ಬಿಜೆಪಿ ಪ್ರತಿಭಟನೆ: ಉ.ಪ್ರದೇಶ ಪ್ರವಾಸ ಮೊಟಕುಗೊಳಿಸಿದ ರಾಹುಲ್ ಗಾಂಧಿ

Update: 2018-01-17 18:00 GMT

ಲಕ್ನೊ, ಜ.17: ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಉತ್ತರಪ್ರದೇಶಕ್ಕೆ ಭೇಟಿ ನೀಡಿರುವ ರಾಹುಲ್ ಗಾಂಧಿ ಬಿಜೆಪಿ ಬೆಂಬಲಿಗರ ತೀವ್ರ ಪ್ರತಿಭಟನೆಯ ಕಾರಣ ತಮ್ಮ ಎರಡು ದಿನದ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.

ರಾಹುಲ್ ಹಾಗೂ ಅವರ ಬೆಂಗಾವಲ ಪಡೆ ಹಾದುಹೋಗಬೇಕಿದ್ದ ಗೌರಿಗಂಜ್ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದ ಕಾರಣ ವಾಹನಗಳ ಪಥವನ್ನು ಬದಲಿಸಲಾಯಿತು. ಗೌರಿಗಂಜ್- ಮುಸಾಫಿರ್‌ಖಾನ ರಸ್ತೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಆಶಿಷ್ ಶುಕ್ಲ ಹಾಗೂ ಸುಧಾಂಶು ಶುಕ್ಲ ನೇತೃತ್ವದಲ್ಲಿ ಒಟ್ಟುಸೇರಿದ್ದ ಪ್ರತಿಭಟನಾಕಾರರು, ‘ಸಂಸದ ರಾಹುಲ್ ನಾಪತ್ತೆಯಾಗಿದ್ದಾರೆ’ ಎಂಬ ಘೋಷಣಾಫಲಕ ಹಿಡಿದುಕೊಂಡಿದ್ದರು. ಅಲ್ಲದೆ ರಾಹುಲ್ ತಮ್ಮ ಪ್ರತಿಷ್ಠಾನ(ಟ್ರಸ್ಟ್)ಕ್ಕಾಗಿ ರೈತರ ಜಮೀನನ್ನು ಕಸಿದುಕೊಂಡಿದ್ದಾರೆ ಎಂದು ಕೆಲವು ಬ್ಯಾನರ್‌ಗಳಲ್ಲಿ ಆರೋಪಿಸಲಾಗಿದ್ದರೆ, ನಕಲಿ ಯೋಜನೆಗಳಿಗೆ ಶಿಲಾನ್ಯಾಸ ನಡೆಸುತ್ತಿರುವ ರಾಹುಲ್, ತಮ್ಮ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತು ಸಂಪೂರ್ಣ ನಿರ್ಲಕ್ಷದ ಭಾವನೆ ತೋರುತ್ತಿದ್ದಾರೆ ಎಂಬ ಆರೋಪ ಇರುವ ಬ್ಯಾನರ್‌ಗಳನ್ನೂ ಪ್ರದರ್ಶಿಸಲಾಯಿತು.

