ಮುಂಬೈ ಶೇರುಪೇಟೆಯಲ್ಲಿ ಸಂಭ್ರಮ :ಮೊದಲ ಬಾರಿಗೆ 35,000 ದಾಟಿದ ಸೆನ್ಸೆಕ್ಸ್

Update: 2018-01-17 16:53 GMT

ಮುಂಬೈ,ಜ.17: ಮುಂಬೈ ಶೇರುಪೇಟೆ ಬುಧವಾರ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ಖರೀದಿಯ ಭರಾಟೆಯಲ್ಲಿ ಮುಂಬೈ ಶೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸೂಚಿ ಸೆನ್ಸೆಕ್ಸ್ ಇದೇ ಮೊದಲ ಬಾರಿ 35000 ಅಂಶಗಳನ್ನು ದಾಟಿ ಮುಕ್ತಾಯಗೊಂಡಿದೆ. ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್‌ಎಸ್‌ಈ)ದ ಸೂಚಿ ನಿಫ್ಟಿ ಕೂಡ ಹಿಂದುಳಿದಿಲ್ಲ. ಅದೂ ಹೊಸ ಎತ್ತರದೊಡನೆ ಮುಕ್ತಾಯಗೊಂಡು ಸಾರ್ವಕಾಲಿಕ ದಾಖಲೆಯನ್ನು ಸ್ಥಾಪಿಸಿದೆ.

ಬುಧವಾರ 310.77(ಶೇ.0.89) ಅಂಶಗಳ ಗಳಿಕೆಯೊಂದಿಗೆ 35,081.82ಕ್ಕೆೆ ಮುಕ್ತಾಯಗೊಂಡ ಸೆನ್ಸೆಕ್ಸ್ ಜ.16ರ ತನ್ನದೇ ದಾಖಲೆ(34,843.51)ಯನ್ನು ಮುರಿದಿದೆ. ದಿನದ ವಹಿವಾಟಿನಲ್ಲಿ 35,118.61 ಅಂಶಗಳ ಉತ್ತುಂಗಕ್ಕೇರಿದ್ದ ಸೆನ್ಸೆಕ್ಸ್ ಹಿಂದಿನ ಬಾರಿ ಜ.15ರಂದು 34,963.69ರಷ್ಟು ಎತ್ತರಕ್ಕೇರಿತ್ತು.

ಕಳೆದ ವರ್ಷದ ಡಿ.26ರಂದು 34,000 ಮಟ್ಟವನ್ನು ತಲುಪಿದ್ದ ಸೆನ್ಸೆಕ್ಸ್ ಕೇವಲ 17 ವಹಿವಾಟು ದಿನಗಳಲ್ಲಿ 34,000 ಅಂಶಗಳ ಗಡಿಯನ್ನು ದಾಟಿದೆ.

ಅತ್ತ ನಿಫ್ಟಿ ಬುಧವಾರ 88.10(ಶೇ.0.82) ಅಂಶಗಳ ಗಳಿಕೆಯೊಂದಿಗೆ 10,788.55 ಅಂಶಗಳಲ್ಲಿ ಮುಕ್ತಾಯಗೊಂಡು ಸಾರ್ವಕಾಲಿಕ ಎತ್ತರವನ್ನು ತಲುಪಿದೆ. ಜ.15ರಂದು ಅದು 10,741.55 ಅಂಶಗಳಿಗೆ ತಲುಪಿ ಹೊಸ ದಾಖಲೆಯನ್ನು ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News