×
Ad

ಬಸ್ಸಲ್ಲೇ ಪ್ರಯಾಣಿಕ ಮೃತಪಟ್ಟಾಗ ಈ ಬಸ್ ಕಂಡಕ್ಟರ್ ಮಾಡಿದ್ದನ್ನು ಕ್ಷಮಿಸಲು ಅಸಾಧ್ಯ

Update: 2018-01-11 23:08 IST

ಚೆನ್ನೈ, ಜ.11: ಪ್ರಯಾಣದ ಸಂದರ್ಭದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ದೇಹವನ್ನು ಮತ್ತು ಆತನ ಜೊತೆಗೆ ಪ್ರಯಾಣಿಸುತ್ತದ್ದ ಗೆಳೆಯನನ್ನು ಬಸ್ ನಿರ್ವಾಹಕನೊಬ್ಬ ಹೆದ್ದಾರಿ ಮಧ್ಯದಲ್ಲೇ ಇಳಿಸಿದ ಅಮಾನವೀಯ ಘಟನೆ ಹೊಸೂರು ಬಳಿಯ ಸೂಲಗಿರಿ ಎಂಬಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ರಾಧಾಕೃಷ್ಣನ್ (43) ಮತ್ತವರ ಗೆಳೆಯ ವೀರನ್ (54) ಬೆಂಗಳೂರಿನಿಂದ ತಮಿಳುನಾಡಿನ ತಿರುವನ್ನಮಲೈಗೆ ತೆರಳಲು ಸರಕಾರಿ ಬಸ್ ಹತ್ತಿದ್ದರು. ಅಸೌಖ್ಯದಿಂದ ಬಳಲುತ್ತಿದ್ದ ವೀರನ್ ಗೆಳೆಯನ ಸಮೀಪ ಸೀಟ್ ಮೇಲೆ ಕಾಲು ಚಾಚಿ ಮಲಗಿದ್ದರು. ಆದರೆ ಸ್ವಲ್ಪ ಸಮಯದ ನಂತರ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದಾಗ ರಾಧಾಕೃಷ್ಣನ್ ಅವರು ವೀರನ್‌ನನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿದೆ. ಕೂಡಲೇ ಅಲ್ಲಿಗಾಗಮಿಸಿದ ಬಸ್ ನಿರ್ವಾಹಕ ವೀರನ್ ಮೃತದೇಹದ ಜೊತೆಗೆ ರಾಧಾಕೃಷ್ಣನ್ ಅವರನ್ನೂ ಬಸ್‌ನಿಂದ ಮಾರ್ಗ ಮಧ್ಯೆಯೇ ಕೆಳಗಿಳಿಸಿದ್ದಾನೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಈ ವೇಳೆ ರಾಧಾಕೃಷ್ಣನ್ ತಾನು ಟಿಕೆಟ್‌ಗೆ ನೀಡಿರುವ 150 ರೂ.ವನ್ನು ವಾಪಸ್ ನೀಡುವಂತೆ ಕಂಡಕ್ಟರ್‌ಗೆ ಹೇಳಿದಾಗ, ಆತ ಸಾವನ್ನಪ್ಪಿರುವ ವ್ಯಕ್ತಿಯ ಬಗ್ಗೆ ವ್ಯಂಗ್ಯವಾಡಿದ್ದಾನೆ ಎಂದು ಪತ್ರಿಕೆ ವರದಿ ಮಾಡಿದೆ. ಬಹಳಷ್ಟು ಸಮಯ ವಾಗ್ವಾದ ನಡೆದ ನಂತರ ಬಸ್ ನಿರ್ವಾಹಕ 150 ರೂ. ವಾಪಸ್ ನೀಡಿ ತೆರಳಿರುವುದಾಗಿ ವರದಿಗಳು ತಿಳಿಸಿವೆ.

ಕೊನೆಯಲ್ಲಿ ಸ್ಥಳೀಯ ಪತ್ರಕರ್ತರಿಗೆ ಮಾಹಿತಿ ತಿಳಿದು ಅವರು ಮೃತದೇಹವನ್ನು ಸಾಗಿಸಲು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿದರೆ ಇನ್ನು ಕೆಲವು ವರದಿಗಳಲ್ಲಿ ಸ್ಥಳಕ್ಕಾಗಮಿಸಿ ಪೊಲೀಸರು ರಾಧಾಕೃಷ್ಣನ್ ಅವರಿಗೆ ಸಹಾಯ ಮಾಡಿದ್ದಾರೆ ಎಂದು ತಿಳಿಸಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News