ಈ ರಸ್ತೆ ಮಾರ್ಗದಲ್ಲಿ ಉದ್ರಿಕ್ತ ಪರಿಸ್ಥಿತಿ ಇರುವ ಕಾರಣ ರಾಹುಲ್ ಗಾಂಧಿ ಈ ರಸ್ತೆ ಮೂಲಕ ಸಾಗಿ ಹೋಗಲು ನಾವು ಅವಕಾಶ ನೀಡಲಿಲ್ಲ ಎಂದು ಹೆಚ್ಚುವರಿ ಎಸ್‌ಪಿ ಬಿ.ಸಿ.ದುಬೆ ಹೇಳಿದ್ದಾರೆ. ನಂತರ ರಾಹುಲ್ ಜಾಮೊ ರಸ್ತೆ ತನಕ ಸಾಗಿದ ಬಳಿಕ ಸುಮಾರು 2 ಕಿ.ಮೀ.ನಷ್ಟು ನಡೆದು ಗೌರಿಗಂಜ್ ತಲುಪಿದ್ದಾರೆ. ಮಂಗಳವಾರವೂ ಬಿಜೆಪಿ ಬೆಂಬಲಿಗರು ರಾಹುಲ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ರಾಯ್‌ಬರೇಲಿ ಜಿಲ್ಲೆಯ ಸಲೋನ್ ಗ್ರಾಮದಿಂದ ಹೊರಟ ರಾಹುಲ್ ತಮ್ಮ ಸ್ವಕ್ಷೇತ್ರ ಅಮೇಥಿಯತ್ತ ಪ್ರಯಾಣಿಸುತ್ತಿದ್ದಾಗ ಕೆಲವು ಬಿಜೆಪಿ ಬೆಂಬಲಿಗರು ರಾಹುಲ್ ವಿರುದ್ಧ ಘೋಷಣೆ ಕೂಗಿದ್ದರು. ಈ ಹಂತದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ಮಧ್ಯೆ ಘರ್ಷಣೆ ಆರಂಭವಾದಾಗ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.

ಇದರಿಂದ ಅಮೇಥಿಯ ರಾಜೀವ್‌ಗಾಂಧಿ ವೃತ್ತದಲ್ಲಿ ತನ್ನ ತಂದೆ ರಾಜೀವ್ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ರಾಹುಲ್‌ಗೆ ಸಾಧ್ಯವಾಗಲಿಲ್ಲ. ಅಮೇಥಿಯಲ್ಲಿ ಪ್ರಧಾನಿ ಮೋದಿಯವರನ್ನು ನಿಂದಿಸಿ ಅವಮಾನಿಸುವ ಪೋಸ್ಟರ್‌ಗಳನ್ನು ಹಚ್ಚಿರುವ ಪ್ರಕರಣದ ಬಗ್ಗೆ ಕ್ಷೇತ್ರದ ಸಂಸದ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳೀಯ ಕಾಂಗ್ರೆಸ್ ಮುಖಂಡ ಅಭಯ್ ಶುಕ್ಲ, ನರೇಂದ್ರ ಸಿಂಗ್ ಹಾಗೂ ರಾಮ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದ ದೋಷಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಎಸ್‌ಪಿ ಬಿ.ಸಿ.ದುಬೆ ಹೇಳಿದ್ದಾರೆ.

ಈ ಮಧ್ಯೆ, ರಾಹುಲ್ ತಾಯಿ ಸೋನಿಯಾ ಗಾಂಧಿಯವರ ಕ್ಷೇತ್ರವಾಗಿರುವ ರಾಯ್‌ಬರೇಲಿಯಲ್ಲಿ ಕರ್ತವ್ಯನಿರತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಕಾಂಗ್ರೆಸ್ ಎಂಎಲ್‌ಸಿ ದೀಪಕ್ ಸಿಂಗ್ ಹಾಗೂ ಇತರರ ವಿರುದ್ಧ ಪೊಲೀಸರು ಎರಡು ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಒಂದು ಪ್ರಕರಣವನ್ನು ಸ್ಥಳೀಯ ವ್ಯಕ್ತಿ ರಾಮ್‌ಸಜೀವನ್ ನಿರ್ಮಲ್ ಎಂಬಾತನ ದೂರಿನ ಹಿನ್ನೆಲೆಯಲ್ಲಿ ದಾಖಲಿಸಲಾಗಿದೆ. ಸ್ಥಳೀಯರು ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ತಮ್ಮ ಸಮಸ್ಯೆ ನಿವೇದಿಸಲು ಯತ್ನಿಸಿದಾಗ ದೀಪಕ್ ಸಿಂಗ್ ಹಾಗೂ ಇತರರು ಹಲ್ಲೆ ನಡೆಸಿ ಹೊರ ತಳ್ಳಿದ್ದಾರೆ .ಇದರಿಂದ ತನಗೆ ತೀವ್ರ ಗಾಯವಾಗಿದೆ ಎಂದು ನಿರ್ಮಲ್ ದೂರು ನೀಡಿರುವುದಾಗಿ ಎಸ್‌ಪಿ ದುಬೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News