ಸೋದರನ ಸಾವಿಗೆ ನ್ಯಾಯ ಕೋರಿ 767 ದಿನಗಳಿಂದ ಹೋರಾಟ: ಹೈಕೋರ್ಟ್ ಮೆಟ್ಟಿಲೇರಿದ ಯುವಕ
ತಿರುವನಂತಪುರ,ಜ.16: 2014ರಲ್ಲಿ ತನ್ನ ಸೋದರ ಶ್ರೀಜೀವ ಕಸ್ಟಡಿ ಸಾವಿನ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಳ್ಳುವವರೆಗೆ ತನ್ನ ಆಮರಣಾಂತ ನಿರಶನವನ್ನು ಮುಂದುವರಿಸುವುದಾಗಿ ಕಳೆದ 767 ದಿನಗಳಿಂದ ಇಲ್ಲಿಯ ಸಚಿವಾಲಯ ಕಟ್ಟಡದ ಹೊರಗೆ ಪ್ರತಿಭಟನೆಯನ್ನು ನಡೆಸುತ್ತಿರುವ ಶ್ರೀಜಿತ್ ಹೇಳಿದ್ದಾರೆ.
ಶ್ರೀಜಿತ್(29) ಪ್ರತಿಭಟನೆಯ ಕುರಿತು ಸಾಮಾಜಿಕ ಮಾಧ್ಯಮಗಳಿಂದ ತಿಳಿದುಕೊಂಡಿರುವ ನೂರಾರು ಜನರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಶ್ರೀಜಿತ್ ಜೊತೆ ಸರದಿ ಉಪವಾಸವನ್ನೂ ಅವರು ಆರಂಭಿಸಿದ್ದಾರೆ. ಇದೇ ವೇಳೆ ಶ್ರೀಜಿತ್ ಕೈಗೊಂಡಿರುವ ಆಮರಣಾಂತ ನಿರಶನ ಮಂಗಳವಾರ 38ನೇ ದಿನಕ್ಕೆ ಕಾಲಿರಿಸಿದೆ.
ಶ್ರೀಜಿತ್ ತಾಯಿ ರಮಣಿ ಪ್ರಮೀಳಾ(50) ಅವರು ಇಂದು ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿ, ಶ್ರೀಜಿವ್ ಕಸ್ಟಡಿ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿದ್ದಾರೆ. ‘‘ನನ್ನ ಈ ಮಗನನ್ನೂ ಕಳೆದುಕೊಳ್ಳುವ ಭೀತಿ ನನ್ನನ್ನು ಕಾಡುತ್ತಿದೆ. ಈಗ ಇಷ್ಟೆಲ್ಲ ಬೆಂಬಲ ದೊರಕಿದ ಬಳಿಕವಷ್ಟೇ ನ್ಯಾಯ ದೊರೆಯುತ್ತದೆ ಎಂಬ ಭರವಸೆ ಮೂಡಿದೆ. ನಾವು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಸುಳ್ಳು ಕಳವು ಪ್ರಕರಣದಲ್ಲಿ ತನ್ನ ಸೋದರನನ್ನು ಬಂಧಿಸಲಾಗಿತ್ತು ಮತ್ತು ಆತ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆಗೆ ಬಲಿಯಾಗಿದ್ದಾನೆ ಎಂದು ಹೇಳಿದ ಶ್ರೀಜಿತ್, ಪೊಲೀಸ್‌ರೋರ್ವರ ಸಂಬಂಧಿ ಯುವತಿಯೊಂದಿಗೆ ತನ್ನ ಸೋದರ ನಿಕಟವಾಗಿದ್ದ. ಆತನಿಗೆ ಚಿತ್ರಹಿಂಸೆ ನೀಡಿದ್ದ ಪೊಲೀಸರು ತಮ್ಮ ಅಪರಾಧವನ್ನು ಮುಚ್ಚಿಡಲು ಕಥೆಯೊಂದನ್ನು ಹುಟ್ಟಿಸಿದ್ದಾರೆ ಮತ್ತು ಸುಳ್ಳು ಸಾಕ್ಷವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಆದರೆ ಬಂಧನವಾದ ಬಳಿಕ ಶ್ರೀಜೀವ್ ತನ್ನ ಒಳಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಪೊಲೀಸರು ಪ್ರತಿಪಾದಿಸುತ್ತಿದ್ದಾರೆ.
ಆತ ಡೆತ್ ನೋಟ್ ಬರೆದಿದ್ದು, ಕೈಬರಹವನ್ನು ವಿಧಿವಿಜ್ಞಾನ ತಜ್ಞರು ದೃಢಪಡಿಸಿದ್ದಾರೆ. ಕಸ್ಟಡಿಯಲ್ಲಿ ಚಿತ್ರಹಿಂಸೆಯಿಂದ ಗಾಯಗಳ ಬಗ್ಗೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ. ಶ್ರೀಜೀವ್‌ನನ್ನು ಆಸ್ಪತ್ರೆಗೆ ಒಯ್ದಾಗ ಆತ ತಾನು ಸೇವಿಸಿದ್ದ ವಿಷದ ಹೆಸರನ್ನು ವೈದ್ಯರಿಗೆ ತಿಳಿಸಿದ್ದ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿದವು. ಕಾರ್ಬೊಫುರಾನ್ ವಿಷದಿಂದ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ 2016ರಲ್ಲಿ ಪೊಲೀಸ್ ದೂರು ಪ್ರಾಧಿಕಾರವು ಕಸ್ಟಡಿ ಚಿತ್ರಹಿಂಸೆಯಿಂದ ಸಾವಿಗೆ ಪೊಲೀಸರು ಹೊಣೆಯಾಗಿದ್ದಾರೆ ಎಂದು ಹೇಳಿತ್ತು.
ಶ್ರೀಜೀವ್‌ಗೆ ನ್ಯಾಯ ದೊರೆಯಬೇಕು. ಉಚ್ಚ ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ನಾವು ಬಯಸಿದ್ದೇವೆ ಎಂದು ಶ್ರೀಜಿತ್ ಹೋರಾಟದಲ್ಲಿ ಕೈ ಜೋಡಿಸಿರುವ ಅಖಿಲ್ ಥಾಮಸ್ ತಿಳಿಸಿದರು.