ಜಯಲಲಿತಾ ಸಾವಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಶಶಿಕಲಾ ಸಹೋದರ

Update: 2018-01-17 16:51 GMT

ಚೆನ್ನೈ, ಜ.17: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಮೃತಪಟ್ಟು ವರ್ಷಗಳೇ ಉರುಳಿದರೂ ಅವರ ಸಾವಿನ ಹಿಂದಿರುವ ಊಹಾಪೋಹಗಳು ಇನ್ನು ಕೂಡಾ ಕೊನೆಯಾಗಿಲ್ಲ. ಜಯಲಲಿತಾ ಅವರು ಅಪೋಲೊ ಆಸ್ಪತ್ರೆಯ ವರದಿಗಳು ತಿಳಿಸಿರುವಂತೆ ಡಿಸೆಂಬರ್ ಐದರಂದು ಮೃತಪಟ್ಟಿರಲಿಲ್ಲ. ಅವರು ಡಿಸೆಂಬರ್ ನಾಲ್ಕರಂದೇ ಕೊನೆಯುಸಿರೆಳೆದಿದ್ದರು ಎಂದು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಸಹೋದರ ದಿವಾಕರನ್ ಬುಧವಾರ ಹೇಳಿಕೆ ನೀಡುವ ಮೂಲಕ ಈ ಅನುಮಾನಗಳಿಗೆ ಮತ್ತೆ ನೀರೆರೆದಿದ್ದಾರೆ.

ಜಯಲಲಿತಾ ಅವರ ಬೆಂಬಲಿಗರು ದುಖದಿಂದ ವ್ಯಾಪಕ ಹಿಂಸೆ ನಡೆಸಬಹುದು ಎಂಬ ಕಾರಣದಿಂದ ಭದ್ರತೆಯ ದೃಷ್ಟಿಯಿಂದ ಪಕ್ಷವು ಸಾವಿನ ವಿಷಯವನ್ನು ತಡವಾಗಿ ತಿಳಿಸಿತ್ತು ಎಂದು ದಿವಾಕರನ್ ತಿಳಿಸಿದ್ದಾರೆ. ಈ ಸಮಯವನ್ನು ರಾಜ್ಯದಲ್ಲಿರುವ ಅಪೊಲೊ ಆಸ್ಪತ್ರೆಯ ಎಲ್ಲ ಶಾಖೆಗಳಿಗೆ ಭದ್ರತೆಯನ್ನು ಒದಗಿಸಲು ಬಳಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಜಯಲಲಿತಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಅಳವಡಿಸಿದ್ದ ತಡೆಗಳನ್ನು ಭೇದಿಸಿದ ಅವರ ಬೆಂಬಲಿಗರು ಆಸ್ಪತ್ರೆಯ ಹೊರಗೆ ಕಲ್ಲು ತೂರಾಟದಲ್ಲಿ ತೊಡಗಿದ್ದರು.

ಎಐಎಡಿಎಂಕೆ ಮುಖ್ಯಸ್ಥೆಯಾಗಿದ್ದ ಜಯಲಲಿತಾ ಅವರು ಆರೋಗ್ಯ ಸಮಸ್ಯೆಯಿಂದಾಗಿ ಸೆಪ್ಟೆಂಬರ್ 22ರಂದು ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಪ್ರಕಾರ ಡಿಸೆಂಬರ್ ನಾಲ್ಕರಂದು ಜಯಲಲಿತಾ ಅವರು ಹೃದಯಾಘಾತಕ್ಕೊಳಗಾಗಿದ್ದರು ಮತ್ತು ಮರುದಿನ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿತ್ತು. ಡಿಸೆಂಬರ್ ಐದರ ಸಂಜೆ ವೇಳೆಗೆ ತಮಿಳುನಾಡಿನ ಮಾಧ್ಯಮಗಳು ಜಯಲಲಿತಾ ಮೃತಪಟ್ಟಿರುವ ಬಗ್ಗೆ ಸುದ್ದಿ ಪ್ರಸಾರ ಮಾಡಿದ್ದವು. ಆರಂಭದಲ್ಲಿ ಈ ಸುದ್ದಿಯನ್ನು ತಳ್ಳಿಹಾಕಿದ ಆಸ್ಪತ್ರೆಯ ಮೂಲಗಳು ತಾವು ಜಯಲಲಿತಾ ಅವರನ್ನು ಉಳಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ತಿಳಿಸಿದ್ದವು. ಅಂತಿಮವಾಗಿ ರಾತ್ರಿ 11.30ರ ಹೊತ್ತಿಗೆ ಆಕೆಯ ಸಾವನ್ನುಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News