ಸಯೀದ್ ವಿರುದ್ಧ ಕ್ರಮ ತೆಗೆದುಕೊಳ್ಳಿ

Update: 2018-01-19 17:14 GMT

ವಾಶಿಂಗ್ಟನ್, ಜ. 19: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಫೀಝ್ ಸಯೀದ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಹೇಳಿರುವಂತೆಯೇ, ‘ಕಾನೂನಿನ ಸಂಪೂರ್ಣ ಸಾಧ್ಯತೆ’ಗಳಿಗೆ ಅನುಗುಣವಾಗಿ ವಿಶ್ವಸಂಸ್ಥೆ ಘೋಷಿತ ಭಯೋತ್ಪಾದಕನನ್ನು ವಿಚಾರಣೆಗೆ ಗುರಿಪಡಿಸುವಂತೆ ಅಮೆರಿಕ ಕರೆ ನೀಡಿದೆ.

ಮಂಗಳವಾರ ‘ಜಿಯೋ ಟಿವಿ’ಗೆ ನೀಡಿದ ಸಂದರ್ಶನವೊಂದರಲ್ಲಿ, ಭಯೋತ್ಪಾದಕ ಸಯೀದ್‌ನನ್ನು ಪಾಕ್ ಪ್ರಧಾನಿ ‘ಸಾಹಿಬ್’ ಎಂಬುದಾಗಿ ಸಂಭೋದಿಸಿದ್ದರು.

‘‘ಪಾಕಿಸ್ತಾನದಲ್ಲಿ ಹಫೀಝ್ ಸಯೀದ್ ಸಾಹಿಬ್ ವಿರುದ್ಧ ಯಾವುದೇ ಪ್ರಕರಣವಿಲ್ಲ. ಪ್ರಕರಣವಿದ್ದಾಗ ಮಾತ್ರ ಕ್ರಮ ತೆಗೆದುಕೊಳ್ಳಲು ಸಾಧ್ಯ’’ ಎಂದು ಪಾಕ್ ಪ್ರಧಾನಿ ಹೇಳಿದ್ದರು.

ಈ ಹೇಳಿಕೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಹೆದರ್ ನೋವರ್ಟ್, ಸಯೀದ್ ವಿರುದ್ಧ ವಿಚಾರಣೆ ನಡೆಯಬೇಕು ಎಂಬುದಾಗಿ ಅಮೆರಿಕ ಭಾವಿಸುತ್ತದೆ ಹಾಗೂ ಇದನ್ನೇ ಪಾಕಿಸ್ತಾನಕ್ಕೆ ಹೇಳಲಾಗಿದೆ ಎಂದರು.

‘‘ಕಾನೂನಿನ ಸಂಪೂರ್ಣ ಸಾಧ್ಯತೆಗಳಿಗೆ ಅನುಗುಣವಾಗಿ ಅವನ ವಿರುದ್ಧ ವಿಚಾರಣೆ ನಡೆಯಬೇಕೆಂದು ನಾವು ಭಾವಿಸುತ್ತೇವೆ. ವಿದೇಶಿ ಭಯೋತ್ಪಾದಕ ಸಂಘಟನೆ ಎಂಬುದಾಗಿ ಸಾಬೀತಾಗಿರುವ ಲಷ್ಕರ್ ಎ ತೊಯ್ಬಾ ಜೊತೆ ಸಂಬಂಧ ಹೊಂದಿರುವುದಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆತನನ್ನು ಭಯೋತ್ಪಾದಕ ಎಂಬುದಾಗಿ ಘೋಷಿಸಿದೆ’’ ಎಂದು ಗುರುವಾರ ತನ್ನ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ನೋವರ್ಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News