ಭಯ ಜಿಗ್ನೇಶ್ ಮೇವಾನಿಯಲ್ಲ...! ಬದಲಾಗಿ ಆತ ರೂಪಿಸಿದ ತಾತ್ವಿಕತೆ

Update: 2018-01-19 18:31 GMT

ಜಿಗ್ನೇಶ್ ಮೇವಾನಿ ಭಾರತೀಯ ರಾಜಕಾರಣದಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ರಾಜಕೀಯ ನಾಯಕ. ಸತ್ತ ದನದ ಚರ್ಮ ಸುಲಿಯುತ್ತಿದ್ದ ಗುಜರಾತ್ ದಲಿತರ ಮೇಲೆ ಅಲ್ಲಿನ ಸೌರಾಷ್ಟ್ರ ಪ್ರಾಂತದ ಉನಾ ಗ್ರಾಮದಲ್ಲಿ ನಡೆದ ಮಾರಣಾಂತಿಕ ಸಾರ್ವಜನಿಕ ಹಲ್ಲೆಯಿಂದ ಹುಟ್ಟಿದ ತಳಸಮುದಾಯದ ಆಕ್ರೋಶವನ್ನು ಉನಾ ಚಳವಳಿಯಾಗಿ ರೂಪಿಸಿ ಒಟ್ಟು ದಲಿತ ಹೋರಾಟಕ್ಕೆ ವಿಭಿನ್ನ ನೆಲೆಗಟ್ಟನ್ನು ಒದಗಿಸಿದ ಯುವ ನಾಯಕ.

 ಕೇವಲ ಧರ್ಮದ ಕುರಿತ ಬೃಹತ್ ಕಥನಗಳು ಭಾರತದ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಜನರನ್ನು ಆಕರ್ಷಿಸಿಬಿಡುತ್ತವೆ ಎನ್ನುವ ಅಭಿಪ್ರಾಯ ರೂಪುಗೊಳ್ಳುತ್ತಿದ್ದ ಸಮಯದಲ್ಲಿ ಹಿಂದೂ ಧಾರ್ಮಿಕತೆಯ ಕುರಿತು ಈ ಸಮಾಜದ ಸಹಜ ಬದುಕಿನೊಂದಿಗೆ ಯಾವ ಅರ್ಥದಲ್ಲಿಯೂ ಹೊಂದಿಕೆಯಾಗದ ಹಿಂದುತ್ವವಾದಿಗಳು ಮುಂದಿಡುವ ಬೃಹತ್ ಕಥನಗಳನ್ನು ಒಡೆದು ಹಾಕಿದ ಕೀರ್ತಿ ಜಿಗ್ನೇಶ್ ಮೇವಾನಿಗೆ ಸಲ್ಲುತ್ತದೆ.

ಇಷ್ಟೆಲ್ಲಾ ಹಿನ್ನೆಲೆ ಇರುವ ಈ ಯುವನಾಯಕ ಹುಟ್ಟಿದ್ದು ಡಿಸೆಂಬರ್ 11, 1982ರಂದು ಗುಜರಾತಿನ ಅಹ್ಮದಾಬಾದ್ ನಗರದಲ್ಲಿ. ಬಿಎ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮತ್ತು ಕಾನೂನು ಪದವಿಯನ್ನು ಪಡೆದಿರುವ ಮೇವಾನಿ, 2004ರಿಂದ 2007ರ ವರೆಗೆ ಗುಜರಾತಿ ಭಾಷೆಯ ‘ಅಭಿಯಾನ’ ಪತ್ರಿಕೆಯಲ್ಲಿ ಪರ್ತಕರ್ತನಾಗಿ ಕೆಲಸ ಮಾಡಿದ್ದಾರೆ. ಪದವಿಯಾಗಿ ಕಾನೂನು ಕಲಿತದ್ದು, ವೃತ್ತಿಯಾಗಿ ಪತ್ರಕರ್ತನಾಗಿ ಕ್ಷೇತ್ರ ಅನುಭವ ಪಡೆದ ಕಾರಣಕ್ಕೆ ಸಮಾಜದ ಎಲ್ಲಾ ಮಗ್ಗುಲುಗಳನ್ನು ವೈಜ್ಞಾನಿಕವಾಗಿ ನೋಡುವ ದೃಷ್ಟಿಕೋನವೊಂದು ಮೇವಾನಿಯವರ ಪಾಲಿಗೆ ತನ್ನ ಬದುಕಿನ ಭಾಗವಾಗಿ ದಕ್ಕಿತ್ತು ಅನ್ನಿಸುತ್ತದೆ.

