ನೆತನ್ಯಾಹು ವಿರುದ್ಧ ಪ್ರತಿಭಟನೆಗೆ ಜೆಯುಎಚ್‌ಗೆ ಅನುಮತಿ ನಿರಾಕರಣೆ

Update: 2018-01-19 15:18 GMT

ಅಹ್ಮದಾಬಾದ್, ಜ.19: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಪ್ರತಿಭಟನೆ ನಡೆಸಲು ಜಮೀಯತ್ ಉಲಮಾ -ಇ-ಹಿಂದ್ (ಜೆಯುಎಚ್)ಸಂಘಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಯಾವುದೇ ಕಾರಣ ನೀಡದೆ ಅಹ್ಮದಾಬಾದ್ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಅಲ್ಲದೆ ಕಾನ್ಪುರದಲ್ಲಿರುವ ಜೆಯುಎಚ್‌ನ ರಾಜ್ಯಕಚೇರಿಯಲ್ಲಿ ನಡೆಯುತ್ತಿದ್ದ ಪತ್ರಿಕಾಗೋಷ್ಟಿಗೆ ಪೊಲೀಸರು ತಡೆಯೊಡ್ಡಿದ್ದಾರೆ. ಜೆಯುಎಚ್ ಕಚೇರಿಯ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜೆಯುಎಚ್ ಪ್ರಕಟನೆಯಲ್ಲಿ ತಿಳಿಸಿದೆ.

   ಜೊತೆಗೆ, ಜೆಯುಎಚ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಫ್ತಿ ಅರ್ಶದ್‌ರನ್ನು ಗಾಯಕ್‌ವಾಡ್ ಪೊಲೀಸ್ ಠಾಣೆಯಲ್ಲಿ ಸಂಜೆ 4ರವರೆಗೆ ಇರಿಸಿಕೊಂಡು ಪೀಡನೆ ನೀಡಲಾಗಿದೆ. ಸಂಜೆ ಜೆಯುಎಚ್‌ನ ನಿಯೋಗ ಠಾಣೆಗೆ ತೆರಳಿದ ಬಳಿಕವಷ್ಟೇ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜೆಯುಎಚ್‌ನ ಮಾಧ್ಯಮ ವಕ್ತಾರ ಅಝೀಮುಲ್ಲಾ ಸಿದ್ದಿಖಿ ಆರೋಪಿಸಿದ್ದಾರೆ.

ಆದರೆ ಇಷ್ಟೆಲ್ಲಾ ಅಡ್ಡಿ ಆತಂಕಗಳ ಮಧ್ಯೆಯೂ ಜೆಯುಎಚ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹ್ಮೂದ್ ಮದನಿಯವರ ಸೂಚನೆ ಮೇರೆಗೆ ಸಂಘಟನೆಯ ರಾಜ್ಯ ಮುಖಂಡರು ರಾಜ್ಯ ಕಚೇರಿಯಲ್ಲಿ ಒಟ್ಟುಸೇರಿ ನೆತನ್ಯಾಹು ಭೇಟಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ ನಿಗದಿತ ಸಮಯದಲ್ಲೇ ಸುದ್ದಿಗೋಷ್ಟಿ ನಡೆಸಲಾಗಿದೆ.

ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಜೆಯುಎಚ್ ಮುಖಂಡರು, ಅನುಮತಿ ನಿರಾಕರಿಸಿರುವ ಸ್ಥಳೀಯ ಪೊಲೀಸ್ ಅಧಿಕಾರಿಗಳ ಕ್ರಮವನ್ನು ಟೀಕಿಸಿದರು. ದಿಲ್ಲಿ ಹಾಗೂ ಮುಂಬೈಯಲ್ಲಿ ನೆತನ್ಯಾಹು ವಿರುದ್ಧ ಪ್ರತಿಭಟನೆ ನಡೆದಿರುವಾಗ, ಅಹ್ಮದಾಬಾದ್‌ನಲ್ಲಿ ಪ್ರತಿಭಟನೆ ನಡೆಸಲು ಯಾಕೆ ಅನುಮತಿ ನಿರಾಕರಿಸಲಾಗಿದೆ ಎಂದವರು ಪ್ರಶ್ನಿಸಿದರು.

