7 ವರ್ಷದ ಹಿಂದೆಯೇ ಆಧಾರ್ ಪರೋಕ್ಷ ಐಡಿ ಪ್ರಸ್ತಾವ: ಅಜಯ್ ಭೂಷಣ್

Update: 2018-01-13 16:19 GMT

ಹೊಸದಿಲ್ಲಿ, ಜ.13: ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ಈ ವಾರ ಘೋಷಿಸಿದ 16 ಸಂಖ್ಯೆಯ ತಾತ್ಕಾಲಿಕ ‘ವರ್ಚುವಲ್ ಐಡಿ’ (ಪರೋಕ್ಷ ಐಡಿ) ನಂಬರ್ ಕುರಿತು 2009-10ರಲ್ಲೇ ಪ್ರಸ್ತಾವಿಸಲಾಗಿತ್ತು. ಆದರೆ ಆ ಸಂದರ್ಭ ಇದನ್ನು ಜಾರಿಗೊಳಿಸಲು ಆಧಾರ್ ಪ್ರಾಧಿಕಾರ ವಿರೋಧಿಸಿತ್ತು ಎಂದು ಯುಐಡಿಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

      ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಭೂಷಣ್, ಮೊದಲು ಆಧಾರ್ ಸಂಖ್ಯೆ ನೀಡುವುದು ಹಾಗೂ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಿದ ಬಳಿಕ ಸೂಕ್ತ ಸಂದರ್ಭದಲ್ಲಿ ‘ವರ್ಚುವಲ್ ಐಡಿ’ ಬಳಕೆ ಮಾಡುವ ಕುರಿತು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ. ಆಧಾರ್ ಸಂಖ್ಯೆ ಹೊಂದಿರುವ 119 ಕೋಟಿ ಮಂದಿಗೆ ನೀಡಲಾಗಿರುವ ‘ಹೆಚ್ಚುವರಿ ಸುರಕ್ಷತಾ ಕವಚ’ ಇದಾಗಿದೆ ಎಂದು ಭೂಷಣ್ ಅಭಿಪ್ರಾಯಪಟ್ಟಿದ್ದಾರೆ.

 ಇದು ಒಂದು ಹೆಜ್ಜೆ ಮುಂದಿರಿಸಿದ ಕ್ರಮ ಎಂಬುದನ್ನು ಸೈಬರ್ ಭದ್ರತಾ ತಜ್ಞ ಜಿತೇನ್ ಜೈನ್ ಒಪ್ಪುವುದಿಲ್ಲ. ಆಧಾರ್ ಕಾರ್ಡ್‌ನ ಮಾಹಿತಿ ಗೋಪ್ಯವಾಗಿರುತ್ತದೆಯೇ ಎಂಬುದನ್ನು ಮೊದಲು ನಿರ್ಧರಿಸಬೇಕಿದೆ ಎಂದವರು ಹೇಳುತ್ತಾರೆ.

 ಆಧಾರ್ ಸಂಖ್ಯೆಯನ್ನು ಮರೆಮಾಚುವ ವ್ಯವಸ್ಥೆ ಖಾಸಗಿತನವನ್ನು ವೃದ್ಧಿಸುತ್ತದೆ ಎಂದಾದರೆ , ಆಧಾರ್ ನಂಬರನ್ನು ಕಡ್ಡಾಯವಾಗಿ ಒದಗಿಸಬೇಕೆಂಬ ಸೂಚನೆ ಮೇರೆಗೆ ಹಲವು ವರ್ಷಗಳಿಂದ ನಂಬರ್ ಒದಗಿಸಿದ ಕೋಟ್ಯಂತರ ಜನರ ಪಾಡೇನು ಎಂದವರು ಪ್ರಶ್ನಿಸಿದ್ದಾರೆ.

  ‘ವರ್ಚುವಲ್ ಐಡಿ’ ವ್ಯವಸ್ಥೆಯನ್ನು ಯುಐಡಿಎಐ ತರಾತುರಿಯಲ್ಲಿ ಜಾರಿಗೊಳಿಸಿದೆ ಎಂದು ಸೈಬರ್ ಭದ್ರತಾ ತಜ್ಞ ಶ್ರೀನಿವಾಸ್ ಕೊಡಾಲಿ ಹೇಳಿದ್ದಾರೆ. ಮಾರ್ಚ್ 1ರ ವೇಳೆಗೆ ಕೋಡ್‌ಗಳನ್ನು ಬಿಡುಗಡೆಗೊಳಿಸುವುದಾಗಿ ಈ ಹಿಂದೆ ತಿಳಿಸಲಾಗಿತ್ತು. ಈ ಪ್ರಕ್ರಿಯೆಯನ್ನು ಸೂಕ್ತವಾಗಿ ಯೋಜಿಸಲಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಆಧಾರ್ ಯೋಜನೆಯಿಂದ ಜನತೆಯ ಖಾಸಗಿತನದ ಉಲ್ಲಂಘನೆಯಾಗುತ್ತಿದೆಯೇ ಎಂಬ ಕುರಿತಾದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ಐವರು ಸದಸ್ಯರುಳ್ಳ ಸಾಂವಿಧಾನಿಕ ಪೀಠವು ಜನವರಿ 17ರಿಂದ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News