ಆ ಕಾರಣಕ್ಕಾಗಿಯೇ ಉನಾ ಘಟನೆಯ ನಂತರ ಹುಟ್ಟಿದ ಆಕ್ರೋಶವನ್ನು ಸಮರ್ಥವಾಗಿ ಕ್ರೋಡೀಕರಿಸಿಕೊಂಡು ‘‘ನಿಮ್ಮ ದನದ ಬಾಲ ನೀವೇ ಇಟ್ಟುಕೊಳ್ಳಿ ನಮಗೆ ನಮ್ಮ ಭೂಮಿ ಕೊಡಿ’’ ಎಂಬ ಘೋಷ ವಾಕ್ಯದೊಂದಿಗೆ ಗುಜರಾತಿನ ಬೀದಿ ಬೀದಿಗಳಲ್ಲಿ ಹೋರಾಟವನ್ನು ಕಟ್ಟಿ ಆಳುವ ವರ್ಗದ ಎದುರು ನಿಲ್ಲಿಸಲು ಕೇವಲ 35 ವರ್ಷ ವಯಸ್ಸಿನ ಈ ಹುಡುಗನಿಗೆ ಸಾಧ್ಯವಾಗಿತ್ತು.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ, ದೇಶದ ದಲಿತ ಚಳವಳಿ ತನ್ನ ಹೋರಾಟಕ್ಕೆ ರೂಪಿಸಿಕೊಂಡಿದ್ದ ತಾತ್ವಿಕತೆಯಲ್ಲಿನ ಸಾಂಪ್ರದಾಯಿಕ ನೋಟಕ್ರಮ ಮತ್ತು ಅದರಿಂದ ಹುಟ್ಟಿದ ಅಸ್ಪಷ್ಟತೆಯ ಕಾರಣಕ್ಕೆ ಸೊರಗಿದಂತೆ ಕಾಣುತ್ತಿದ್ದ ಹೊತ್ತಿನಲ್ಲಿ ಜಿಗ್ನೇಶ್ ಉನಾ ಹೋರಾಟದ ಭಾಗವಾಗಿ ಹೊರಡಿಸಿದ ಘೋಷಣೆ ದಲಿತ ಚಳವಳಿಯ ಪಾಲಿಗೆ ಹೊಸ ಆಶಾವಾದವನ್ನು ಹುಟ್ಟುಹಾಕಿತ್ತು.

ಏಕೆಂದರೆ ಈ ಘೋಷಣೆ ಏಕಕಾಲದಲ್ಲಿ ಈ ನೆಲದ ತಳಸಮುದಾಯಗಳನ್ನು ಜಾತಿ ಮತ್ತು ವರ್ಗ ಎರಡೂ ಅರ್ಥದಲ್ಲಿ ಶೋಷಿಸುತ್ತಿದ್ದ ಜನರಿಗೆ ನುಂಗಲಾರದ ತುತ್ತಾಗಿತ್ತು ‘‘ನಿಮ್ಮ ದನದ ಬಾಲವನ್ನು ನೀವು ಇಟ್ಟುಕೊಳ್ಳಿ’’ ಎಂಬುದು ಜಾತಿಯಾಗಿ ದಲಿತರ ಕುರಿತ ಸಾಂಪ್ರದಾಯಿಕ ಲೋಕದೃಷ್ಟಿಯನ್ನು ನಿರಾಕರಿಸುತ್ತಿದ್ದರೆ, ‘‘ನಮ್ಮ ಭೂಮಿ ನಮಗೆ ಕೊಡಿ’’ ಎಂಬ ಘೋಷಣೆ ಒಂದು ವರ್ಗವಾಗಿ ಸಂಪನ್ಮೂಲ ಹಂಚಿಕೆಯಲ್ಲಿನ ಅಸಮಾನತೆಯ ಪ್ರಶ್ನೆಯನ್ನು ಮುಂಚೂಣಿಗೆ ತಂದಿತ್ತು. ಒಂದು ಅರ್ಥದಲ್ಲಿ ಈ ನೋಟಕ್ರಮ ಚಾರಿತ್ರಿಕವಾಗಿ ಸೃಷ್ಟಿಯಾದ ತಳವರ್ಗಗಳ ಸಮಸ್ಯೆಯನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳುವಷ್ಟು ಪ್ರಬಲವಾಗಿತ್ತು. ಆ ಕಾರಣಕ್ಕೆ ಗುಜರಾತಿನ ದಲಿತರು ಬೀದಿಗಿಳಿದು ತಮ್ಮ ಕುರಿತ ಜಾತಿ ಪ್ರಧಾನ ಸಮಾಜದ ಸಾಂಪ್ರದಾಯಿಕ ನೋಟಕ್ರಮವನ್ನು ಧಿಕ್ಕರಿಸಿ ಸತ್ತ ದನದ ದೇಹಗಳನ್ನು ವಿಲೇವಾರಿ ಮಾಡುವುದನ್ನು ನಿಲ್ಲಿಸಿಬಿಟ್ಟರು. ಗುಜರಾತಿನ ದಲಿತರ ಪಾಲಿಗೆ ಇದು ಕೇವಲ ವೃತ್ತಿ ನಿಲ್ಲಿಸುವ ಸಂಗತಿ ಮಾತ್ರ ಆಗಿರಲಿಲ್ಲ. ಬದಲಾಗಿ ತಮ್ಮ ಕುರಿತು ಸಮಾಜಕ್ಕೆ ಇದ್ದ ಅಮಾನುಷವಾದ ಸಂಕುಚಿತ/ಕೀಳಾದ ನೋಟಕ್ರಮವನ್ನು ಪ್ರಶ್ನಿಸುವ ಚೈತನ್ಯವನ್ನೂ ಈ ಹೋರಾಟ ರೂಪಿಸಿತ್ತು.

