ಮಂಗಳದ ಅಂಗಳದಲ್ಲಿ ವಿದ್ಯುತ್

Update: 2018-01-20 04:56 GMT

ವಾಶಿಂಗ್ಟನ್, ಜ. 19: ಜೀವಿಗಳ ವಾಸಕ್ಕೆ ಯೋಗ್ಯವಲ್ಲದ ಮಂಗಳ ಗ್ರಹದಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ದೀರ್ಘಾವಧಿ ಮಾನವ ವಾಸ ಯೋಜನೆಗಾಗಿ ವಿನ್ಯಾಸಗೊಳಿಸಲಾಗಿರುವ ಕಿರಿದಾದ ಪರಮಾಣು ವಿದ್ಯುತ್ ವ್ಯವಸ್ಥೆಯ ಆರಂಭಿಕ ಪರೀಕ್ಷೆಗಳನ್ನು ನೆವಾಡದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಹಾಗೂ ಪೂರ್ಣ ಪ್ರಮಾಣದ ವಿದ್ಯುತ್ ಹರಿವು ಪರೀಕ್ಷೆ ಮಾರ್ಚ್‌ನಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

ನ್ಯಾಶನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ) ಮತ್ತು ಅಮೆರಿಕದ ಇಂಧನ ಇಲಾಖೆ ಅಧಿಕಾರಿಗಳು ಲಾಸ್ ವೇಗಸ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ‘ಕಿಲೋಪವರ್’ ಯೋಜನೆಯ ನ್ಯೂಕ್ಲಿಯರ್ ಫಿಶನ್ ವ್ಯವಸ್ಥೆ ಅಭಿವೃದ್ಧಿಯ ಬಗ್ಗೆ ವಿವರಗಳನ್ನು ನೀಡಿದರು.

ತಿಂಗಳುಗಳ ಅವಧಿಯ ಪ್ರಾಯೋಗಿಕ ಪರೀಕ್ಷೆ ಇಂಧನ ಇಲಾಖೆಯ ನೆವಾಡದಲ್ಲಿರುವ ನ್ಯಾಶನಲ್ ಸೆಕ್ಯುರಿಟಿ ಸೈಟ್‌ನಲ್ಲಿ ನವೆಂಬರ್‌ನಲ್ಲಿ ಆರಂಭಗೊಂಡಿತ್ತು. ಬಾಹ್ಯಾಕಾಶ ಮತ್ತು ಮಂಗಳ ಗ್ರಹದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಖಗೋಳ ಮತ್ತು ರೋಬಟ್ ಕಾರ್ಯಕ್ರಮಗಳಿಗೆ ಇಂಧನ ಒದಗಿಸುವುದಕ್ಕಾಗಿ ಈ ಪರೀಕ್ಷೆಗಳನ್ನು ನಡೆಸಲಾಯಿತು.

ಬಾಹ್ಯ ಗ್ರಹ ಅಥವಾ ಚಂದ್ರನ ಮೇಲೆ ದೀರ್ಘಾವಧಿ ಮಾನವ ವಾಸ ಸಾಧ್ಯವಾಗಬೇಕಾದರೆ, ಶಿಬಿರವನ್ನು ಆಧರಿಸುವಷ್ಟು ಪ್ರಮಾಣದಲ್ಲಿ ವಿದ್ಯುತ್ ಪೂರೈಸುವ ಮೂಲವೊಂದರ ಅಗತ್ಯವಿದೆ. ಅದೇ ವೇಳೆ, ಆ ವಿದ್ಯುತ್ ಮೂಲವು ಬಾಹ್ಯಾಕಾಶ ಮೂಲಕ ಸಾಗಿಸುವಷ್ಟು ಕಿರಿದು ಹಾಗು ಹಗುರವಾಗಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News