ಜಲ್ಲಿಕಟ್ಟು: ಹೋರಿ ದಾಳಿಯಿಂದ ಮೂವರು ಪ್ರೇಕ್ಷಕರ ಸಾವು

Update: 2018-01-16 14:27 GMT

ಚೆನ್ನೈ, ಜ.16: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಅಥವಾ ಹೋರಿಯನ್ನು ಪಳಗಿಸುವ ಸ್ಪರ್ಧೆಯ ಸಮಯದಲ್ಲಿ ಹೋರಿಯು ಪ್ರೇಕ್ಷಕರ ಮೇಲೆ ದಾಳಿ ನಡೆಸಿದ ಪರಿಣಾಮ ಮೂವರು ಮೃತಪಟ್ಟ ಘಟನೆ ರಾಜ್ಯದ ವಿವಿಧೆಡೆಗಳಲ್ಲಿ ನಡೆದಿದೆ.

ಶಿವಗಂಗಾ ಜಿಲ್ಲೆಯ ಗ್ರಾಮವೊಂದರಲ್ಲಿ ಹೋರಿಯೊಂದು ಪ್ರೇಕ್ಷಕರ ಮೇಲೆ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರೆ ಐವತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು ತ್ರಿಚಿಯಲ್ಲಿಯೂ ಹೋರಿ ದಾಳಿಗೆ ಪ್ರೇಕ್ಷಕರೊಬ್ಬರು ಬಲಿಯಾಗಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಧುರೈ ಜಿಲ್ಲೆಯ ಅಲಂಗನಲ್ಲೂರ್‌ನಲ್ಲಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಮ್ ಜಂಟಿಯಾಗಿ ಜಲ್ಲಿಕಟ್ಟು ಕ್ರೀಡೆಯನ್ನು ಉದ್ಘಾಟಿಸಿದರು. ಈ ಸ್ಪರ್ಧೆಯಲ್ಲಿ ಸುಮಾರು ಒಂದು ಸಾವಿರ ಎತ್ತುಗಳು ಹಾಗೂ 1,200 ಓಟಗಾರರು ಭಾಗವಹಿಸಿದ್ದರು.

ಜಲ್ಲಿಕಟ್ಟು ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಪೊಂಗಲ್ ಹಬ್ಬದ ಪ್ರಯುಕ್ತ ಜಲ್ಲಿಕಟ್ಟು ನಡೆಯುತ್ತದೆ. ಕ್ರೀಡೆಯ ನಿಯಮದಂತೆ ವ್ಯಕ್ತಿಯೊಬ್ಬ ಹೋರಿಯ ಬೆನ್ನ ಮೇಲಿರುವ ಉಬ್ಬನ್ನು ಹಿಡಿದು ನಿಗದಿತ ಸಮಯದವರೆಗೆ ನಿಲ್ಲಲು ಶಕ್ತನಾದರೆ ಆತನಿಗೆ ಬಹುಮಾನವನ್ನು ನೀಡಲಾಗುತ್ತದೆ.

ಹೋರಿಯನ್ನು ಪಳಗಿಸಲು ಶಕ್ತನಾದ ವ್ಯಕ್ತಿ ಮತ್ತು ಪಳಗಿಸಲು ಸಾಧ್ಯವಾಗದ ಹೋರಿಯ ಮಾಲಕರಿಗೆ ನಗದು, ದ್ವಿಚಕ್ರ ವಾಹನ ಸೇರಿದಂತೆ ಇತರ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ. ಈ ವರ್ಷ ಅಲಂಗನಲ್ಲೂರ್‌ನಲ್ಲಿ ನಡೆದ ಜಲ್ಲಿಕಟ್ಟುವಿನಲ್ಲಿ ಎರಡು ಕಾರುಗಳನ್ನು ಬಹುಮಾನವಾಗಿ ನೀಡಲಾಗಿದೆ. ಕಳೆದ ವರ್ಷ ಜಲ್ಲಿಕಟ್ಟುವನ್ನು ನಿಷೇಧಿಸಿರುವುದರ ವಿರುದ್ದ ವ್ಯಾಪಕ ಪ್ರತಿಭಟನೆಗಳು ನಡೆದ ನಂತರ ಸುಗ್ರೀವಾಜ್ಞೆಯನ್ನು ಹೊರಡಿಸುವ ಮೂಲಕ ಪ್ರಾಣಿಗಳ ಮೇಲೆ ಹಿಂಸೆ ತಡೆ ಕಾಯ್ದೆಯಲ್ಲಿ ತಿದ್ದುಪಡಿಯನ್ನು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News