ಹಂಬಲ್ ಪಾಲಿಟಿಷಿಯನ್ ನೊಗ್‌ರಾಜ್

Update: 2018-01-13 18:41 GMT

ನಗಿಸುವ ಯತ್ನದಲ್ಲಿ ಕತೆಯೇ ನಗಣ್ಯ!

ಊಸರವಳ್ಳಿ ವ್ಯಕ್ತಿತ್ವದ ರಾಜಕಾರಣಿಗಳು ಹೇಗೆ ಜನರನ್ನು ಮೋಸ ಮಾಡುತ್ತಾರೆ ಮತ್ತು ಜನರು ಕೂಡ ಹೇಗೆ ಅವರಿಗೆ ಸುಲಭವಾಗಿ ಮರುಳಾಗುತ್ತಾರೆ ಎನ್ನುವುದನ್ನು ತೋರಿಸಿರುವ ಚಿತ್ರ ಇದು.

ಚಿತ್ರದಲ್ಲಿ ಡ್ಯಾನಿಶ್ ಸೇಠ್ ವಿನಯವಂತ ರಾಜಕಾರಣಿ ನೊಗ್‌ರಾಜ್ ಆಗಿದ್ದಾರೆ. ‘ಅತಿ ವಿನಯಂ ಧೂರ್ತ ಲಕ್ಷಣಂ’ ಎಂಬುದನ್ನು ಸಾಬೀತು ಮಾಡುವಂಥ ಪಾತ್ರ ಅವರದು. ಕಾರ್ಪೊರೇಟರ್ ಆಗಿರುವ ನೊಗ್‌ರಾಜ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಶಾಸಕ ಆಗಿರುತ್ತಾನೆ. ಆದರೆ ಆ ಮಟ್ಟಕ್ಕೆ ಬೆಳೆಯೋದಕ್ಕೆ ಆತ ಯಾವುದೆಲ್ಲ ಮಟ್ಟಕ್ಕೆ ಇಳಿಯುತ್ತಾನೆ ಎನ್ನುವುದೇ ಚಿತ್ರದ ಕತೆ. ಅದರ ಹೊರತಾಗಿ ಏನೇನೂ ವಿಶೇಷತೆಗಳಿಲ್ಲ ಎನ್ನುವುದು ಪ್ರೇಕ್ಷಕರ ವ್ಯಥೆ. ‘ಹಂಬಲ್ ..’ ಚಿತ್ರದ ಟ್ರೇಲರ್ ಕಂಡು ಚಿತ್ರ ನೋಡುವ ಹಂಬಲ ಮೂಡಿಸಿಕೊಂಡವರು ಅಧಿಕ. ಮಾತ್ರವಲ್ಲ, ಈ ಚಿತ್ರ ನಿರ್ಮಿಸಿರುವ ಘಟಾನುಘಟಿಗಳ ಹೆಸರು ಕೂಡ ಸಿನೆಮಾ ಬಗ್ಗೆ ನಿರೀಕ್ಷೆ ಮೂಡಿಸಿತ್ತು. ಆದರೆ ಚಿತ್ರ ಟ್ರೇಲರ್‌ನಿಂದಾಚೆ ಒಂದಷ್ಟು ಹಾಸ್ಯ ದೃಶ್ಯ ಮತ್ತು ಕೊನೆಯಲ್ಲಿ ರಾಜಕೀಯದ ಬದಲಾಗದ ಪರಿಸ್ಥಿತಿಯನ್ನು ಹೇಳುವಲ್ಲಿಗೆ ಕೊನೆಯಾಗುತ್ತದೆ. ಹಾಗಾಗಿ ಇದು ಡ್ಯಾನಿಶ್ ಸೇಠ್‌ನ ರೇಡಿಯೋ, ಯೂ ಟ್ಯೂಬ್ ತಮಾಷೆಯ ಕಾರ್ಯಕ್ರಮ ಮೆಚ್ಚುವವರಿಗೆ ಮತ್ತೊಂದು ದೊಡ್ಡ ಎಪಿಸೋಡ್ ಸಿಕ್ಕಂತೆ ಅನಿಸುತ್ತದೆ, ಅಷ್ಟೇ.

