ನೈರ್ಮಲ್ಯ ಪಾಲಿಸದ ದೂರು: ಮೆಕ್‌ಡೊನಾಲ್ಡ್ ಮಳಿಗೆಗೆ ನೋಟಿಸ್

Update: 2018-01-10 14:49 GMT
ಸಾಂದರ್ಭಿಕ ಚಿತ್ರ

ಮುಂಬೈ, ಜ.10: ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ ದೂರಿನ ಹಿನ್ನೆಲೆಯಲ್ಲಿ ಮೆಕ್‌ಡೊನಾಲ್ಡ್ ಮಾರಾಟ ಮಳಿಗೆಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಇಲಾಖೆ(ಎಫ್‌ಡಿಎ)ಯು ಎಚ್ಚರಿಕೆ ನೋಟಿಸ್ ನೀಡಿದೆ.

ಲೋವರ್ ಪರೇಲ್‌ನಲ್ಲಿರುವ ಮೆಕ್‌ಡೊನಾಲ್ಡ್ ಮಳಿಗೆಯು ಆಹಾರ ಸುರಕ್ಷತಾ ಕಾಯ್ದೆಯ ಮಾನದಂಡಗಳನ್ನು ಉಲ್ಲಂಘಿಸಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಫ್‌ಡಿಎ ಅಧಿಕಾರಿಗಳು ಮಳಿಗೆಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಡುಗೆ ಮನೆಯಲ್ಲಿ ಸ್ವಚ್ಚತೆಯನ್ನು ಪಾಲಿಸಲಾಗುತ್ತಿಲ್ಲ ಹಾಗೂ ಪರವಾನಿಗೆ ಪತ್ರವನ್ನು ಸೂಕ್ತವಾಗಿ ಪ್ರದರ್ಶಿಸಲಾಗಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಮುಂದಿನ 15 ದಿನದೊಳಗೆ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೆಕ್‌ಡೊನಾಲ್ಡ್‌ನ ಮಳಿಗೆ ಸರಣಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈಗಾಗಲೇ ನಮ್ಮ ಉತ್ತರವನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ದಕ್ಷಿಣ ಭಾರತ ಹಾಗೂ ಪಶ್ಚಿಮ ಭಾರತದಲ್ಲಿ ಮೆಕ್‌ಡೊನಾಲ್ಡ್ ಮಳಿಗೆಗಳ ಫ್ರಾಂಚೈಸಿ ಹೊಂದಿರುವ ‘ಹಾರ್ಡ್‌ಕ್ಯಾಸಲ್ ರೆಸ್ಟಾರೆಂಟ್’ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News