ಪರಿಣಾಮ ದಲಿತರ ಕುರಿತಾದ ಸಾಂಪ್ರದಾಯಿಕ ಗ್ರಹಿಕೆಯ ನಿರಾಕರಣೆ ಮತ್ತು ತಮಗೆ ನ್ಯಾಯವಾಗಿ ಧಕ್ಕಬೇಕಾದ ಸಾಂವಿಧಾನಿಕ ಹಕ್ಕು ಮತ್ತು ಅವಕಾಶಗಳ ಹೋರಾಟವಾಗಿ ಉನಾ ಚಳವಳಿ ರೂಪಪಡೆದಿತ್ತು ಇಷ್ಟು ಸ್ಪಷ್ಟವಾಗಿ ಆ ಚಳವಳಿಯನ್ನು ರೂಪಿಸಿದ್ದು ಜಿಗ್ನೇಶ್ ಮೇವಾನಿಯವರಿಗೆ ಇದ್ದ ಚಾರಿತ್ರಿಕ ಸ್ಪಷ್ಟತೆ.

ಈ ಎಲ್ಲಾ ಹೋರಾಟದ ಪರಿಣಾಮ ಇಂದು ಜಿಗ್ನೇಶ್ ಮೇವಾನಿ ಗುಜರಾತಿನ ವಡಗಾವ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಆ ಕ್ಷೇತ್ರದಲ್ಲಿ ಕಾಂಗ್ರೇಸ್ ಜಿಗ್ನೇಶ್‌ನ್ನು ಬೆಂಬಲಿಸಿದ್ದರೆ ದಲಿತ ಅಸ್ಮಿತೆಯನ್ನು ಪ್ರಮುಖವಾಗಿ ಆಧರಿಸಿರುವ ಮಾಯಾವತಿಯವರ ಬಿಎಸ್ಪಿಜಿಗ್ನೇಶ್ ವಿರುದ್ಧ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಈ ಒಟ್ಟು ಬೆಳವಣಿಗೆ ಭಾರತದಲ್ಲಿನ ದಲಿತ ರಾಜಕೀಯದ ಕುರಿತು ಹಲವಾರು ಒಳನೋಟಗಳನ್ನು ನೀಡುತ್ತಿದೆ.