“ನಮ್ಮನ್ನು ಕಚೇರಿಯಲ್ಲೇ ಕುಳಿತಿರಲು ಬಲವಂತಪಡಿಸಿ ಪೊಲೀಸರು ಕಚೇರಿಯ ಸುತ್ತ ಸರ್ಪಗಾವಲು ವಿಧಿಸಿರುವುದು ತುರ್ತುಪರಿಸ್ಥಿತಿಯನ್ನು ನೆನಪಿಸುತ್ತದೆ” ಎಂದು ಜೆಯುಎಚ್ ಮುಖಂಡರು ಹೇಳಿದರು.

   “ಮಹಾತ್ಮಾಗಾಂಧಿಯವರ ಈ ನೆಲದಲ್ಲಿ ಕೈಗಳಿಗೆ ಅಮಾಯಕ ಜನರ ರಕ್ತ ಮೆತ್ತಿಕೊಂಡಿರುವ ರಾಷ್ಟ್ರವೊಂದರ ನಾಯಕನ ಆಗಮನವನ್ನು ನಾವು ಸ್ವಾಗತಿಸುವುದಿಲ್ಲ. ಗಾಂಧೀಜಿ ತಮ್ಮ ಕೊನೆಯುಸಿರಿನ ವರೆಗೆ ಇಸ್ರೇಲ್‌ನ ವಿಸ್ತಾರವಾದ ಹಾಗೂ ಕ್ರೂರ ಸಿದ್ಧಾಂತವನ್ನು ವಿರೋಧಿಸಿದ್ದರು. ಆದರೆ ಈಗ ಅವರ ಪೂರ್ವಾಧಿಕಾರಿಗಳು ಈ ಚಾರಿತ್ರಿಕ ಸಂಪ್ರದಾಯಕ್ಕೆ ವಿಶ್ವಾಸದ್ರೋಹ ಎಸಗುತ್ತಿದ್ದಾರೆ. ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ನಮ್ಮ ದೇಶದ ಹಲವು ನಾಯಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಇಂತಹ ಸಾಮ್ರಾಜ್ಯಶಾಹಿ ರಾಷ್ಟ್ರದ ಮುಖಂಡರಿಗೆ ಇದೇ ರೀತಿಯ ಮನಸ್ಥಿತಿ ಇರುವ ನಾಯಕರು ಹಸ್ತಲಾಘವ ನೀಡುತ್ತಿರುವುದು ವಿಪರ್ಯಾಸವಾಗಿದೆ” ಎಂದು ಟೀಕಿಸಿದ್ದಾರೆ. ಮುಂದಿನ ವರ್ಷ(2019ರಲ್ಲಿ) ಜಲಿಯನ್‌ವಾಲಾ ಬಾಗ್ ಸಾಮೂಹಿಕ ಹತ್ಯಾಕಾಂಡದ ಶತಮಾನೋತ್ಸವ ಸಂದರ್ಭದಲ್ಲಿ , ವಿವೇಚನಾರಹಿತರಾಗಿ ಅಮಾಯಕ ಮಕ್ಕಳನ್ನು ಹತ್ಯೆಮಾಡಿದ ಕುಖ್ಯಾತಿ ಪಡೆದಿರುವ ಮುಖಂಡನನ್ನು ಹೇಗೆ ಸ್ವಾಗತಿಸಲು ಸಾಧ್ಯ ಎಂದು ಮುಖಂಡರು ಪ್ರಶ್ನಿಸಿದ್ದಾರೆ.

ಮೌಲಾನಾ ಹಕೀಮುದ್ದೀನ್ ಖಾಸ್ಮಿ, ನಿಸಾರ್ ಅಹ್ಮದ್ ಅನ್ಸಾರಿ, ಮುಫ್ತಿ ಅಸದ್ ಖಾಸ್ಮಿ ಮುಂತಾದ ಮುಖಂಡರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

 ಈ ಮಧ್ಯೆ, ಸುದ್ದಿಗೋಷ್ಟಿ ರದ್ದಾಗಿದೆ ಎಂದು ಅಹ್ಮದಾಬಾದ್ ಪೊಲೀಸರು ಹಲವು ಮಾಧ್ಯಮ ಸಂಸ್ಥೆಗಳಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂದೂ ಎಂಯುಎಚ್ ಮುಖಂಡರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News