×
Ad

ಜಯಗಳಿಸಿದ ಮತಗಳ ಅಂತರಕ್ಕಿಂತ ‘ನೋಟಾ’ ಹೆಚ್ಚಿದ್ದರೆ ಮರು ಚುನಾವಣೆ ಅಗತ್ಯ: ಮಾಜಿ ಮುಖ್ಯ ಚುನಾವಣಾ ಆಯುಕ್ತ

Update: 2018-01-08 20:23 IST

ಹೊಸದಿಲ್ಲ್ಲಿ, ಜ. 8: ಜಯ ಗಳಿಸಿದ ಮತದ ಅಂತರ ನೋಟಾ ಆಯ್ಕೆಗಿಂತ ಕಡಿಮೆ ಇದ್ದರೆ ಹಾಗೂ ವಿಜಯ ಗಳಿಸಿದ ಅಭ್ಯರ್ಥಿ ಮೂರನೇ ಒಂದಂಶ ಮತ ಗಳಿಸಲು ವಿಫಲನಾದ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಚುನಾವಣೆ ನಡೆಸಬೇಕು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್. ಕೃಷ್ಣಮೂರ್ತಿ ಪ್ರತಿಪಾದಿಸಿದ್ದಾರೆ. ಆರಂಭದ, ಹಿಂದಿನ ಹಾಗೂ ಮುಂದಿನ ಚುನಾವಣಾ ವ್ಯವಸ್ಥೆಯ ಉಪಯುಕ್ತತೆ ಬಗ್ಗೆ ಅವರು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

‘‘ನನ್ನ ಅಭಿಪ್ರಾಯದ ಪ್ರಕಾರ ನೋಟಾ ತುಂಬಾ ಉತ್ತಮ. ಒಂದು ವೇಳೆ ನೋಟಾ ಶೇಕಡವಾರು ಮತವನ್ನು ಮೀರಿದೆ ಎಂದು ಹೇಳಿದರೆ, ಅಂದರೆ ಜಯ ಗಳಿಸಿದವರು ಹಾಗೂ ಸೋತವರ ನಡುವಿನ ಮತದ ಅಂತರ ನೋಟಾಕ್ಕಿಂತ ಕಡಿಮೆ ಇದ್ದರೆ, ಆಗ ಎರಡನೇ ಸುತ್ತಿನ ಮತದಾನ ನಡೆಸಬೇಕು ಎಂದು ಎಂದು ನಾವು ಹೇಳಬಹುದು’’ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.

ಈ ಕ್ರಮಗಳನ್ನು ಅನುಷ್ಠಾನಗೊಳಿಸಲು ಕಾನೂನು ರೂಪಿಸಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ. ನಿರ್ದಿಷ್ಟ ಸ್ಥಾನಕ್ಕೆ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಗೆ ಮತ ಹಾಕದಿರುವ ಹಕ್ಕನ್ನು ನೋಟಾ ಮತದಾರನಿಗೆ ನೀಡುತ್ತದೆ.

ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ (ಇವಿಎಂ) 5.5 ಲಕ್ಷಕ್ಕಿಂತಲೂ ಹೆಚ್ಚಿನ ಅಥವಾ ಶೇ. 1.8 ಮತದಾರರು ನೋಟಾ ಗುಂಡಿ ಒತ್ತಿದ್ದಾರೆ.

 ನೋಟಾ ಅಂತಿಮವಾಗಿ ರಾಜಕೀಯ ಪಕ್ಷಗಳು ಪ್ರಾಮಾಣಿಕರಾದ, ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಜನಪ್ರಿಯರಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾರಣವಾಗಬಹುದು ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News