ಭಾರತ್ ನಲ್ಲಿ 70ರ ವೃದ್ಧನಾಗಿ ಸಲ್ಮಾನ್

Update: 2018-01-19 12:56 GMT

‘ಟೈಗರ್ ಜಿಂದಾ ಹೈ’ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆ ನಿರ್ಮಿಸುತ್ತಿರುವಂತೆಯೇ, ಇತ್ತ ಸಲ್ಮಾನ್ ಖಾನ್ ಬಿಡುವಿಲ್ಲದ ಹಾಗೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ರಾಯೀಸ್ 3’ ಚಿತ್ರ ಪೂರ್ಣಗೊಳಿಸಿದ ಬಳಿಕ ಅವರು ‘ಭಾರತ್’ ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ‘ಸುಲ್ತಾನ್’, ‘ಟೈಗರ್ ಜಿಂದಾ ಹೈ’ ಚಿತ್ರಗಳ ನಿರ್ದೇಶಕ ಅಲಿ ಅಬ್ಬಾಸ್ ಝಫರ್ ‘ಭಾರತ್’ ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಬೇರೆ ಬೇರೆ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಝಫರ್ ಈ ಮೊದಲು ಹೇಳಿಕೊಂಡಿದ್ದರು. ಅವರು ಹೇಳುವ ಪ್ರಕಾರ ‘ಭಾರತ್’ನಲ್ಲಿ ಸಲ್ಮಾನ್‌ಗೆ ಅವರ ಇತರ ಚಿತ್ರಗಳಿಗಿಂತ ಅತ್ಯಂತ ವಿಭಿನ್ನವಾದ ಪಾತ್ರ ದೊರೆತಿದೆ. 18ನೇ ವಯಸ್ಸಿನ ಯುವಕನಿಂದ ಹಿಡಿದು 70 ವರ್ಷದ ವೃದ್ಧನವರೆಗೆ ವಿಭಿನ್ನ ಗೆಟಪ್‌ಗಳಲ್ಲಿ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರಂತೆ.

1989ರಲ್ಲಿ ತೆರೆಕಂಡ ಸೂಪರ್‌ಹಿಟ್ ಚಿತ್ರ ‘ಮೈನೆ ಪ್ಯಾರ್ ಕಿಯಾ’ದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದ ಹಾಗೆಯೇ ಈ ಚಿತ್ರದಲ್ಲಿ ಸಲ್ಮಾನ್‌ರನ್ನು ತೋರಿಸುವ ಇರಾದೆ ನಿರ್ದೇಶಕರಿಗಿದೆ. ಇದಕ್ಕಾಗಿ ಚಿತ್ರತಂಡವು ಅತ್ಯಾಧುನಿಕವಾದ ವಿಎಫ್‌ಎಕ್ಸ್ ತಂತ್ರಜ್ಞಾನ ಹಾಗೂ ಹಾಲಿವುಡ್ ಮೇಕಪ್ ಕಲಾವಿದರ ನೆರವನ್ನು ಪಡೆದುಕೊಳ್ಳಲಿದೆ.

ಅಷ್ಟೇ ಅಲ್ಲದೆ ಕಿರಿಯ ವಯಸ್ಸಿನ ಯುವಕನಂತೆ ಕಾಣಲು ಸಲ್ಮಾನ್ ತನ್ನ ದೇಹತೂಕವನ್ನು ಕೂಡಾ ಇಳಿಸಿಕೊಳ್ಳಲಿದ್ದಾರೆ, ಒಂದು ಲೆಕ್ಕದಲ್ಲಿ ಭಾರತ್ ಸಲ್ಮಾನ್ ಅಭಿಮಾನಿಗಳಿಗೆ ವಿಭಿನ್ನ ಅನುಭವವನ್ನು ನೀಡುವುದಂತೂ ಖಂಡಿತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News