ಅದರ ಹೊರತು ಎರಡೂವರೆ ತಾಸಿನ ಚಿತ್ರದಲ್ಲಿ ಕಂಗ್ಲಿಷ್ ಸಂಭಾಷಣೆಗಳಷ್ಟೇ ತುಂಬಿಕೊಂಡಿವೆ. ಡಬಲ್ ಮೀನಿಂಗ್ ಹುಡುಕುವ ರಸಿಕರಿಗಂತೂ ಹಬ್ಬ! ಡ್ಯಾನಿಶ್ ಸೇಠ್‌ನ ಮಾತಿನ ಸ್ಟೈಲ್ ಬಿಡದಿ ಸ್ವಾಮಿಯನ್ನು, ತೆಲುಗಿನ ‘ಕ್ವಿಕ್ ಗನ್ ಮುರುಗನ್’ ಚಿತ್ರವನ್ನು ನೆನಪಿಸುವಂತಿದೆ. ನೊಗ್‌ರಾಜ್‌ನ ನಿಷ್ಕಲ್ಮಷ ಮನಸ್ಸಿನ ಪತ್ನಿ ಲಾವಣ್ಯಳಾಗಿ ಸುಮುಖಿ ಸುರೇಶ್ ಮನಸೆಳೆಯುವ ಅಭಿನಯ ನೀಡಿದ್ದಾರೆ. ಆಪ್ತ ಸಹಾಯಕ ಮಂಜುನಾಥನ ಪಾತ್ರಕ್ಕೆ ವಿಜಯ್ ಚೆಂಡೂರ್ ತಮ್ಮ ಎಂದಿನ ಶೈಲಿಯಲ್ಲಿ ಲವಲವಿಕೆ ತುಂಬಿದ್ದಾರೆ. ಶಾಸಕ ಜಗತ್ ಪ್ರಭು(ಜೆಎಫ್‌ಕೆ)ವಾಗಿ ಹನುಮಂತೇಗೌಡ ಇದ್ದಾರೆ. ಜನರಿಗಾಗಿ ನಿಜವಾದ ಕಾಳಜಿಯಿಂದ ಸೇವೆ ಮಾಡಬೇಕು ಎಂಬ ಗುರಿಯೊಂದಿಗೆ ಬರುವ ಯುವ ರಾಜಕಾರಣಿ ಅರುಣ್ ಪಾಟೀಲ್ ಪಾತ್ರದಲ್ಲಿ ’ಯುಟರ್ನ್’ ಖ್ಯಾತಿಯ ರೋಜರ್ ನಾರಾಯಣ್ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಶ್ರುತಿಹರಿಹರನ್ ಕೂಡ ಕಾಣಿಸಿಕೊಂಡಾಗ, ಇನ್ನು ಇವರೇ ಚಿತ್ರಕ್ಕೆ ನಾಯಕ ನಾಯಕಿ ಎಂಬ ಭಾವ ಮೂಡಿದರೆ ಅಚ್ಚರಿಯಿಲ್ಲ. ಆದರೆ ಅದು ಸಂಭವಿಸುವುದಿಲ್ಲ. ಸಮಾಜ ಒಳ್ಳೆಯತನವನ್ನು ಅಷ್ಟು ಬೇಗ ಪ್ರೋತ್ಸಾಹಿಸುವುದಿಲ್ಲ ಎಂಬುದನ್ನು ಕ್ಲೈಮ್ಯಾಕ್ಸ್ ನಲ್ಲಿಯೂ ತೋರಿಸಿರುವುದು ವಿಶೇಷ. ಮಾತ್ರವಲ್ಲ ಇಲ್ಲಿ ಒಳ್ಳೆಯತನದ ಸೋಲನ್ನು ಕೂಡ ಪ್ರೇಕ್ಷಕರು ಸಂಭ್ರಮಿಸುವಂತೆ ತೋರಿಸಿರುವುದು ನಿರ್ದೇಶಕರಿಗೆ ಸಿಕ್ಕ ಗೆಲುವು ಎನ್ನಬಹುದು.

ನಿರ್ದೇಶಕರ ಪ್ರಥಮ ಚಿತ್ರ ಎಂಬ ದೃಷ್ಟಿಯಿಂದ ನೋಡಿದರೆ, ಸಾದ್ ಖಾನ್ ಉತ್ತಮ ಪ್ರಯತ್ನ ಮಾಡಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ ಚುನಾವಣೆಯ ಪೂರ್ವಭಾವಿಯಾಗಿ ಬಂದಿರುವ ಈ ಚಿತ್ರ ಮತದಾರರಿಗೆ ತಮ್ಮ ಅಭ್ಯರ್ಥಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಂದೇಶ ರವಾನಿಸುವಲ್ಲಿ ಯಶಸ್ವಿಯಾದಲ್ಲಿ ಅದೇ ಖುಷಿಯ ವಿಚಾರ.

ತಾರಾಗಣ: ಡ್ಯಾನಿಶ್ ಸೇಠ್, ವಿಜಯ್ ಚೆಂಡೂರ್, ಸುಮುಖಿ ಸುರೇಶ್ ಮೊದಲಾದವರು.
ನಿರ್ದೇಶನ: ಸಾದ್ ಖಾನ್
ನಿರ್ಮಾಣ: ರಕ್ಷಿತ್, ಹೇಮಂತ್, ಪುಷ್ಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News