ಕಪ್ಪು ಗುಲಾಬಿಗೆ ‘ಮುಗುಳುನಗೆ’ಯ ನಿಖಿತಾ

Update: 2018-01-19 12:45 GMT

ನಿರ್ದೇಶಕ ಸುನೀಲ್ ಪುರಾಣಿಕ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ಗುರುಕುಲ’ 2010 ರಾಜ್ಯ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಅದ್ಯಾಕೋ ಆನಂತರ ಸುನೀಲ್ ಪುರಾಣಿಕ್ ಚಿತ್ರ ನಿರ್ದೇಶನದಿಂದ ದೂರವುಳಿದಿದ್ದರು. ಇದೀಗ ಅವರು ಇನ್ನೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಥ್ರಿಲ್ಲರ್, ಸಸ್ಪೆನ್ಸ್ ಭರಿತ ಕಥಾವಸ್ತುವನ್ನು ಹೊಂದಿರುವ ಈ ಚಿತ್ರಕ್ಕೆ ಪುರಾಣಿಕ್ ‘ಕಪ್ಪು ಗುಲಾಬಿ’ ಎಂಬ ಕುತೂಹಲಕಾರಿ ಹೆಸರನ್ನಿಟ್ಟಿದ್ದಾರೆ. ಪ್ರೇಮವು ಕರಾಳವೂ ಆಗಬಹುದೆಂಬುದನ್ನು ಈ ಚಿತ್ರವು ತೋರಿಸಲಿದೆ.‘‘ಇಂದಿನ ತಲೆಮಾರಿನ ಯುವಜನರಲ್ಲಿ ಕುರುಡುಪ್ರೇಮವು ಅತ್ಯಂತ ಸಾಮಾನ್ಯವಾಗಿದ್ದು, ಅದು ಹಲವಾರು ಸಂದರ್ಭದಲ್ಲಿ ಹೇಗೆ ಅಪಾಯಕಾರಿಯಾಗಬಲ್ಲದು’’ ಎಂಬುದನ್ನು ಅವರು ಈ ಚಿತ್ರದಲ್ಲಿ ವಿವರಿಸಲಿದ್ದಾರಂತೆ. ನಾಯಕಿ ಪ್ರಧಾನ ಕಥಾವಸ್ತುವಿರುವ ಈ ಚಿತ್ರಕ್ಕೆ ನಿಖಿತಾ ನಾರಾಯಣ್ ಹಿರೋಯಿನ್. ಗಣೇಶ್ ನಾಯಕನಾಗಿ ನಟಿಸಿದ ‘ಮುಗುಳುನಗೆ’ ಚಿತ್ರದಲ್ಲಿ ನಿಖಿತಾ ಅಭಿನಯ ಚಿತ್ರರಸಿಕರ ಮೆಚ್ಚುಗೆ ಗಳಿಸಿತ್ತು. ನಿಖಿತಾ ಈಗ ‘ಕಪ್ಪು ಗುಲಾಬಿ’ಯಲ್ಲಿ ತನ್ನ ಪಾತ್ರದ ಬಗ್ಗೆ ಬಹಳಷ್ಟು ಎಕ್ಸೈಟ್ ಆಗಿದ್ದಾರಂತೆ. ಓರ್ವ ನಟಿಗೆ ಆಕೆಯ ಜೀವಮಾನದಲ್ಲಿ ಒಂದು ಬಾರಿ ಮಾತ್ರವೇ ದೊರೆಯಬಲ್ಲಂತಹ ಪಾತ್ರ ಇದಾಗಿದೆಯೆಂದು ಆಕೆ ಹೇಳಿಕೊಂಡಿದ್ದಾರೆ. ಅಂದಹಾಗೆ ನಿರ್ದೇಶಕ ಪುರಾಣಿಕ್ ಈ ಚಿತ್ರದ ಮೂಲಕ ತನ್ನ ಪುತ್ರ ಸಾಗರ್‌ನನ್ನು ಬೆಳ್ಳಿತೆರೆಗೆ ಪರಿಚಯಿಸಲಿದ್ದಾರೆ.

ಚಿತ್ರರಂಗದಲ್ಲಿ ಬರೋಬ್ಬರಿ 32 ವರ್ಷಗಳ ಅನುಭವವಿರುವ ಸುನೀಲ್ ಪುರಾಣಿಕ್, ಈವರೆಗೆ ಸಹನಿರ್ದೇಶಕರಾಗಿ 15ಕ್ಕೂ ಅಧಿಕ ಚಿತ್ರಗಳಲ್ಲಿ ದುಡಿದಿದ್ದಾರೆ. ವಿ.ಸೋಮಶೇಖರ್, ಜಿ.ವಿ.ಅಯ್ಯರ್ ಹಾಗೂ ದತ್ತು ಅವರಂತಹ ಪ್ರತಿಭಾವಂತ ನಿರ್ದೇಶಕರಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News