ಕಲ್ಲಿದ್ದಲು ಹಗರಣ: ಜಿಂದಾಲ್ ವಿರುದ್ಧ ಲಂಚ ಆರೋಪ ದಾಖಲಿಸಲು ಸಿಬಿಐ ಕೋರಿಕೆ

Update: 2018-01-10 16:59 GMT

ಹೊಸದಿಲ್ಲಿ, ಜ.10: ಜಾರ್ಖಂಡ್ ಕಲ್ಲಿದ್ದಲು ಗಣಿಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಮುಖಂಡ, ಉದ್ಯಮಿ ನವೀನ್ ಜಿಂದಾಲ್ ಹಾಗೂ ಇತರರ ವಿರುದ್ಧ ಲಂಚದ ದೋಷಾರೋಪ ಹೊರಿಸಬೇಕೆಂದು ಸಿಬಿಐ ಹೇಳಿದೆ.

ಜಾರ್ಖಂಡ್‌ನ ಅಮರಕೊಂಡ ಮುರ್ಗದಂಗಲ್ ಕಲ್ಲಿದ್ದಲು ಗಣಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಈ ಪ್ರಕರಣದಲ್ಲಿ ಸಿಬಿಐ ಪರ ವಕೀಲ ವಿ.ಕೆ.ಶರ್ಮ ವಾದ ಮಂಡಿಸಿ, ಜನಪ್ರತಿನಿಧಿಗಳು ಲಂಚ ನೀಡುವ ಅಥವಾ ಲಂಚ ಸ್ವೀಕರಿಸುವ ದೋಷಾರೋಪವನ್ನು ಶಿಕ್ಷಾರ್ಹ ಅಪರಾಧವೆಂದು ಕಾನೂನಿನಲ್ಲಿ ತಿಳಿಸಲಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭರತ್ ಪರಾಷರ್, ಜಿಂದಾಲ್ ಹಾಗೂ ಇತರ ಆರೋಪಿಗಳು ಫೆಬ್ರವರಿ 16ಕ್ಕೆ ಮೊದಲು ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸೂಚಿಸಿದರು.

  2016ರ ಎಪ್ರಿಲ್‌ನಲ್ಲಿ ವಿಶೇಷ ನ್ಯಾಯಾಲಯದಲ್ಲಿ ಜಿಂದಾಲ್, ಕಲ್ಲಿದ್ದಲು ಇಲಾಖೆಯ ಮಾಜಿ ಸಹಾಯಕ ಸಚಿವ ದಾಸರಿ ನಾರಾಯಣ ರಾವ್(ದಿವಂಗತ), ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡ, ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತ ಹಾಗೂ ಇತರ 11 ಮಂದಿಯ ವಿರುದ್ಧ ಕ್ರಿಮಿನಲ್ ಸಂಚು, ವಂಚನೆ, ನಂಬಿಕೆ ದ್ರೋಹದ ದೋಷಾರೋಪ ಹೊರಿಸಲಾಗಿದೆ. ಬಳಿಕ ಜಿಂದಾಲ್ ಅವರ ಸಲಹೆಗಾರ ಆನಂದ್ ಗೋಯೆಲ್, ‘ಗ್ರೀನ್ ಇನ್‌ಫ್ರಾ’ದ ಉಪಾಧ್ಯಕ್ಷ ಸಿದ್ದಾರ್ಥ್ ಮಾದ್ರ ಸೇರಿದಂತೆ ಐವರ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ ದಾಖಲಿಸಲಾಗಿತ್ತು.

ಹೆಚ್ಚುವರಿ ಆರೋಪಟ್ಟಿಯ ಆಧಾರದಲ್ಲಿ ಆರೋಪಪಟ್ಟಿ ದಾಖಲಿಸುವ ವಿಷಯದಲ್ಲಿ ಬುಧವಾರ ನಡೆದ ವಿಚಾರಣೆಯಲ್ಲಿ ವಾದ ಮಂಡಿಸಿದ ಸಿಬಿಐ ಪರ ವಕೀಲರು, ಹೆಚ್ಚುವರಿ ಆರೋಪಪಟ್ಟಿಯಲ್ಲಿ ಹೆಸರಿಸಲ್ಪಟ್ಟಿರುವ ಐವರು ಆರೋಪಿಗಳು ತನಿಖೆಗೆ ಅಡ್ಡಿ ಪಡಿಸಲು ಯತ್ನಿಸುತ್ತಿದ್ದಾರೆ. ಅಲ್ಲದೆ ಆರಂಭದಲ್ಲಿ ಆರೋಪಿಯೆಂದು ಹೆಸರಿಸಲ್ಪಟ್ಟು ಆ ಬಳಿಕ ಮಾಫಿ ಸಾಕ್ಷಿದಾರನಾದ ಚಾರ್ಟರ್ಡ್ ಅಕೌಂಟೆಂಟ್ ಸುರೇಶ್ ಸಿಂಘಾಲ್‌ಗೆ ಬೆದರಿಕೆ ಒಡ್ಡಿರುವುದಾಗಿ ದೂರಿದರು. ಆದರೆ ಇದನ್ನು ನಿರಾಕರಿಸಿದ ಆರೋಪಿಗಳು, ಕಲ್ಲಿದ್ದಲು ಹಂಚಿಕೆ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News