ಈಗ ಲಕ್ನೋ ಪೊಲೀಸ್ ಠಾಣೆಗೆ ಕೇಸರಿ ಬಣ್ಣ !
ಲಕ್ನೊ, ಜ. 7: ಉತ್ತರಪ್ರದೇಶದಾದ್ಯಂತ ಕೇಸರಿ ಬಣ್ಣ ಹರಡುವಂತೆ ಕಾಣುತ್ತಿದೆ. ಇದರ ಒಂದು ಭಾಗವಾಗಿ ಲಕ್ನೋದಲ್ಲಿರುವ 80 ವರ್ಷ ಹಳೆಯ ಪೊಲೀಸ್ ಠಾಣೆಗೆ ಕೇಸರಿ ಬಣ್ಣ ಬಳಿಯುವ ಕಾರ್ಯ ಆರಂಭಿಸಲಾಗಿದೆ.
ಈ ಪೊಲೀಸ್ ಠಾಣೆಯನ್ನು 1939ರಲ್ಲಿ ನಿರ್ಮಿಸಲಾಗಿದೆ. ಪೊಲೀಸ್ ಠಾಣೆಯ ಸಾಂಪ್ರದಾಯಿಕ ಬಣ್ಣ ಹಳದಿ ಹಾಗೂ ಕೆಂಪು. ಆದರೆ, ಈ ಬಾರಿ ಕೆಲವು ಕಂಬಗಳು ಹಾಗೂ ಕಟ್ಟಡದ ಕೆಲವು ಭಾಗಗಳಿಗೆ ಗಾಢ ಕೇಸರಿ ಹಾಗೂ ಕೆನೆ ಬಣ್ಣ ಬಳಿಯಲಾಗಿದೆ.
ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಕಳೆದ ಎರಡೂವರೆ ತಿಂಗಳ ಹಿಂದೆ ನವೀಕರಣ ಕಾರ್ಯ ಆರಂಭವಾಗಿತ್ತು ಎಂದು ಉಸ್ತುವಾರಿ ಇನ್ಸ್‌ಪೆಕ್ಟರ್ ಡಿ.ಕೆ. ಉಪಾಧ್ಯಾಯ ತಿಳಿಸಿದ್ದಾರೆ. ತೀವ್ರ ಚಳಿಯ ಕಾರಣಕ್ಕೆ ಕಾರ್ಮಿಕರು ಕೆಲಸ ಬರುವುದನ್ನು ಸ್ಥಗಿತಗೊಳಿಸಿರುವುದರಿಂದ ನವೀಕರಣ ಕೆಲಸ ಪೂರ್ಣಗೊಂಡಿಲ್ಲ ಎಂದು ಅವರು ಹೇಳಿದ್ದಾರೆ. ಕಚೇರಿಯ ತನ್ನ ಆಸನದ ಮೇಲೂ ಕೇಸರಿ ಟವಲ್ ಅನ್ನು ಕಾಣುವುದನ್ನು ಆದಿತ್ಯನಾಥ ಬಯಸುತ್ತಿದ್ದಾರೆ. ಇತ್ತೀಚೆಗೆ ಆದಿತ್ಯನಾಥ್ ಅವರು 50 ಕೇಸರಿ ಬಣ್ಣ ಬಸ್‌ಗಳನ್ನು ಲೋಕಾರ್ಪಣೆ ಮಾಡಿದ್ದರು.