ಲಾಲೂ ಸಹಾಯಕ್ಕೆಂದೇ ಜೈಲು ಸೇರಿದ ಇಬ್ಬರು ಸಹಚರರು!

Update: 2018-01-09 15:09 GMT

ಪಾಟ್ನ, ಜ.9: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸದ್ಯ ಮೇವು ಹಗರಣದಲ್ಲಿ ಜೈಲು ಪಾಲಾಗಿದ್ದಾರೆ. ಆದರೆ ಜೈಲಿನಲ್ಲಿ ಅವರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ಅವರ ಇಬ್ಬರು ಅನುಯಾಯಿಗಳು ಜೈಲು ಸೇರಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನು ರಾಂಚಿಯ ಪೊಲೀಸರು ನೀಡಿದ್ದಾರೆ.

ಪೊಲೀಸರ ಪ್ರಕಾರ, ಲಾಲೂ ಪ್ರಸಾದ್ ಅವರ ಆಪ್ತರಾಗಿರುವ ಮದನ್ ಯಾದವ್ ಮತ್ತು ಲಕ್ಷ್ಮಣ್ ಮಹ್ತೊ ಡಿಸೆಂಬರ್ 23ರಂದು ಅಂದರೆ ಸಿಬಿಐ ನ್ಯಾಯಾಲಯ ಲಾಲೂ ಅವರನ್ನು ದೋಷಿ ಎಂದು ತೀರ್ಪಿತ್ತ ದಿನದಂದೇ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

 ಮದನ್ ಮತ್ತು ಲಕ್ಷ್ಮಣ್ ತನ್ನ ಮೇಲೆ ಹಲ್ಲೆ ನಡೆಸಿ ತನ್ನ ಬಳಿಯಿದ್ದ ಹತ್ತು ಸಾವಿರ ರೂ.ವನ್ನು ದೋಚಿದ್ದಾರೆ ಎಂದು ರಾಂಚಿ ನಿವಾಸಿ ಸುಮಿತ್ ಯಾದವ್ ಎಂಬವರು ದೊರಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೊರಂಡ ಠಾಣಾ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದಾಗ ಸುಮಿತ್ ಲೋವರ್ ಬಝಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಕೂಡಲೇ ಮದನ್ ಮತ್ತು ಲಕ್ಷ್ಮಣ್ ನ್ಯಾಯಾಲಯದ ಮುಂದೆ ಹಾಜರಾಗಿ ಶರಣಾಗಿದ್ದರು. ನಂತರ ಅವರನ್ನು ಬಿರ್ಸಾ ಮುಂಡ ಜೈಲಿಗೆ ಕಳುಹಿಸಲಾಗಿತ್ತು. ಡಿಸೆಂಬರ್ 23ರಂದು ಲಾಲೂ ಯಾದವ್ ಅವರನ್ನು ಬಿರ್ಸಾ ಮುಂಡ ಜೈಲಿಗೆ ಕಳುಹಿಸಿದಾಗ ಮೊದಲೇ ಅಲ್ಲಿ ಹಾಜರಿದ್ದ ಮದನ್ ಮತ್ತು ಲಕ್ಷ್ಮಣ್‌ನನ್ನು ವಿಶೇಷ ಸೆಲ್‌ನಲ್ಲಿದ್ದ ಲಾಲೂ ಅವರ ಸಹಾಯಕ್ಕಾಗಿ ನೇಮಿಸಲಾಯಿತು.

ಲಾಲೂ ಪ್ರಸಾದ್ ಯಾದವ್ ಕವಾಟ ಕಸಿಗೆ ಒಳಗಾಗಿದ್ದು, ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಮೂಲಗಳ ಪ್ರಕಾರ ಅವರು ದಿನಕ್ಕೆ 15 ಬಾರಿ ಔಷಧಿಯನ್ನು ಸೇವಿಸುತ್ತಾರೆ. ಲಕ್ಷ್ಮಣ್ ಎಂಬಾತ ಲಾಲೂ ಅವರ ಆಪ್ತ ಸಹಾಯಕನಾಗಿದ್ದು, ಅವರ ಆಹಾರ ಮತ್ತು ಔಷಧಿಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾನೆ. ಹಾಗಾಗಿ ಸದ್ಯ ಆತ ಬಿರ್ಸಾ ಮುಂಡ ಜೈಲು ಸೇರಿರುವುದು ಲಾಲೂ ಅವರ ಕುಟುಂಬಸ್ಥರು ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬೆಳವಣಿಗೆಯನ್ನು ತೀವ್ರವಾಗಿ ಟೀಕಿಸಿರುವ ಜೆಡಿಯು ವಕ್ತಾರ ನೀರಜ್ ಕುಮಾರ್, ಇದು ಲಾಲೂ ಪ್ರಸಾದ್ ಅವರ ಉಳಿಗಮಾನ್ಯ ಮಾನಸಿಕತೆಯನ್ನು ಬಿಂಬಿಸುತ್ತದೆ. ತಾನು ಜೈಲು ಸೇರುವ ಬಗ್ಗೆ ಮೊದಲೇ ಸುಳಿವಿದ್ದ ಅವರು ತಮ್ಮ ಸಹಾಯಕರು ಕೂಡಾ ಜೈಲು ಸೇರುವಂತೆ ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿಯಾಗಿರುವ ಲಾಲೂ 2013ರಲ್ಲಿ ಜೈಲಿನಲ್ಲಿರುವಾಗ ಕೂಡಾ ಲಕ್ಷ್ಮಣ್ ಅವರ ಜೊತೆಗಿದ್ದ ಎಂದು ತಿಳಿದುಬಂದಿದೆ. ಈ ಬಾರಿಯೂ ಆತ ಹೇಗೆ ಜೈಲು ಸೇರುವಲ್ಲಿ ಸಫಲನಾದ ಎಂಬುದನ್ನು ತನಿಖೆ ಮಾಡಿ ತಿಳಿದುಕೊಳ್ಳಬೇಕಿದೆ. ಆದರೆ ಈ ವಿಷಯವು ಉಚ್ಛ ನ್ಯಾಯಾಲಯ ಅಥವಾ ಸರ್ವೋಚ್ಛ ನ್ಯಾಯಾಲಯದಲ್ಲಿ ಲಾಲೂ ಅವರ ಜಾಮೀನು ಅರ್ಜಿಯು ವಿಚಾರಣೆಗೆ ಬರುವಾಗ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹಿರಿಯ ವಕೀಲರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News