25 ವರ್ಷಗಳ ಬಳಿಕ ಮಾಲಿವುಡ್‌ಗೆ ಮರಳಿದ ರಹ್ಮಾನ್

Update: 2018-01-19 13:03 GMT

ಬರೋಬ್ಬರಿ 25 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರಹ್ಮಾನ್ ಮಾಲಿವುಡ್‌ಗೆ ಮರಳಿದ್ದಾರೆ. ಹೌದು, ಪೃಥ್ವಿರಾಜ್ ಅಭಿನಯದ ಮಲಯಾಳಂ ಚಿತ್ರ ‘ಆಡುಜೀವಿತಂ’ಗೆ ಅವರು ಸಂಗೀತ ನೀಡಲಿದ್ದಾರೆ. 1992ರಲ್ಲಿ ತೆರೆಕಂಡ ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟಿಸಿದ್ದ ‘ಯೋಧ’, ಈತನಕ ರಹ್ಮಾನ್ ಸಂಗೀತ ನೀಡಿದ್ದ ಏಕೈಕ ಮಲಯಾಳಂ ಚಿತ್ರವಾಗಿದೆ.

ತಾನು ‘ಅಡುಜೀವಿತಂ’ಗೆ ಟ್ಯೂನ್ಸ್ ನೀಡುವುದನ್ನು ರಹ್ಮಾನ್ ಈಗಾಗಲೇ ದೃಢಪಡಿಸಿದ್ದಾರೆ. ಮಲಯಾಳಂನ ಜನಪ್ರಿಯ ಸಾಹಿತಿ ಬೆನ್ಯಾಮಿನ್‌ರ ಕಾದಂಬರಿಯನ್ನು ಆಧರಿಸಿದ ಈ ಚಿತ್ರಕ್ಕೆ ಬ್ಲೆಸ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ್ಜಾರೆ.

‘ಆಡುಜೀವಿತಂ’ ಅದ್ಭುತ ಹಾಗೂ ಸುಂದರ ಕಥೆಯನ್ನು ಹೊಂದಿದ್ದು, ಈ ಕಾರಣಕ್ಕಾಗಿಯೇ ಅದಕ್ಕೆ ಸಂಗೀತ ನೀಡಲು ಒಪ್ಪಿಕೊಂಡೆ ಎಂದು ರಹ್ಮಾನ್ ಹೇಳಿಕೊಂಡಿದ್ದಾರೆ. ಈ ಮಧ್ಯೆ ರಹ್ಮಾನ್ ಸಂಗೀತ ನೀಡಿರುವ ಬಿಗ್‌ಬಜೆಟ್ ಚಿತ್ರ ‘ಯಂದಿರನ್ 2.0’ ಎಪ್ರಿಲ್‌ನಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ. ಸದ್ಯವೇ ಸೆಟ್ಟೇರಲಿರುವ ತಮಿಳಿನ ಜನಪ್ರಿಯ ನಟ ಶಿವಕಾರ್ತಿಕೇಯನ್ ಅಭಿನಯದ ಚಿತ್ರಕ್ಕೂ ರಹ್ಮಾನ್ ಸಂಗೀತ ನೀಡಲಿದ್ದಾರೆ. ಇಳಯದಳಪತಿ ವಿಜಯ್ ಅಭಿನಯದ ಹೊಸ ಚಿತ್ರಕ್ಕೂ ಅವರು ಸಂಗೀತ ಸಂಯೋಜಿಸಲಿದ್ದಾರೆ.

ಅಂದಹಾಗೆ, ಮಲಯಾಳಂನಲ್ಲಿ ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ‘ರಂಡಾಮೂಳಂ’ ಚಿತ್ರದ ನಿರ್ದೇಶಕ ಶ್ರೀಕುಮಾರ್ ಮೆನನ್‌ಕೂಡಾ ರಹ್ಮಾನ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮತ್ತೊಮ್ಮೆ ರಹ್ಮಾನ್ ಯುಗ ಶುರುವಾದಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News