×
Ad

ಪಾಕ್‌ ಶೆಲ್ ದಾಳಿಗೆ ಬಿಎಸ್‌ಎಫ್ ಯೋಧ ಹುತಾತ್ಮ: ಬಾಲಕಿ ಮೃತ್ಯು

Update: 2018-01-18 20:51 IST

ಜಮ್ಮು, ಜ. 18: ಜಮ್ಮು ಹಾಗೂ ಸಾಂಬಾ ಜಿಲ್ಲೆಯ ಮೂರು ವಲಯಗಳಲ್ಲಿ ಅಂತಾರಾಷ್ಟ್ರೀಯ ಗಡಿಗುಂಟದ ಗ್ರಾಮಗಳು ಹಾಗೂ ಗಡಿ ಹೊರ ಠಾಣೆ ಮೇಲೆ ಪಾಕಿಸ್ತಾನದ ರೇಂಜರ್‌ಗಳು ಭಾರೀ ಶೆಲ್ ದಾಳಿ ನಡೆಸಿದ ಪರಿಣಾಮ ಓರ್ವ ಗಡಿ ಭದ್ರತಾ ಪಡೆಯ ಯೋಧ ಹುತಾತ್ಮನಾಗಿದ್ದಾರೆ. ಓರ್ವ ಬಾಲಕಿ ಮೃತಪಟ್ಟಿದ್ದು, 6 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.

ಆರ್.ಎಸ್. ಪುರ, ಅರ್ನಿಯಾ ಹಾಗೂ ರಾಮಘಡ ವಲಯದ ಅಂತಾರಾಷ್ಟ್ರೀಯ ಗಡಿಗುಂಟ ಪಾಕಿಸ್ತಾನ ರೇಂಜರ್‌ಗಳು ಶೆಲ್ ದಾಳಿ ನಡೆಸಿದರು ಎಂದು ಗಡಿ ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

 ಮೂರು ವಲಯಗಳಲ್ಲಿರುವ 12ಕ್ಕೂ ಅಧಿಕ ಗಡಿ ಹೊರಠಾಣೆಯನ್ನು ಗುರಿಯಾಗಿರಿಸಿ ಪಾಕಿಸ್ತಾನದ ರೇಂಜರ್‌ಗಳು ರಾತ್ರಿ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಗಡಿ ಭದ್ರತಾ ಪಡೆ ಕೂಡ ದಾಳಿ ನಡೆಸಿತು ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನ ಸೇನೆ ಅಂತಾರಾಷ್ಟ್ರೀಯ ಗಡಿರೇಖೆಗುಂಟ 20ಕ್ಕೂ ಅಧಿಕ ಹಳ್ಳಿಗಳನ್ನು ಗುರಿಯಾಗಿರಿಸಿತ್ತು. ಬೆಳಗ್ಗೆ 6 ಗಂಟೆ ವರೆಗೆ ಶೆಲ್ ಹಾಗೂ ಗುಂಡಿನ ದಾಳಿ ಮುಂದುವರಿಸಿತು ಎಂದು ಅವರು ತಿಳಿಸಿದ್ದಾರೆ.

ಈ ಶೆಲ್ ದಾಳಿಯಲ್ಲಿ ಓರ್ವ ಗಡಿ ಭದ್ರತಾ ಪಡೆಯ ಯೋಧ ಹುತಾತ್ಮನಾಗಿದ್ದಾರೆ. 17 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. 5 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹುತಾತ್ಮನಾದ ಯೋಧನನ್ನು ಗಡಿ ಭದ್ರತಾ ಪಡೆಯ 78 ಬೆಟಾಲಿಯನ್‌ನ ಹೆಡ್ ಕಾನ್ಸ್‌ಟೆಬಲ್ ಸುರೇಶ್ ಎಂದು ಗುರುತಿಸಲಾಗಿದೆ. ಇವರು ತಮಿಳುನಾಡಿನ ನಿವಾಸಿ. ಮೃತಪಟ್ಟ ಬಾಲಕಿಯನ್ನು ನೀಲಮ್ ದೇವಿ ಎಂದು ಗುರುತಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News