ಬಂಡಾಯ ನ್ಯಾಯಾಧೀಶರು - ಮುಖ್ಯ ನ್ಯಾಯಮೂರ್ತಿ ಭೇಟಿ: ನಾಲ್ವರು ನ್ಯಾಯಾಧೀಶರು ದೀಪಕ್ ಮಿಶ್ರಾರಿಗೆ ಹೇಳಿದ್ದೇನು ?

Update: 2018-01-18 14:38 GMT

ಹೊಸದಿಲ್ಲಿ, ಜ.18: ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ, ‘ಬಂಡಾಯ’ ನ್ಯಾಯಾಧೀಶರು ಗುರುವಾರ ಮುಖ್ಯ ನ್ಯಾಯಮೂರ್ತಿಯವರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದು ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಸರದಿಪಟ್ಟಿ ನಿಗದಿಗೊಳಿಸುವ ಪ್ರಸ್ತಾವ ಮಾಡಿದ್ದಾರೆ ಎಂದು ವರದಿಯಾಗಿದೆ.

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ಚೇಂಬರ್‌ನಲ್ಲಿ ನಡೆದ ಮಾತುಕತೆಯಲ್ಲಿ ರೋಸ್ಟರ್(ಸರದಿಪಟ್ಟಿ) ವ್ಯವಸ್ಥೆಯ ಜೊತೆಗೆ, ಸೂಕ್ಷ್ಮ ಪ್ರಕರಣಗಳ ಹಂಚಿಕೆ ಕುರಿತೂ ನಾಲ್ವರು ನ್ಯಾಯಾಧೀಶರು ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಪರಿಶೀಲಿಸುವುದಾಗಿ ದೀಪಕ್ ಮಿಶ್ರಾ ಭರವಸೆ ನೀಡಿದರು. ಮಾತುಕತೆ ಸೌಹಾರ್ದಯುತವಾಗಿದ್ದು ಮುಂದಿನ ವಾರ ಮತ್ತಷ್ಟು ಮಾತುಕತೆ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. 30 ನಿಮಿಷ ನಡೆದ ಮಾತುಕತೆ ಸಂದರ್ಭ ‘ಬಂಡಾಯ’ ನ್ಯಾಯಾಧೀಶರಾದ ಚಲಮೇಶ್ವರ್, ರಂಜನ್ ಗೊಗೊಯಿ, ಮದನ್ ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರಲ್ಲದೆ, ನ್ಯಾಯಾಧೀಶರಾದ ಎ.ಕೆ.ಸಿಕ್ರಿ, ಎನ್.ವಿ.ರಮಣ, ಡಿ.ವೈ.ಚಂದ್ರಚೂಡ್ ಮತ್ತು ಯು.ಯು.ಲಲಿತ್ ಕೂಡಾ ಪಾಲ್ಗೊಂಡಿದ್ದರು.

ದೂರಗಾಮಿ ಪರಿಣಾಮ ಬೀರುವ ಪ್ರಕರಣಗಳ ಹಂಚಿಕೆ ಕುರಿತ ತಮ್ಮ ಕಳವಳವನ್ನು ಪರಿಹರಿಸಲು ಯೋಜನೆಯೊಂದನ್ನು ರೂಪಿಸುವಂತೆ ‘ಬಂಡಾಯ’ ನ್ಯಾಯಾಧೀಶರು ಒತ್ತಾಯಿಸಿದರು ಎನ್ನಲಾಗಿದೆ. ಜನವರಿ 12ರಂದು ಪತ್ರಿಕಾಗೋಷ್ಟಿ ನಡೆಸಿದ್ದ ನಾಲ್ವರು ನ್ಯಾಯಾಧೀಶರು, ಮುಖ್ಯನ್ಯಾಯಮೂರ್ತಿಯವರ ಕಾರ್ಯವೈಖರಿಯ ಕುರಿತು ಅಸಮಾಧಾನ ಸೂಚಿಸಿದ್ದರು. ನ್ಯಾಯಾಧೀಶ ಬಿ.ಎಚ್.ಲೋಯಾರ ಸಾವಿನ ಪ್ರಕರಣದಂತಹ ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಕಿರಿಯ ನ್ಯಾಯಾಧೀಶ ಅರುಣ್ ಮಿಶ್ರಾಗೆ ಹಂಚಿಕೆ ಮಾಡಿರುವುದಕ್ಕೆ ಈ ನಾಲ್ವರು ‘ಬಂಡಾಯ ’ ನ್ಯಾಯಾಧೀಶರು ಅತೃಪ್ತಿ ಸೂಚಿಸಿದ್ದರು. ಅಲ್ಲದೆ ಆಧಾರ್‌ಗೆ ಕಾನೂನಿನ ಸಿಂಧುತ್ವ, ಸಲಿಂಗಕಾಮ ನಿಷೇಧದ ಆದೇಶ ಮರುಪರಿಶೀಲನೆ, ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ ನಿರಾಕರಣೆ ಮುಂತಾದ ಪ್ರಮುಖ 8 ಪ್ರಕರಣಗಳ ವಿಚಾರಣೆ ನಡೆಸಲು ರೂಪಿಸಿದ್ದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಿಂದ ಈ ನಾಲ್ವರು ಹಿರಿಯ ನ್ಯಾಯಾಧೀಶರನ್ನು ಹೊರಗಿಟ್ಟಿರುವುದೂ ‘ಬಂಡಾಯ’ ನ್ಯಾಯಾಧೀಶರ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಮಧ್ಯೆ, ನ್ಯಾಯಾಧೀಶ ಲೋಯಾರ ಸಾವಿನ ಪ್ರಕರಣದ ವಿಚಾರಣೆಯನ್ನು ‘ಸೂಕ್ತ ನ್ಯಾಯಪೀಠ’ಕ್ಕೆ ವಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿರುವ ಕಾರಣ ಈ ಪ್ರಕರಣವನ್ನು ಅರುಣ್ ಮಿಶ್ರಾರ ಬದಲು ಬೇರೊಬ್ಬ ನ್ಯಾಯಾಧೀಶರಿಗೆ ವಹಿಸಿಕೊಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾ. ಅರುಣ್ ಮಿಶ್ರ, ವಿನಾಕಾರಣ ತನ್ನನ್ನು ‘ಟಾರ್ಗೆಟ್’ ಮಾಡಲಾಗಿದ್ದು ತನ್ನ ಕ್ಷಮತೆಯ ಕುರಿತು ಪ್ರಶ್ನೆಗಳನ್ನು ಎತ್ತಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News