ತೆರಿಗೆ ಮುಕ್ತ ಗ್ರಾಚ್ಯುವಿಟಿ ಮೊತ್ತ 20 ಲಕ್ಷ ರೂ.ಗೆ ಹೆಚ್ಚಳದ ನಿರೀಕ್ಷೆ

Update: 2018-01-14 13:11 GMT

ಹೊಸದಿಲ್ಲಿ, ಜ.14: ಮುಂಬರುವ ಬಜೆಟ್ ಅದಿವೇಶನದಲ್ಲಿ ಗ್ರಾಚ್ಯುವಿಟಿ ಪಾವತಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆಯುವ ನಿರೀಕ್ಷೆಯಿದ್ದು, ಈ ಮೂಲಕ ಔಪಚಾರಿಕ ವಲಯದ ಉದ್ಯೋಗಿಗಳು 20 ಲಕ್ಷ ರೂ. ತೆರಿಗೆಮುಕ್ತ ಗ್ರಾಚ್ಯುವಿಟಿ ಪಡೆಯಲು ಅರ್ಹರಾಗುತ್ತಾರೆ.

  ಪ್ರಸ್ತುತ, ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಔಪಚಾರಿಕ ವಲಯದ ಉದ್ಯೋಗಿಗಳು , ಕೆಲಸ ಬಿಟ್ಟ ಸಂದರ್ಭ ಅಥವಾ ನಿವೃತ್ತಿ ಹೊಂದಿದ ಬಳಿಕ 10 ಲಕ್ಷ ರೂ.ನಷ್ಟು ತೆರಿಗೆಮುಕ್ತ ಗ್ರಾಚ್ಯುವಿಟಿ ಪಡೆಯಲು ಅರ್ಹರಾಗಿರುತ್ತಾರೆ.

 ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ದೊರಕುವ ನಿರೀಕ್ಷೆಯಿದೆ. ಸಂಘಟಿತ ಕ್ಷೇತ್ರದ ಉದ್ಯೋಗಿಗಳಿಗೆ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ಸರಿ ಸಮಾನವಾಗಿ 20 ಲಕ್ಷ ರೂ. ತೆರಿಗೆಮುಕ್ತ ಗ್ರಾಚ್ಯುವಿಟಿ ನೀಡಲು ಸರಕಾರ ಇಚ್ಛಿಸಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆಯಲ್ಲಿ 2017ರ ಡಿ.18ರಂದು ಕಾರ್ಮಿಕ ಸಚಿವ ಸಂತೋಷ್‌ಕುಮಾರ್ ಗಂಗ್ವಾರ್ ಗ್ರಾಚ್ಯುವಿಟಿ ಪಾವತಿ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದ್ದರು. ಮಸೂದೆ ಅಂಗೀಕಾರವಾದರೆ ನಿಯಮದ ಪ್ರಕಾರ ಉದ್ಯೋಗಿಗಳು ಪಡೆಯಬಹುದಾದ ಹೆರಿಗೆ ರಜೆ ಅವಧಿ ಹಾಗೂ ಗ್ರಾಚ್ಯುವಿಟಿ ಮೊತ್ತದ ಬಗ್ಗೆ ನಿರ್ಧರಿಸಲು ಸರಕಾರಕ್ಕೆ ಅನುಕೂಲವಾಗುತ್ತದೆ. ಹೆರಿಗೆ ರಜೆ ಸೌಲಭ್ಯ(ತಿದ್ದುಪಡಿ) ಕಾಯ್ದೆ 2017ರ ಪ್ರಕಾರ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆಯ ಅವಧಿಯನ್ನು 26 ವಾರಕ್ಕೆ ಹೆಚ್ಚಿಸಲಾಗಿದೆ.

ಫ್ಯಾಕ್ಟರಿ, ಗಣಿ, ತೈಲಕ್ಷೇತ್ರ, ಎಸ್ಟೇಟ್‌ಗಳು, ಬಂದರು, ರೈಲ್ವೇ ಕಂಪೆನಿಗಳು, ಅಂಗಡಿ ಇತ್ಯಾದಿಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಗ್ರಾಚ್ಯುವಿಟಿ ಒದಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಚ್ಯುವಿಟಿ ಪಾವತಿ ಕಾಯ್ದೆ 1972ನ್ನು ಜಾರಿಗೊಳಿಸಲಾಗಿದೆ. 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯೊಂದರಲ್ಲಿ ಕನಿಷ್ಠ 5 ವರ್ಷ ಕಾರ್ಯ ನಿರ್ವಹಿಸಿದ ಉದ್ಯೋಗಿಗಳು ಗ್ರಾಚ್ಯುವಿಟಿ ಪಡೆಯಲು ಅರ್ಹರಾಗಿರುತ್ತಾರೆ. ಸೇವೆ ಪೂರ್ತಿಗೊಳಿಸಿದ ಪ್ರತೀ ವರ್ಷಕ್ಕೆ 15 ದಿನದ ಸಂಬಳವನ್ನು ಗ್ರಾಚ್ಯುವಿಟಿ ಎಂದು ಲೆಕ್ಕಹಾಕಲಾಗುತ್ತದೆ. ಗ್ರಾಚ್ಯುವಿಟಿಗೆ ಗರಿಷ್ಟ ಮೊತ್ತ 10 ಲಕ್ಷ ರೂ. ಎಂದು 2010ರಲ್ಲಿ ನಿಗದಿಗೊಳಿಸಲಾಗಿದೆ.

 7ನೇ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸಿದ ಬಳಿಕ ಕೇಂದ್ರ ಸರಕಾರಿ ನೌಕರರಿಗೆ ಗ್ರಾಚ್ಯುವಿಟಿ ಮೊತ್ತದ ಮಿತಿಯನ್ನು 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News