮಿಸಿದ್ದರು.

ಘಟನೆಯನ್ನು ವಿಶ್ಲೇಷಿಸಲಾಗಿದ್ದು, ಇದೊಂದು ಪೂರ್ವಯೋಜಿತ ಅತಿಕ್ರಮಣವಾಗಿ ರಲಿಲ್ಲ ಮತ್ತು ಐಟಿಬಿಪಿ ಯೋಧರು ಪ್ರಶ್ನಿಸಿದಾಗ ಕಾರ್ಮಿಕರು ತಮ್ಮ ನಿರ್ಮಾಣ ಉಪಕರಣಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು ಎಂದೂ ವರದಿಯು ಹೇಳಿದೆ.

ಜೆಸಿಬಿ ಮತ್ತು ನೀರಿನ ಟ್ಯಾಂಕರ್ ಸೇರಿದಂತೆ ಈ ಉಪಕರಣಗಳನ್ನು ಮರಳಿಸುವಂತೆ ಚೀನಾ ಭಾರತವನ್ನು ಕೋರಿದ್ದು, ಮುಂದಿನ ಗಡಿ ಸಭೆಯ ವೇಳೆ ಭಾರತೀಯ ಅಧಿಕಾರಿಗಳು ಈ ಉಪಕರಣಗಳನ್ನು ಮರಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದವು.

ಭಾರತ ಮತ್ತು ಚೀನಾ 4,000ಕಿ.ಮೀ.ಉದ್ದದ ಗಡಿಯನ್ನು ಹಂಚಿಕೊಂಡಿವೆ. ಕಳೆದ ವರ್ಷದ ಡೋಕಾ ಲಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಘಟನೆಯು ಅಂತಹುದೇ ಕಳವಳಗಳನ್ನು ಹುಟ್ಟುಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News