ಜಿಗ್ನೇಶ್ ಯಾವುದೇ ಪಕ್ಷ ಸೇರದೆ ಎಲ್ಲರ ಬೆಂಬಲ ಕೋರಿ ಸ್ವತಂತ್ರ ಸ್ಪರ್ಧೆಗಾಗಿ ಆರಿಸಿಕೊಂಡ ಮಾದರಿ ಭಾರತದ ತಳವರ್ಗಗಳ ಚಳವಳಿಗಳ ಪಾಲಿಗೆ ಹೊಸ ಭರವಸೆಯಾಗಿ ಕಾಣುತ್ತಿದೆ. ಜಾತಿ/ವರ್ಗ ಪ್ರಜ್ಞೆ ಮತ್ತು ಊಳಿಗಮಾನ್ಯ ಮೌಲ್ಯಗಳಿಂದ ಪ್ರಬಲವಾಗಿರುವ ಬಹುತೇಕ ರಾಷ್ಟ್ರೀಯ ಪಕ್ಷಗಳಿಗೆ ದಲಿತ ಅಸ್ಮಿತೆಯ ಪ್ರತ್ಯೇಕ ಗುರುತಿಸುವಿಕೆಯನ್ನು ಮತ್ತು ಶಕ್ತಿಯನ್ನು ಅವರುಗಳ ಹೊರಗಿದ್ದು ತೋರಿಸಬಹುದು ಎಂಬ ಭಿನ್ನವಿದ್ದು ಬೆರೆಯಬಹುದಾದ ಹೊಸ ಲೋಕದೃಷ್ಟಿಯನ್ನು ಜಿಗ್ನೇಶ್ ಮೇವಾನಿ ಎಂಬ ಯುವ ನಾಯಕ ತೋರಿಸಿಕೊಟ್ಟಿದ್ದಾರೆ. ವ್ಯಕ್ತಿಗತ ವಿಜಯದ ಆಚೆಗೆ ಸಮುದಾಯಗಳ ಸಂಘಟನೆಯ ದೃಷ್ಟಿಯಿಂದ ಈ ತಂತ್ರ ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಎಲ್ಲಾ ಕಾರಣಕ್ಕೆ ಇಂದು ಭಾರತದ ಕೆಲವು ನಿರ್ದಿಷ್ಟ ಮಾಧ್ಯಮಗಳ ಪಾಲಿಗೆ ಮೇವಾನಿಯ ವಿಜಯ ಒಂದು ಆಶ್ಚರ್ಯದಂತೆ, ಅನರ್ಹ ವಿಜಯದಂತೆ ಭಾಸವಾಗುತ್ತಿದೆ. ಪರಿಣಾಮ ವಿಧಾನಸಭೆಗೆ ಆಯ್ಕೆಯಾದ ದಿನದಿಂದ ನಿರಂತರವಾದ ಅಕ್ಷರ ದಾಳಿಯನ್ನು ಜಿಗ್ನೇಶ್ ಮೇಲೆ ಮಾಡಲಾಗುತ್ತಿದೆ. ಒಂದು ಅರ್ಥದಲ್ಲಿ ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಸ್ವತಂತ್ರವಾಗಿ ಗೆದ್ದ ಅಭ್ಯರ್ಥಿಯನ್ನು ರಾಷ್ಟ್ರೀಯ ಮಾಧ್ಯಮಗಳು ಈ ಪರಿ ಕಾಡಿದ್ದು ಇದೇ ಮೊದಲಿರಬೇಕು. ಇದಕ್ಕೆ ಕಾರಣ ಖಂಡಿತ ಜಿಗ್ನೇಶ್ ವಿಜಯ, ಆತನ ಶಾಸಕ ಸ್ಥಾನ ಯಾವುದೂ ಅಲ್ಲ..!

ಬದಲಾಗಿ ಉನಾ ಹೋರಾಟದ ಮೂಲಕ ಜಿಗ್ನೇಶ್ ಕಟ್ಟಿದ ದಲಿತ ಹೋರಾಟದ ತಾತ್ವಿಕತೆ ಅವರನ್ನು ಕಾಡುತ್ತಿದೆ. ಒಂದು ವೇಳೆ ಆ ತಾತ್ವಿಕತೆ ದೇಶದ ತುಂಬಾ ಹಬ್ಬಿ ದೇಶದ ಒಟ್ಟು ತಳಸಮುದಾಯ ತಮ್ಮ ಕುರಿತಾದ ಸಾಂಪ್ರದಾಯಿಕ ಗ್ರಹಿಕೆ, ಅದರ ಭಾಗವಾದ ಉದ್ಯೋಗದ ನಿರಾಕರಣೆ ಮತ್ತು ತಮಗೆ ನಾಗರಿಕರಾಗಿ ನ್ಯಾಯವಾಗಿ ದಕ್ಕಬೇಕಾದ ಸಾಂವಿಧಾನಿಕ ಹಕ್ಕು ಮತ್ತು ಅವಕಾಶಗಳ ಹೋರಾಟವಾಗಿ ರೂಪುಗೊಂಡರೆ ಉಳ್ಳವರ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಅತಂಕ ಅವರನ್ನು ಕಾಡುತ್ತಿದೆ. ಆ ಕಾರಣಕ್ಕೆ ಅವರು ಜಿಗ್ನೇಶ್ ಅವರನ್ನು ಅನೈತಿಕಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ನೆಲದಲ್ಲಿನ ಸಮುದಾಯ ಶೋಷಣೆಯ ಚಾರಿತ್ರಿಕ ಬೆಳವಣಿಗೆಯ ಕುರಿತು, ಬದಲಾದ ಶೋಷಣೆಯ ವಿವಿಧ ಮಾದರಿಗಳ ಕುರಿತು ಸ್ಪಷ್ಟತೆ ಇರುವ ಏಕಾಂಗಿ ಮೇವಾನಿ ಖಂಡಿತ ಈ ಹುಸಿ ಚಕ್ರವ್ಯೆಹ ಭೇದಿಸುತ್ತಾನೆ ಎಂಬ ಆಶಾವಾದವನ್ನು ತಳವರ್ಗ ಕಳೆದುಕೊಂಡಿಲ್ಲ.

Writer - ಡಾ. ಕಿರಣ್ ಎಂ. ಗಾಜನೂರು

contributor

Editor - ಡಾ. ಕಿರಣ್ ಎಂ. ಗಾಜನೂರು

contributor

Similar News