2024ರ ಹೊತ್ತಿಗೆ ಭಾರತವು ಹಿಂದೂ ರಾಷ್ಟ್ರವಾಗಲಿದೆ ಎಂದ ಬಿಜೆಪಿ ಶಾಸಕ

Update: 2018-01-16 14:17 GMT

ಲಕ್ನೊ, ಜ.16: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸ್ಥಾಪನೆಯಾಗಿ ನೂರು ವರ್ಷಗಳು ಪೂರ್ಣಗೊಳಿಸುವ ಸಂದರ್ಭದಲ್ಲಿ ಅಂದರೆ 2024ರಲ್ಲಿ ಭಾರತವು ಹಿಂದೂ ರಾಷ್ಟ್ರವಾಗಲಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರಾದ ಸುರೇಂದ್ರ ಸಿಂಗ್ ತಿಳಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಮುಸ್ಲಿಮರು ಪಾಕಿಸ್ತಾನದ ಬೆಂಬಲಿಗರಾಗಿದ್ದಾರೆ. ಹಾಗಾಗಿ ನಮ್ಮ ದೇಶದ ಸಂಸ್ಕೃತಿಯನ್ನು ಒಪ್ಪುವಂತಹ ಮುಸ್ಲಿಮರು ಮಾತ್ರ ಭಾರತದಲ್ಲಿ ಉಳಿಯಲಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿರುವ ಸಿಂಗ್, ರಾಹುಲ್ ಮಿಶ್ರ ಸಂಸ್ಕೃತಿಯವರಾಗಿದ್ದಾರೆ ಹಾಗಾಗಿ ಅವರೆಂದೂ ಪ್ರಧಾನ ಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ರವಿವಾರದಂದು ಬಲಿಯಾದಲ್ಲಿ ವರದಿಗಾರರ ಜೊತೆ ಮಾತನಾಡುವ ವೇಳೆ ಶಾಸಕರು ಈ ರೀತಿ ಹೇಳಿಕೆ ನೀಡಿದ್ದು ಅದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಪಕವಾಗಿ ಹರಿದಾಡುತ್ತಿವೆ. ಬಹಳ ಕಡಿಮೆ ಮುಸ್ಲಿಮರು ದೇಶಭಕ್ತರಾಗಿದ್ದಾರೆ. ಅವರು ದೇಶದ ಬಗ್ಗೆ ಯೋಚಿಸುವುದಿಲ್ಲ. ಇಲ್ಲಿ ಬದುಕಿ ಇಲ್ಲಿಯ ಅನ್ನವನ್ನೇ ತಿಂದರೂ ಅವರು ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ. ಇದಕ್ಕಿಂತ ದುರದೃಷ್ಟಕರವಾದುದು ಬೇರ್ಯಾವುದೂ ಇಲ್ಲ ಎಂದು ಸಿಂಗ್ ಹೇಳಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

 ರಾಹುಲ್ ಗಾಂಧಿಯ ತಂದೆ ಭಾರತೀಯರಾಗಿದ್ದಾರು ಅವರ ತಾಯಿ ಇಟಲಿಯವರಾಗಿದ್ದಾರೆ. ಅವರು ಒಂಥರಾ ಜೆರ್ಸಿ ದನವಿದ್ದಂತೆ. ಅವರು ಎಂದಿಗೂ ಭಾರತೀಯರ ನೋವು ಮತ್ತು ಕಷ್ಟಗಳನ್ನು ತಿಳಿಯಲು ಸಾಧ್ಯವಿಲ್ಲ ಎಂದು ಸುರೇಂದ್ರ ಸಿಂಗ್ ಕುಹಕವಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

 ಶಾಸಕರ ಈ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಿರುವ ಉತ್ತರ ಪ್ರದೇಶ ಬಿಜೆಪಿ, ಈ ಹೇಳಿಕೆಯು ಶಾಸಕರ ವೈಯಕ್ತಿಕ ಅಭಿಪ್ರಾಯವಾಗಿದ್ದು ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News