ಭಾರತ-ಇಸ್ರೇಲ್ ಬಾಂಧವ್ಯ ಸ್ವರ್ಗದಲ್ಲಿ ನಿಶ್ಚಿತ: ನೆತನ್ಯಾಹು
ಮುಂಬೈ, ಜ.18: ಭಾರತ- ಇಸ್ರೇಲ್ ಬಾಂಧವ್ಯ ಸ್ವರ್ಗದಲ್ಲಿ ನಿಶ್ಚಯವಾಗಿದ್ದು, ಈ ಸ್ನೇಹಸಂಬಂಧ ಮುನುಷ್ಯತ್ವ, ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯದ ಕುರಿತ ಪ್ರೀತಿ ವಿಶ್ವಾಸದ ತಳಹದಿಯ ಮೇಲೆ ನಿಂತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಮುಂಬೈಯಲ್ಲಿ ಆಯೋಜಿಸಲಾದ ಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆಯಲ್ಲಿ ಮಾತನಾಡಿದ ನೆತನ್ಯಾಹು, ಭಾರತದ ಪ್ರಧಾನಿ ಮೋದಿಯವರ ಜೊತೆ ತಾನು ಹಂಚಿಕೊಂಡಿರುವ ಬಾಂಧವ್ಯ ಆಳಕ್ಕಿಳಿದು ಜನಸಾಮಾನ್ಯರನ್ನು ತಲುಪಲಿದೆ ಎಂದು ಹೇಳಿದರು.
ಭಾರತ ದೇಶ, ಇಲ್ಲಿಯ ಜನತೆ ಹಾಗೂ ಸಂಸ್ಕೃತಿಯ ಬಗ್ಗೆ ತನ್ನಲ್ಲಿ ಆಳವಾದ ಹಾಗೂ ಸ್ವೀಕಾರಾರ್ಹ ಗೌರವವಿದೆ. ಭಾರತ ಹಾಗೂ ಇಸ್ರೇಲ್ ದೇಶಗಳಲ್ಲಿ ವಿಶ್ವದ ಅತ್ಯಂತ ಪುರಾತವಾದ ಸಂಸ್ಕೃತಿಯಿದೆ. ಎರಡೂ ದೇಶಗಳಲ್ಲಿ ಪ್ರಜಾಪ್ರಭುತ್ವವಿದೆ, ನಮ್ಮಲ್ಲಿರುವ ಸ್ವಾತಂತ್ರದ ಪ್ರೀತಿ, ಮನಷ್ಯತ್ವದ ಪ್ರೀತಿಯನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದೇವೆ. ನಾವು ನಿಮ್ಮ ಸಹಭಾಗಿಗಳಾಗಿದ್ದು ಈ ಸಹಭಾಗಿತ್ವ ಸ್ವರ್ಗದಲ್ಲಿ ನಿಶ್ಚಿತವಾಗಿದೆ ಎಂದ ನೆತನ್ಯಾಹು, ಇಸ್ರೇಲ್‌ನಲ್ಲಿ ಹೂಡಿಕೆ ಮಾಡುವಂತೆ ಭಾರತೀಯ ಉದ್ಯಮಿಗಳನ್ನು ವಿನಂತಿಸಿದರು.
ಇಸ್ರೇಲ್‌ನಲ್ಲಿ ತಾನು ಅಧಿಕಾರ ಸ್ವೀಕರಿಸಿದಾಗ ಅಲ್ಲಿ ಹಲವು ಕ್ಷೇತ್ರಗಳಲ್ಲಿ ಬೆಟ್ಟದಷ್ಟಿದ್ದ ಸಮಸ್ಯೆಗಳು ಕೊಡುಗೆಯಾಗಿ ಬಂದಿದ್ದವು. ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿ ಪರಿವರ್ತನೆಯ ದಾರಿಯಲ್ಲಿ ಮುನ್ನಡೆದಿದ್ದೇವೆ. ಪ್ರಧಾನಿ ಮೋದಿ ಕೂಡಾ ಭಾರತದಲ್ಲಿ ತನ್ನ ರೀತಿಯಲ್ಲೇ ಕಾರ್ಯನಿರ್ವಹಿಸಿದ್ದಾರೆ. ಸಮಸ್ಯೆಗಳನ್ನು ಎದುರಿಸಿ, ನವೀನ ಶೋಧನೆಗಳನ್ನು ಅರಿತುಕೊಂಡು ಸರಳವಾಗಿ ಪರಿಹಾರ ಹುಡುಕಲು ಮೋದಿ ಮುಂದಾಗಿದ್ದಾರೆ ಎಂದು ನೆತನ್ಯಾಹು ಶ್ಲಾಘಿಸಿದರು. ಅತಿಯಾದ ಕಾನೂನುಗಳನ್ನು ಕಡಿಮೆಗೊಳಿಸಿ, ಖಾಸಗಿ ಸಂಸ್ಥೆಗಳನ್ನು ಸಶಕ್ತಗೊಳಿಸುವ ಮೂಲಕ ತ್ವರಿತ ಅಭಿವೃದ್ಧಿ ಪಡೆಯಲು ಸಾಧ್ಯ . ಕನಿಷ್ಟ, ಸರಳ ಹಾಗೂ ಸುಲಭವಾದ ತೆರಿಗೆ ವ್ಯವಸ್ಥೆಯ ಮೂಲಕ ಖಾಸಗಿ ಸಂಸ್ಥೆಗಳ ಸಶಕ್ತೀಕರಣ ಸಾಧ್ಯ ಎಂದವರು ಹೇಳಿದರು. ತಾನು ಕೈಗೊಂಡ ಆಡಳಿತಾತ್ಮಕ ಕ್ರಮಗಳಿಂದ ವಿಶ್ವಬ್ಯಾಂಕ್‌ನ ಸೂಚ್ಯಾಂಕ ಪಟ್ಟಿಯಲ್ಲಿ ಇಸ್ರೇಲ್ 12 ಸ್ಥಾನಗಳ ಭಡ್ತಿ ಪಡೆಯಲು ಸಾಧ್ಯವಾಗಿದೆ. ಅಮೆರಿಕ, ಸಿಂಗಾಪುರ, ಸ್ವಿಝರ್‌ಲ್ಯಾಂಡ್‌ನಂತಹ ನಗರಗಳು ಸೂಚ್ಯಾಂಕ ಪಟ್ಟಿಯಲ್ಲಿ ಇಸ್ರೇಲ್‌ಗಿಂತ ಮುಂದಿರುವುದು ತನ್ನ ನಿದ್ದೆಗೆಡಿಸಿದೆ ಎಂದವರು ಹೇಳಿದರು.