ಭಯೋತ್ಪಾದನೆಗೆ ಹಣಕಾಸು ನೆರವು: ಎಲ್‌ಇಟಿ, ಹಿಜ್ಬುಲ್ ವರಿಷ್ಠರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

Update: 2018-01-18 17:56 GMT

ಹೊಸದಿಲ್ಲಿ, ಜ. 18: ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಲಷ್ಕರ್ ಎತೊಯ್ಬಾ ತಯ್ಯಿಬದ ವರಿಷ್ಠ ಹಾಫಿಝ್ ಸಯೀದ್ ಹಾಗೂ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಸೇರಿದಂತೆ 12 ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ಆರೋಪ ಪಟ್ಟಿ ದಾಖಲಿಸಿದೆ. ಇಲ್ಲಿನ ನ್ಯಾಯಾಲಯದಲ್ಲಿ 1,279 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ, ತನಿಖೆ ಮುಂದುವರಿಸಲು ಅನುಮತಿ ಕೋರಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಆರೋಪಿಗಳ ನ್ಯಾಯಾಂಗ ಬಂಧನ ಗುರುವಾರಕ್ಕೆ ಅಂತ್ಯವಾಗಿದೆ.

ಭಯೋತ್ಪಾದನೆ ತಡೆ ಕಾಯ್ದೆ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳುತ್ತಿರುವ ಸಂಸ್ಥೆ 6 ತಿಂಗಳ ಒಳಗೆ ಆರೋಪ ಪಟ್ಟಿ ದಾಖಲಿಸದೇ ಇದ್ದರೆ, ಆರೋಪಿಗಳು ಜಾಮೀನಿಗೆ ಅರ್ಹರು. ತನಿಖೆ ಸಂದರ್ಭ ನಾವು ಗಣನೀಯ ಪ್ರಮಾಣದಲ್ಲಿ ದಾಖಲೆ ಹಾಗೂ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿದ್ದೇವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 60 ಸ್ಥಳಗಳಿಗೆ ದಾಳಿ ನಡೆಸಲಾಗಿದೆ. 950 ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 300 ಸಾಕ್ಷಿಗಳು ಇದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News