ಸೇನಾ ವರಿಷ್ಠರ ಹೇಳಿಕೆ ವಿರುದ್ಧ ಆಕ್ರೋಶ: ಜಮ್ಮು ಕಾಶ್ಮೀರ ವಿಧಾನ ಸಭೆಯಲ್ಲಿ ಕೋಲಾಹಲ

Update: 2018-01-15 14:54 GMT

ಜಮ್ಮು, ಜ. 15: ಸೇನಾ ವರಿಷ್ಠರ ವಿವಾದಾತ್ಮಕ ಹೇಳಿಕೆ ಕುರಿತಂತೆ ಜಮ್ಮ ಕಾಶ್ಮೀರ ವಿಧಾನ ಸಭೆಯಲ್ಲಿ ಸೋಮವಾರ ನ್ಯಾಶನಲ್ ಕಾನ್ಫರೆನ್ಸ್ ಗದ್ದಲ ಉಂಟು ಮಾಡಿತು ಹಾಗೂ ಈ ವಿಷಯದ ಬಗ್ಗೆ ಸರಕಾರ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ಸಭಾ ತ್ಯಾಗ ಮಾಡಿತು.

ರಾಜ್ಯದಲ್ಲಿ ಸರಕಾರಿ ಶಾಲೆಗಳು ಹಾಗೂ ಸಾಮಾಜಿಕ ಜಾಲ ತಾಣಗಳು ತಪ್ಪು ಮಾಹಿತಿ ಹರಡುತ್ತಿವೆ. ಇದರಿಂದ ಯುವಕರು ಉಗ್ರರಾಗುತ್ತಿದ್ದಾರೆ ಎಂದು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಶುಕ್ರವಾರ ಹೇಳಿದ್ದರು.

 ತನ್ನ ಹೇಳಿಕೆಯಲ್ಲಿ ಮಸೀದಿ ಹಾಗೂ ಮದ್ರಸಗಳ ಮೇಲೆ ಕೆಲವು ನಿಯಂತ್ರಣ ಹೇರಬೇಕು ಎಂದು ಕರೆ ನೀಡಿದ್ದ ಅವರು, ಶಿಕ್ಷಣ ವ್ಯವಸ್ಥೆ ಪರಿಷ್ಕರಿಸಬೇಕು ಎಂದು ಸಲಹೆ ನೀಡಿದ್ದರು.

  ಸದನ ಆರಂಭವಾಗುತ್ತಿದ್ದಂತೆ ನ್ಯಾಶನಲ್ ಕಾನ್ಫರೆನ್ಸ್‌ನ ಸದಸ್ಯರು ಎದ್ದು ನಿಂತರು ಹಾಗೂ ಜನರಲ್ ರಾವತ್ ಅವರ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅಥವಾ ಇತರ ಸಚಿವರು ರಾವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಆಗ್ರಹಿಸಿದರು.

  ಆದಾಗ್ಯೂ, ಇದಕ್ಕೆ ಪ್ರತಿಯಾಗಿ ಬಿಜೆಪಿ ಜಮ್ಮ ಕಾಶ್ಮೀರ ಘಟಕದ ವಕ್ತಾರ ಬ್ರಿಗೇಡಿಯರ್ ಅನಿಲ್ ಗುಪ್ತಾ (ನಿವೃತ್ತ) ತನ್ನ ಹೇಳಿಕೆಯಲ್ಲಿ, ‘‘ಮುಖ್ಯಮತ್ರಿ ಪ್ರಾಯೋಗಿಕವಾಗಿ ಆಲೋಚಿಸುತ್ತಿದ್ದಾರೆ. ಅವರು ನಿರಾಕರಿಸುವ ಬದಲು ವಾಸ್ತವ ಸ್ವೀಕರಿಸುತ್ತಿದ್ದಾರೆ’’ ಎಂದು ಹೇಳಿದ್ದಾರೆ.

ಜನರಲ್ ರಾವತ್‌ರ ಹೇಳಿಕೆಯನ್ನು ಸಕಾರಾತ್ಮಕವಾಗಿ ಗ್ರಹಿಸಬೇಕು ಹಾಗೂ ಅದನ್ನು ರಾಜಕೀಯ ವಿಷಯವಾಗಿ ಬದಲಾಯಿಸಬಾರದು ಎಂದು ಬ್ರಿಗೇಡಿಯರ್ ಗುಪ್ತಾ ಹೇಳಿದ್ದಾರೆ.

ಈ ವಿಷಯದ ಕುರಿತಂತ ವಿಧಾನ ಸಭೆಯಲ್ಲಿ ಮಾತನಾಡಿದ ನ್ಯಾಶನಲ್ ಕಾನ್ಫರೆನ್ಸ್‌ನ ಶಾಸಕ ಅಲಿ ಮುಹಮ್ಮದ್ ಸಾಗರ್, ಸೇನಾ ವರಿಷ್ಠರ ಹೇಳಿಕೆ ದುಃಖಕರ ಹಾಗೂ ಅಸಮರ್ಥನೀಯ. ಕಾಶ್ಮೀರದ ಕುರಿತು ತಪ್ಪು ಅಭಿಪ್ರಾಯ ರವಾನಿಸುವ ಇಂತಹ ಹೇಳಿಕೆಯನ್ನು ಅವರು ನೀಡಬಾರದಿತ್ತು ಎಂದಿದ್ದಾರೆ.

 ಈ ಹೇಳಿಕೆಗೆ ಸಿಪಿಎಂನ ಎಂ.ವೈ. ತರಿಗಮಿ ಕೂಡ ವಿರೋಧ ವ್ಯಕ್ತಪಡಿಸಿದ್ದು, ಸರಕಾರ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ನಡೆಯುತ್ತಿದ್ದಂತೆ ನ್ಯಾಶನಲ್ ಕಾನ್ಫರೆನ್ಸ್‌ನ ಸದಸ್ಯರು ಈ ವಿಷಯದ ಕುರಿತು ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡುವಂತೆ ಆಗ್ರಹಿಸಿದರು. ಆದರೆ, ಅವರ ಆಗ್ರಹವನ್ನು ತಿರಸ್ಕರಿಸಲಾಯಿತು. ಈ ಹಿನ್ನೆಲೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಸದಸ್ಯರು ಸಭಾ ತ್ಯಾಗ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News