‘ಗೋರಕ್ಷಕ’ರ ಭೀತಿಯಿಂದ ಸಾಕಿದ ದನವನ್ನು ಠಾಣೆಗೊಪ್ಪಿಸಿದ ಕಾರ್ಪೊರೇಟರ್

Update: 2018-01-17 17:57 GMT

ಲಕ್ನೊ, ಜ.17: ತನ್ನ ಮೇಲೆ ‘ಗೋರಕ್ಷಕ’ರಿಂದ ದಾಳಿ ನಡೆಯಬಹುದೆಂಬ ಭೀತಿಯಿಂದ ಉತ್ತರಪ್ರದೇಶದ ಮೀರತ್ ನಗರದ ಮುಸ್ಲಿಂ ಕಾರ್ಪೊರೇಟರ್ ತಮ್ಮ ಮನೆಯಲ್ಲಿ ಸಾಕುತ್ತಿದ್ದ ದನವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

 ವಾರ್ಡ್ 73ರ ಕಾರ್ಪೊರೇಟರ್, ಬಹುಜನ ಸಮಾಜವಾದಿ ಪಕ್ಷದ ಮುಖಂಡ ಅಬ್ದುಲ್ ಗಫ್ಫಾರ್ ಮಂಗಳವಾರ ತಮ್ಮ ಸಾಕುದನದೊಂದಿಗೆ ನೌಚಾಂಡಿ ಪೊಲೀಸ್ ಠಾಣೆಗೆ ಆಗಮಿಸಿ, ಹಸುವನ್ನು ನೋಡಿಕೊಳ್ಳುವಂತೆ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್‌ರನ್ನು ಕೋರಿದ್ದಾರೆ. ಇವರೊಂದಿಗೆ ಕುಟುಂಬದ ಸದಸ್ಯರು ಹಾಗೂ ನೆರೆಮನೆಯವರಿದ್ದರು. ಈ ದನವನ್ನು ಸಾಕುವವರಿಗೆ ಹಸ್ತಾಂತರಿಸಬೇಕು. ಪ್ರತೀ ತಿಂಗಳು ಅವರ ಮನೆಗೆ ಹೋಗಿ ನನ್ನ ದನವನ್ನು ನೋಡಿಕೊಂಡು ಬರುತ್ತೇನೆ ಎಂದು ಪೊಲೀಸರನ್ನು ವಿನಂತಿಸಿರುವುದಾಗಿ ಗಫ್ಫಾರ್ ತಿಳಿಸಿದ್ದಾರೆ. ಹಸುವನ್ನು ಠಾಣೆಗೆ ಹಸ್ತಾಂತರಿಸಿದ ಬಗ್ಗೆ ಗಫ್ಫಾರ್‌ಗೆ ರಶೀದಿ ನೀಡಲಾಗಿದೆ. ಎರಡು ವರ್ಷದ ಹಿಂದೆ ತನ್ನ ಸೋದರಿ ನೀಡಿದ ಕರುವನ್ನು ಅತ್ಯಂತ ಕಾಳಜಿಯಿಂದ ಸಾಕಿದ್ದೇನೆ. ಆದರೆ ಈಗ ತಥಾಕಥಿತ ಗೋರಕ್ಷಕರ ದಾಳಿಯ ಭೀತಿಯ ಕಾರಣ ಅತ್ಯಂತ ನೋವಿನಿಂದ ದನವನ್ನು ಮನೆಯಿಂದ ಹೊರಗೆ ಕಳಿಸುತ್ತಿದ್ದೇನೆ . ಇದು ತನ್ನ ವೈಯಕ್ತಿಕ ನಿರ್ಣಯ. ಇದರಲ್ಲಿ ಪಕ್ಷದ ಪಾತ್ರವೇನೂ ಇಲ್ಲ ಎಂದು ಗಫ್ಫಾರ್ ಹೇಳಿದ್ದಾರೆ.

ಹಸುವನ್ನು ಗಫ್ಫಾರ್‌ಗೆ ಮರಳಿಸುವುದಾಗಿ ಪೊಲೀಸ್ ಅಧೀಕ್ಷಕ ಮಾನ್‌ಸಿಂಗ್ ಚೌಹಾಣ್ ಹೇಳಿದ್ದಾರೆ. ಆದರೆ ತನ್ನ ನಿರ್ಧಾರ ಬದಲಿಸುವುದಿಲ್ಲ ಎಂದು ಗಫ್ಫಾರ್ ತಿಳಿಸಿದ್ದಾರೆ.

 ಕಳೆದ ಕೆಲ ವರ್ಷಗಳಲ್ಲಿ ದೇಶದಾದ್ಯಂತ ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರ ಹೆಚ್ಚಿದ್ದು ತಥಾಕಥಿಕ ಗೋರಕ್ಷಕರು ಜನರನ್ನು ಥಳಿಸುವುದು, ಅವರ ಬಳಿಯಿದ್ದ ಹಸುಗಳನ್ನು ಸೆಳೆದೊಯ್ಯುವುದು ಇತ್ಯಾದಿ ಕೃತ್ಯಗಳಿಂದ ಒಂದು ವರ್ಗದ ಜನರಲ್ಲಿ ಭೀತಿಯ ವಾತಾವರಣ ಮೂಡಿಸಿದ್ದಾರೆ. ಕೆಲವು ಸಂಘಟನೆಗಳು ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿಸಿ ನಡೆಸುತ್ತಿರುವ ಈ ಹಿಂಸಾಚಾರವನ್ನು ಹತ್ತಿಕ್ಕಲು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಪಕ್ಷಗಳು ಟೀಕಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News