ಮಹಾದಾಯಿ ವಿವಾದದ ಬಗ್ಗೆ ನ್ಯಾಯಾಧಿಕರಣದಲ್ಲಿ ಹೋರಾಟ: ತಿಪ್ಪರಲಾಗ ಹಾಕಿದ ಗೋವಾ ಸಿಎಂ

Update: 2018-01-10 15:01 GMT

ಪಣಜಿ,ಜ.10: ಮಹಾದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ತಿಪ್ಪರಲಾಗ ಹಾಕಿರುವ ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರು, ಕರ್ನಾಟಕ ದೊಂದಿಗಿನ ಈ ವಿವಾದವು ಮಹಾದಾಯಿ ಜಲವಿವಾದ ನ್ಯಾಯಾಧಿಕರಣದ ಮುಂದಿದ್ದು, ಅದಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಬುಧವಾರ ಇಲ್ಲಿ ಹೇಳಿದರು.

ಕಳೆದ ಡಿಸೆಂಬರ್‌ನಲ್ಲಿ ಮಹಾದಾಯಿ ವಿವಾದ ಕುರಿತು ಕರ್ನಾಟಕ ಬಿಜೆಪಿಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಕ್ಕಾಗಿ ಟೀಕೆಗಳನ್ನು ಎದುರಿಸುತ್ತಿರುವ ಪಾರಿಕ್ಕರ್, ವಿಷಯವೇ ಅಲ್ಲದಿದ್ದುದನ್ನು ದೊಡ್ಡದನ್ನಾಗಿ ಮಾಡಿರುವುದಕ್ಕೆ ಮಾಧ್ಯಮಗಳನ್ನು ದೂರಿದರು.

ಗೋವಾ ಕುಡಿಯುವ ಉದ್ದೇಶದ ನೀರನ್ನು ಕರ್ನಾಟಕದೊಂದಿಗೆ ಹಂಚಿಕೊಳ್ಳಬಹು ದಾಗಿದೆ ಎಂದು ಯಡಿಯೂರಪ್ಪನವರಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದ ಅವರು, ದ್ವಿಪಕ್ಷೀಯ ಮಾತುಕತೆಗಳ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬದಲು ಬಿಜೆಪಿ ನಾಯಕನಿಗೆ ಬರೆದಿದ್ದ ಈ ಪತ್ರವು ವಿವಾದವನ್ನು ಸೃಷ್ಟಿಸಿತ್ತು.

ಇತ್ತೀಚಿಗೆ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ತನ್ನ ಭೇಟಿಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾರಿಕ್ಕರ್, ಮಾಧ್ಯಮಗಳು ಮಹಾದಾಯಿ ವಿವಾದವನ್ನು ಅಗತ್ಯಕ್ಕಿಂತ ದೊಡ್ಡದಾಗಿ ಬಿಂಬಿಸುತ್ತಿವೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News